ಷೇರು ಮಾರುಕಟ್ಟೆಯ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವ ಗೊಂದಲವನ್ನು ನಿವಾರಿಸಲು ಕೋಟಕ್ ಮ್ಯೂಚುವಲ್ ಫಂಡ್ 'ಕೋಟಕ್ ಮಲ್ಟಿ ಸೆಕ್ಟರ್ ಓಮ್ನಿ ಫಂಡ್ ಆಫ್ ಫಂಡ್ಸ್' ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ.
ಬೆಂಗಳೂರು (ಸೆ.16): ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ವಲಯಗಳ (Sectors) ಸಾಧನೆಯನ್ನು ನಿಖರವಾಗಿ ಊಹಿಸುವುದು ಸಾಮಾನ್ಯ ಹೂಡಿಕೆದಾರರಿಗೆ ಸದಾ ದೊಡ್ಡ ಸವಾಲು. ಕೆಲವೊಮ್ಮೆ ಬ್ಯಾಂಕಿಂಗ್ ರಂಗ ಮುಂಚೂಣಿಯಲ್ಲಿದ್ದರೆ, ಮತ್ತೊಮ್ಮೆ ಐಟಿ, ಫಾರ್ಮಾ ಅಥವಾ ಮೂಲಸೌಕರ್ಯ (Infra) ವಲಯಗಳು ಗರಿಷ್ಠ ಲಾಭ ನೀಡುತ್ತವೆ. ಪ್ರತಿ ಬಾರಿಯೂ ವಿಭಿನ್ನ ಸೆಕ್ಟರ್‌ಗಳನ್ನು ಗುರುತಿಸಿ, ಪ್ರತ್ಯೇಕ ಫಂಡ್‌ಗಳನ್ನು ನಿರ್ವಹಿಸುವ ತಾಪತ್ರಯಕ್ಕೆ ಶಮನ ನೀಡಲು 'ಕೋಟಕ್ ಮ್ಯೂಚುವಲ್ ಫಂಡ್' ನೂತನ ಪರಿಹಾರವೊಂದನ್ನು ಕಲ್ಪಿಸಿದೆ.
ಕೋಟಕ್ ಮ್ಯೂಚುವಲ್ ಫಂಡ್ ತನ್ನ ನೂತನ ಓಪನ್-ಎಂಡೆಡ್ ಯೋಜನೆಯಾದ ‘ಕೋಟಕ್ ಮಲ್ಟಿ ಸೆಕ್ಟರ್ ಓಮ್ನಿ ಫಂಡ್ ಆಫ್ ಫಂಡ್ಸ್’ (Kotak Multi Sector Omni Fund of Funds) ಅನ್ನು ಮಾರುಕಟ್ಟೆಗೆ ರಿಲೀಸ್ ಮಾಡಿದೆ.
ಏನಿದು ಫಂಡ್ ಆಫ್ ಫಂಡ್ಸ್ (FoF) ಮಾದರಿ?
ಈ ವಿಶೇಷ ಮಾದರಿಯಲ್ಲಿ ಒಂದು ಫಂಡ್ ನೇರವಾಗಿ ಕಂಪನಿಗಳ ಷೇರುಗಳನ್ನು ಖರೀದಿಸುವುದಿಲ್ಲ. ಬದಲಾಗಿ, ವಿವಿಧ ಸೆಕ್ಟರ್‌ಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಇತರ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಲ್ಲಿ (ಆಕ್ಟಿವ್ ಮತ್ತು ಪ್ಯಾಸಿವ್ ಫಂಡ್‌ಗಳು) ಹಣವನ್ನು ಹೂಡಿಕೆ ಮಾಡುತ್ತದೆ. ದೇಶದ ಪ್ರಚಲಿತ ಆರ್ಥಿಕ ಪರಿಸ್ಥಿತಿ, ಸರ್ಕಾರದ ನೀತಿಗಳು ಮತ್ತು ಮಾರುಕಟ್ಟೆಯ ಭಾವನೆಗಳನ್ನು (Market Sentiment) ಆಳವಾಗಿ ಅಧ್ಯಯನ ಮಾಡುವ ಮಾರುಕಟ್ಟೆ ತಜ್ಞರು, ಯಾವ ವಲಯಕ್ಕೆ ಎಷ್ಟೆಷ್ಟು ಪ್ರಮಾಣದ ಹಣ ನಿಯೋಜಿಸಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಸಮಯಕ್ಕೆ ಸರಿಯಾಗಿ ಹೂಡಿಕೆಯನ್ನು ಆಟೋಮ್ಯಾಟಿಕ್ ಆಗಿ ಮರುಸಮತೋಲನ (Rebalance) ಮಾಡುವ ಜವಾಬ್ದಾರಿಯನ್ನೂ ತಜ್ಞರೇ ವಹಿಸಿಕೊಳ್ಳಲಿದ್ದಾರೆ.
