ಎಲ್ಐಸಿಯಲ್ಲಿ ಕ್ಲೈಮ್ ಮಾಡದ 880.93 ಕೋಟಿ ರೂ.ಗಳ ವಿಮಾ ಹಣ ಉಳಿದಿದೆ. ಮೆಚ್ಯೂರಿಟಿ, ಪ್ರೀಮಿಯಂ ಸ್ಥಗಿತ ಅಥವಾ ಮರಣದ ನಂತರ ಕ್ಲೈಮ್ ಮಾಡದ ಹಣ 10 ವರ್ಷ ಮೀರಿದರೆ ಸರ್ಕಾರದ ನಿಧಿಗೆ ವರ್ಗಾಯಿಸಲಾಗುತ್ತದೆ. ಪಾಲಿಸಿದಾರರು ಎಲ್ಐಸಿ ವೆಬ್‌ಸೈಟ್‌ನಲ್ಲಿ ಪಾಲಿಸಿ ವಿವರಗಳನ್ನು ನಮೂದಿಸಿ ಕ್ಲೈಮ್ ಮಾಡದ ಹಣದ ಬಗ್ಗೆ ಪರಿಶೀಲಿಸಬಹುದು. ಕ್ಲೈಮ್ ಪ್ರಕ್ರಿಯೆಗೆ ಅಗತ್ಯ ದಾಖಲೆಗಳೊಂದಿಗೆ ಎಲ್ಐಸಿ ಕಚೇರಿ ಸಂಪರ್ಕಿಸಿ.
ಇಂದು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮದಲ್ಲಿ (LIC) ಪಾಲಿಸಿ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಹಿಂದೆ ಸತ್ತ ಬಳಿಕವಷ್ಟೇ ಆ ಹಣವು ಅವರ ವಾರಸುದಾರರಿಗೆ ಸಿಗುತ್ತಿತ್ತು. ಇದಕ್ಕಾಗಿ ವಿಮೆಯ ಸೌಲಭ್ಯ ಪಡೆಯಬೇಕು ಎಂದರೆ ಸಾಯಬೇಕಲ್ಲಪ್ಪಾ ಎಂದು ತಮಾಷೆಯನ್ನೂ ಮಾಡಲಾಗುತ್ತಿತ್ತು. ಆದರೆ ಇಂದು ಹಾಗಲ್ಲ. ಹಲವಾರು ಯೋಜನೆಗಳನ್ನು ಎಲ್ಐಸಿ ಜಾರಿಗೊಳಿಸಿದೆ. ಮಕ್ಕಳಿಗೆ, ದೊಡ್ಡವರಿಗೆ, ಹಿರಿಯ ನಾಗರಿಕರಿಗೆ, ವಿದ್ಯಾಭ್ಯಾಸಕ್ಕೆ, ಮದುವೆಗೆ, ನಿವೃತ್ತರಾದ ಬಳಿಕ... ಹೀಗೆ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಆದರೆ ಕೆಲವರು ವಿಮೆಯ ಹಣವನ್ನು ಕಟ್ಟುತ್ತಿದ್ದರೂ ಅದು ಮೆಚ್ಯುರ್ ಆಗಿದೆಯೋ, ಇಲ್ಲವೋ ಎನ್ನುವುದು ತಿಳಿದೇ ಇರುವುದಿಲ್ಲ. ಪಾಲಿಸಿದಾರರಿಗೆ ಮೊಬೈಲ್ ಫೋನ್ನಲ್ಲಿ ಸಂದೇಶಗಳು ಬರುತ್ತಿದ್ದರೂ, ಹಲವರಿಗೆ ಇದು ತಿಳಿಯುತ್ತಿಲ್ಲ. ಇಲ್ಲವೇ ಪಾಲಿಸಿ ಮಾಡಿಸಿದವರು ಮೃತಪಟ್ಟರೆ, ಅದರ ಬಗ್ಗೆ ಕುಟುಂಬದವರಿಗೆ ಅರಿವೇ ಇಲ್ಲದೇ ಅದು ಹಾಗೆಯೇ ಉಳಿದುಬಿಡುತ್ತದೆ.
