ನವದೆಹಲಿ(ನ.18): ಪಿಎಂಸಿ, ಯಸ್‌ ಹಾಗೂ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕುಗಳ ಬಳಿಕ, ಖಾಸಗಿ ಸ್ವಾಮ್ಯದ ಹಳೆಯ ಬ್ಯಾಂಕುಗಳಲ್ಲಿ ಒಂದಾಗಿರುವ ತಮಿಳುನಾಡು ಮೂಲದ ಲಕ್ಷ್ಮೀ ವಿಲಾಸ ಬ್ಯಾಂಕ್‌ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ಬ್ಯಾಂಕಿನ ಮೇಲೆ ಒಂದು ತಿಂಗಳ ತಾತ್ಕಾಲಿಕ ನಿರ್ಬಂಧ ಹೇರಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಈ ಅವಧಿಯಲ್ಲಿ ಬ್ಯಾಂಕಿನ ಗ್ರಾಹಕರು 25 ಸಾವಿರ ರು.ಗಿಂತ ಅಧಿಕ ಹಣ ಹಿಂಪಡೆಯದಂತೆ ಮಿತಿ ಹೇರಲಾಗಿದೆ.

ಹಾಗೊಂದು ವೇಳೆ ವೈದ್ಯಕೀಯ ಚಿಕಿತ್ಸೆ, ಉನ್ನತ ಶಿಕ್ಷಣ ಶುಲ್ಕ ಪಾವತಿ ಹಾಗೂ ವಿವಾಹ ವೆಚ್ಚಕ್ಕೆ ಹಣ ತುರ್ತು ಅಗತ್ಯವಿದ್ದಲ್ಲಿ ರಿಸವ್‌ರ್‍ ಬ್ಯಾಂಕ್‌ ಅನುಮತಿ ಪಡೆದು ಮಿತಿಗಿಂತ ಹೆಚ್ಚು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

2 ಸಾವಿರ ಹುದ್ದೆಗಳ ನೇಮಕಾತಿಗೆ SBI ಅರ್ಜಿ ಆಹ್ವಾನ

ಲಕ್ಷ್ಮೇ ವಿಲಾಸ ಬ್ಯಾಂಕ್‌ ಸತತ 3 ವರ್ಷಗಳಿಂದ ನಷ್ಟದಲ್ಲಿತ್ತು. ಕಳೆದ ಸೆಪ್ಟೆಂಬರ್‌ನಲ್ಲಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್‌ ಮೀತಾ ಮಖಾನ್‌ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ಬ್ಯಾಂಕ್‌ ಮುನ್ನಡೆಸಲು ರಚನೆ ಮಾಡಿತ್ತು. ಬ್ಯಾಂಕಿನಲ್ಲಿ ಬಂಡವಾಳ ಕಡಿಮೆಯಾಗಿದ್ದು, ಹಿಂತೆಗೆತ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಹಕರ ಹಿತರಕ್ಷಣೆ ಉದ್ದೇಶದಿಂದ ವಹಿವಾಟಿನ ಮೇಲೆ ನಿರ್ಬಂಧ ಹೇರಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಮತ್ತೊಂದು ಸದೃಢ ಬ್ಯಾಂಕಿನ ಜತೆ ಲಕ್ಷ್ಮೇ ಬ್ಯಾಂಕ್‌ ವಿಲೀನ ಪ್ರಕ್ರಿಯೆಗೆ ಆರ್‌ಬಿಐ ಪ್ರಯತ್ನ ನಡೆಸಲಿದೆ. ಡಿಬಿಎಸ್‌ ಬ್ಯಾಂಕ್‌ ಇಂಡಿಯಾ ಜತೆ ವಿಲೀನಕ್ಕೆ ಆರ್‌ಬಿಐ ಈಗಾಗಲೇ ಕರಡು ಯೋಜನೆ ಸಿದ್ಧಪಡಿಸಿದೆ.

ಇದೇ ವೇಳೆ, ಬ್ಯಾಂಕಿನ ನಿರ್ದೇಶಕ ಮಂಡಳಿಯನ್ನೂ 30 ದಿನಗಳ ಮಟ್ಟಿಗೆ ಸೂಪರ್‌ಸೀಡ್‌ ಮಾಡಲಾಗಿದೆ. ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್‌. ಮನೋಹರನ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಪ್ರತೀ ಮನೆಯಿಂದಲೂ ರಾಮಂದಿರ ನಿರ್ಮಾಣಕ್ಕೆ ಇಷ್ಟು ದೇಣಿಗೆ : ಯಾವ ಕಂಪನಿಗೆ ಹೊಣೆ?

9 ದಶಕದಷ್ಟು ಹಳೆಯ ಬ್ಯಾಂಕ್‌:

ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ ಬ್ಯಾಂಕ್‌ 1926ರಲ್ಲಿ ಸ್ಥಾಪನೆಯಾಗಿದೆ. 1958ರ ಜೂ.19ರಂದು ಬ್ಯಾಂಕಿಂಗ್‌ ಲೈಸೆನ್ಸ್‌ ಪಡೆದಿದೆ. ಅದೇ ವರ್ಷ ಆ.11ರಿಂದ ಶೆಡ್ಯೂಲ್ಡ್‌ ಕಮರ್ಷಿಯಲ್‌ ಬ್ಯಾಂಕ್‌ ಆಗಿ ಪರಿವರ್ತನೆಯಾಗಿದೆ. ಸದ್ಯ ಈ ಬ್ಯಾಂಕು ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 563 ಶಾಖೆಗಳನ್ನು ಹೊಂದಿದೆ. 974 ಎಟಿಎಂಗಳನ್ನು ಹೊಂದಿದೆ.