ಸಂಸ್ಥೆಯ ಹಿರಿಯ ಅಧಿಕಾರಿಗಳ ಪ್ರಮುಖ ಹೇಳಿಕೆಗಳು
ನಿಲೇಶ್ ಶಾ (ಮ್ಯಾನೇಜಿಂಗ್ ಡೈರೆಕ್ಟರ್, ಕೋಟಕ್ ಮ್ಯೂಚುವಲ್ ಫಂಡ್) ಪ್ರಕಾರ, ಸಾಮಾನ್ಯ ಹೂಡಿಕೆದಾರರು ಒಂದೇ ಫಂಡ್ ಮೂಲಕ ವಿವಿಧ ವಲಯಗಳ ಅಭಿವೃದ್ಧಿ ಹಾಗೂ ಬೆಳವಣಿಗೆಯ ಲಾಭವನ್ನು ಪಡೆಯಲು ಈ 'ಫಂಡ್ ಆಫ್ ಫಂಡ್ಸ್' ಅತ್ಯುತ್ತಮ ಹೂಡಿಕೆ ಮಾರ್ಗವಾಗಿ ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವೇಂದ್ರ ಸಿಂಗಲ್ (ಫಂಡ್ ಮ್ಯಾನೇಜರ್) ಪ್ರಕಾರ "ಪ್ರತಿಯೊಂದು ಸೆಕ್ಟರ್ ಸಹ ಮಾರುಕಟ್ಟೆಯ ಬೆಳವಣಿಗೆಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ನಮ್ಮ ಬಲವಾದ ಸಂಶೋಧನಾ ತಂಡವು ಆಕ್ಟಿವ್ ಹಾಗೂ ಪ್ಯಾಸಿವ್ ಫಂಡ್‌ಗಳಲ್ಲಿ ಇರುವ ಅತ್ಯುತ್ತಮ ಹೂಡಿಕೆ ಅವಕಾಶಗಳನ್ನು ಸದಾ ಗುರುತಿಸಿ ಕಾರ್ಯನಿರ್ವಹಿಸಲಿದೆ" ಎಂದು ಹೇಳಿದ್ದಾರೆ.
ಹೂಡಿಕೆ ಮಿತಿ ಮತ್ತು ಎನ್‌ಎಫ್‌ಒ (NFO) ವಿವರಗಳು
ಕೋಟಕ್ ಮಲ್ಟಿ ಸೆಕ್ಟರ್ ಓಮ್ನಿ ಫಂಡ್ ಆಫ್ ಫಂಡ್ಸ್‌ನ ಹೊಸ ಫಂಡ್ ಆಫರ್ (NFO) ಈಗಾಗಲೇ ಆರಂಭಗೊಂಡಿದ್ದು, ಸೆಪ್ಟೆಂಬರ್ 22 ರವರೆಗೆ ಹೂಡಿಕೆಗೆ ಲಭ್ಯವಿರಲಿದೆ.
ಕನಿಷ್ಠ ಏಕಕಾಲೀನ ಹೂಡಿಕೆ (Lumpsum): ರೂ. 1,000 ರಿಂದ ಆರಂಭಿಸಬಹುದು.
ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP): ಮಾಸಿಕ ರೂ. 500 ರಿಂದ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ವಿವಿಧ ವಲಯಗಳ ಬೆಳವಣಿಗೆಯಿಂದ ಲಾಭಗಳಿಸಲು ಬಯಸುವ ಮತ್ತು ನೇರ ಷೇರು ಮಾರುಕಟ್ಟೆಯ ರಿಸ್ಕ್ ನಿರ್ವಹಿಸಲು ಕಷ್ಟಪಡುವ ಸಣ್ಣ ಹಾಗೂ ಮಧ್ಯಮ ಹೂಡಿಕೆದಾರರಿಗೆ ಈ ಯೋಜನೆ ಸೂಕ್ತ ಆಯ್ಕೆಯಾಗಲಿದೆ.