ಎಲ್ಐಸಿಯ ನಿಮಯದ ಪ್ರಕಾರ, ಪಾಲಿಸಿದಾರನು ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಮಾದಾರರಿಂದ ಯಾವುದೇ ಪ್ರಯೋಜನಗಳನ್ನು ಪಡೆಯದಿದ್ದರೆ, ಮೊತ್ತವನ್ನು ಕ್ಲೈಮ್ ಮಾಡದ ಮೊತ್ತವೆಂದು ಪರಿಗಣಿಸಲಾಗುತ್ತದೆ. ಪಾಲಿಸಿಯು ಪಕ್ವವಾದಾಗ, ಪ್ರೀಮಿಯಂ ಪಾವತಿಗಳು ಸ್ಥಗಿತಗೊಂಡಾಗ ಅಥವಾ ಪಾಲಿಸಿದಾರನು ಮರಣಹೊಂದಿದಾಗ ಈ ಪರಿಸ್ಥಿತಿ ಸಾಮಾನ್ಯವಾಗಿ ಉದ್ಭವಿಸುತ್ತದೆ. ಒಂದು ವೇಳೆ ಹಣವು 10 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಮಾಡದೆ ಉಳಿದಿದ್ದರೆ, ಪೂರ್ಣ ಮೊತ್ತವನ್ನು ಸರ್ಕಾರದ ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತದೆ. ಇದೀಗ ಇದೇ ರೀತಿ ಕ್ಲೈಮ್ ಮಾಡದೇ ಇರುವ ಒಟ್ಟೂ 880.93 ಕೋಟಿ ರೂಪಾಯಿ ಹಣ ಎಲ್ಐಸಿ ಬಳಿ ಉಳಿದುಕೊಂಡಿದೆ. ಈ ಕುರಿತು ಈಚೆಗೆ ಸರ್ಕಾರ ಸಂಸತ್ತಿನಲ್ಲಿ ಈ ವಿಷಯವನ್ನು ತಿಳಿಸಿತ್ತು.
ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (LIC) 2023-24ನೇ ಹಣಕಾಸು ವರ್ಷದಲ್ಲಿ (FY24) ಒಟ್ಟು 880.93 ಕೋಟಿ ರೂ.ಗಳ ಕ್ಲೈಮ್ ಮಾಡದ ಮುಕ್ತಾಯ ಮೊತ್ತವನ್ನು ಹೊಂದಿರುವುದಾಗಿ ಸರ್ಕಾರ ಹೇಳಿದೆ. ಒಟ್ಟು 3 ಲಕ್ಷದ 72 ಸಾವಿರದ 282 ಪಾಲಿಸಿದಾರರು ತಮ್ಮ ಹಣವನ್ನು ಪಡೆದುಕೊಂಡಿಲ್ಲ. ಆದ್ದರಿಂದ ಕುಟುಂಬದ ಯಾರೇ ವಿಮೆ ಮಾಡಿಸಿದರೂ ಅದನ್ನು ಮೊದಲು ತಮ್ಮ ಕುಟುಂಬಸ್ಥರಿಗೆ ಹೇಳುವುದು ಮುಖ್ಯ ಎನ್ನುವುದನ್ನು ಇಲ್ಲಿ ತಿಳಿಯಬೇಕು. ಮಕ್ಕಳ ಹೆಸರಿನಲ್ಲಿ ಇಟ್ಟಿದ್ದರೂ, ಅದನ್ನು ಅವರಿಗೆ ತಿಳಿಸುವುದು ಮುಖ್ಯವಾಗಿದೆ. ಜೀವ ಯಾವಾಗ ಬೇಕಾದರೂ ಹೋಗಬಹುದು. ಅದಕ್ಕೆ ಕಾರಣವೇ ಬೇಕೆಂದೇನಿಲ್ಲ. ಆದರೆ ಬದುಕಿರುವಾಗ ಕಷ್ಟಪಟ್ಟು ಪ್ರತಿ ಕಂತನ್ನು ತುಂಬಿದರೂ, ಕುಟುಂಬಸ್ಥರಿಗಾಗಿ ಹಣವನ್ನು ಇಟ್ಟಿದ್ದರೂ, ನೀವು ಕುಟುಂಬದವರಿಗೆ ಈ ವಿಷಯ ತಿಳಿಸದೇ ಸತ್ತರೆ, ಅದು ಅವರಿಗೂ ಸಿಗದೇ ಕೊನೆಗೆ ಸರ್ಕಾರದ ಪಾಲಾಗುತ್ತದೆ.
ಹಾಗಿದ್ದರೆ, ನಿಮ್ಮ ಪಾಲಿಸಿಯೂ ಈ ಕ್ಲೈಮ್ ಮಾಡದ ಲಿಸ್ಟ್ನಲ್ಲಿ ಇದೆಯಾ ಎನ್ನುವುದನ್ನು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆದರೆ ನಿಮ್ಮ ಬಳಿ ಪಾಲಿಸಿಯ ನಂಬರ್ ಇರುವುದು ಮುಖ್ಯವಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಎಲ್ಲಾ ಡಿಟೇಲ್ಸ್ ಇದ್ದು, ನಿಮ್ಮ ಹಣ ಇನ್ನೂ ಎಲ್ಐಸಿ ಬಳಿ ಇದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿ ನೀಡಲಾಗಿದೆ.
ಗೃಹ ಸಾಲ ಇದ್ಯಾ? ಪಡೆಯೋ ಪ್ಲ್ಯಾನ್ ಮಾಡಿದ್ದೀರಾ? RBI ಹೊಸ ರೂಲ್ಸ್ನಿಂದ EMI ಎಷ್ಟು ಕಡಿಮೆ ಆಗತ್ತೆ ನೋಡಿ!
ಇದರ ಹಂತ ಹಂತದ ಮಾಹಿತಿ ಇಲ್ಲಿ ನೀಡಲಾಗಿದೆ:
ಮೊದಲಿಗೆ ಎಲ್ಐಸಿ ವೆಬ್‌ಸೈಟ್ https://licindia.in/home ಕ್ಲಿಕ್ ಮಾಡಿ. ಮುಖಪುಟದಲ್ಲಿ Customer Service (ಗ್ರಾಹಕ ಸೇವೆ) ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. "Unclaimed amounts of policyholder" (ಪಾಲಿಸಿದಾರರ ಅನ್ಕ್ಲೇಮ್ ಹಣ) ಎಂದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಒಂದು ಪುಟ ಓಪನ್ ಆಗುತ್ತದೆ. ಅದರಲ್ಲಿ ನೀವು ಪಾಲಿಸಿ ಸಂಖ್ಯೆ, ಹೆಸರು, ಪಾನ್ ಕಾರ್ಡ್ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ಅಲ್ಲಿರುವ ವಿವರ ತುಂಬಿ submit ಬಟನ್ ಕ್ಲಿಕ್ ಮಾಡಬೇಕು. ಆಗ ಈ ಪಾಲಿಸಿ ಅನ್ಕ್ಲೈಮ್ ಇದ್ದರೆ ಅಲ್ಲಿ ಮೊತ್ತ ಕಾಣಿಸುತ್ತದೆ.
ಒಂದು ವೇಳೆ ಅಲ್ಲಿ ಹಣ ಇದ್ದು, ಅದನ್ನು ನೀವು ಪಡೆದುಕೊಳ್ಳದೇ ಇದ್ದರೆ, ಇಲ್ಲಿರುವ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅದನ್ನು ತುಂಬಿ ಎಲ್ಐಸಿ ಕಚೇರಿಗೆ ನೀಡಬೇಕು. ನೇರವಾಗಿ ಫಾರ್ಮ್ ಅನ್ನು ಕಚೇರಿಯಿಂದಲೂ ಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನಿಮ್ಮ ಬಳಿ, ಪಾಲಿಸಿಗೆ ಸಂಬಂಧಿಸಿದ ಪ್ರೀಮಿಯಂ ರಸೀತಿ ಹಾಗೂ ಇತರ ದಾಖಲೆ ಇರಬೇಕು. ಒಂದು ವೇಳೆ ಆನ್ಲೈನ್ ಮೂಲಕ ಕಂತು ತುಂಬುತ್ತಿದ್ದರೆ ಅದರ ಪ್ರಿಂಟ್ಔಟ್ ಪಡೆದುಕೊಳ್ಳಬೇಕು. ಒಂದು ವೇಳೆ ಪಾಲಿಸಿ ಮಾಡಿಸಿದವರು ಮೃತಪಟ್ಟಲ್ಲಿದ್ದರೆ ಮರಣ ಪ್ರಮಾಣ ಪತ್ರವೂ ಬೇಕಾಗುತ್ತದೆ. ನೀವು ಸಮೀಪದ ಎಲ್ಐಸಿ ಕಚೇರಿಗೆ ಹೋಗಿ ಸಂಪೂರ್ಣ ದಾಖಲೆ ಒದಗಿಸಿದ ಬಳಿಕ, ಎಲ್ಲವೂ ಸರಿಯಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುವುದು.
ವಿಮೆ ಖರೀದಿಗೆ ಪ್ಲ್ಯಾನ್ ಮಾಡಿರುವಿರಾ? ಹಾಗಿದ್ರೆ ಈ ಮಾಹಿತಿಗಳನ್ನೊಮ್ಮೆ ಗಮನಿಸಿ, ಮುಂದಿನ ಹೆಜ್ಜೆ ಇಡಿ...
