ಬ್ಯಾಂಕ್ ಲಾಕರ್ ಹೊಸ ನಿಯಮ: ವಸ್ತು ಕಳೆದು ಹೋದ್ರೆ ಸಿಗಲಿದೆ ಪರಿಹಾರ!
ಲಾಕರ್ನಲ್ಲಿರೋ ವಸ್ತು ಕಳೆದು ಹೋದ್ರೆ ಅಥವಾ ಹಾನಿಯಾದ್ರೆ ಇಲ್ಲಿಯ ತನಕ ಬ್ಯಾಂಕ್‌ಗಳು ಅದಕ್ಕೆ ಹೊಣೆಯಾಗಿರಲಿಲ್ಲ.ಆದ್ರೆ ಬ್ಯಾಂಕ್ ಲಾಕರ್ ಹೊಸ ನಿಯಮದ ಪ್ರಕಾರ ಸಿಬ್ಬಂದಿ ನಿರ್ಲಕ್ಷ್ಯ ಅಥವಾ ವಂಚನೆಯಿಂದ ಲಾಕರ್ನಲ್ಲಿರೋ ವಸ್ತು ನಷ್ಟವಾದ್ರೆ ಬ್ಯಾಂಕ್ ಗ್ರಾಹಕನಿಗೆ ಪರಿಹಾರ ನೀಡಬೇಕು.
ಚಿನ್ನ ಸೇರಿದಂತೆ ಅತ್ಯಮೂಲ್ಯ ವಸ್ತುಗಳು ಸುರಕ್ಷಿತವಾಗಿರೋ ಸ್ಥಳವೆಂದ್ರೆ ಲಾಕರ್. ಆದ್ರೆ ಕೆಲವೊಮ್ಮೆ ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ವಂಚನೆಯಿಂದ ಲಾಕರ್ನಲ್ಲಿರೋ ಅಮೂಲ್ಯ ವಸ್ತುಗಳು ಕಣ್ಮರೆಯಾದ ನಿದರ್ಶನಗಳು ಕೂಡ ಇವೆ. ಇಂಥ ಸಂದರ್ಭದಲ್ಲಿ ಬ್ಯಾಂಕ್ಗಳು ಈ ತಪ್ಪಿನ ಹೊಣೆ ಹೊರಲು ಸಿದ್ಧವಿರೋದಿಲ್ಲ. ಆದ್ರೆ ಇನ್ನು ಮುಂದೆ ಇಂಥ ಘಟನೆಗಳು ನಡೆದ್ರೆ ಬ್ಯಾಂಕ್ ತನ್ನ ಗ್ರಾಹಕನಿಗೆ ಪರಿಹಾರ ನೀಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ. ಈ ಸಂಬಂಧ ಆಗಸ್ಟ್ 18ರಂದು ಆರ್ಬಿಐ ಅಧಿಸೂಚನೆ ಹೊರಡಿಸಿದೆ.
ಡಿಜಿಟಲ್ ಗೋಲ್ಡ್ ಅಂದ್ರೇನು? ಖರೀದಿಸೋದು ಹೇಗೆ?
ಎಷ್ಟು ಪರಿಹಾರ ನೀಡಬೇಕು?
ಒಂದು ವೇಳೆ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ ಅಥವಾ ವಂಚನೆಯಿಂದ ಗ್ರಾಹಕ ಲಾಕರ್ನಲ್ಲಿರೋ ತನ್ನ ಬೆಲೆಬಾಳೋ ವಸ್ತುವನ್ನು ಕಳೆದುಕೊಂಡಿದ್ರೆ ಬ್ಯಾಂಕ್ ಆತನಿಗೆ ಲಾಕರ್ಗೆ ಆತ ವಾರ್ಷಿಕವಾಗಿ ಪಾವತಿಸೋ ಬಾಡಿಗೆಯ ನೂರು ಪಟ್ಟು ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆರ್ಬಿಐ ನಿರ್ದೇಶಿಸಿದೆ. ಬಹುತೇಕ ಗ್ರಾಹಕರು ಲಾಕರ್ನಲ್ಲಿ ಬೆಲೆಬಾಳೋ ವಸ್ತುಗಳನ್ನಿಡೋ ಕಾರಣ ಅದಕ್ಕೆ ಹೋಲಿಸಿದ್ರೆ ಬ್ಯಾಂಕ್ ಪಾವತಿಸೋ ಪರಿಹಾರದ ಮೊತ್ತ ಕಡಿಮೆ.
ಯಾವ ಸಂದರ್ಭಗಳಲ್ಲಿ?
ಲಾಕರ್ ಇರೋ ಸ್ಥಳದ ಸುರಕ್ಷತೆ ಹಾಗೂ ಭದ್ರತೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋದು ಬ್ಯಾಂಕ್ ಜವಾಬ್ದಾರಿಯಾಗಿದೆ. ಬೆಂಕಿ ಅವಘಡ, ಕಳ್ಳತನ, ದರೋಡೆ, ಕಟ್ಟಡ ಧ್ವಂಸ ಮುಂತಾದ ಕೃತ್ಯಗಳು ನಿರ್ಲಕ್ಷ್ಯ ಅಥವಾ ತನ್ನ ಸ್ವಯಂಕೃತ ತಪ್ಪಿನಿಂದ ಘಟಿಸದಂತೆ ಬ್ಯಾಂಕ್ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಬ್ಯಾಂಕ್ ಅಜಾಗರೂಕತೆಯಿಂದ ಇಂಥ ಘಟನೆಗಳು ಘಟಿಸಿದರೆ ಅಂಥ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಪರಿಹಾರ ಪಾವತಿಸಬೇಕು. ಪ್ರವಾಹ, ಭೂಕಂಪ, ಸಿಡಿಲು ಮುಂತಾದ ನೈಸರ್ಗಿಕ ವಿಕೋಪಗಳು, ಗ್ರಾಹಕನ ನಿರ್ಲಕ್ಷ್ಯದಿಂದ ಲಾಕರ್ನಲ್ಲಿರೋ ವಸ್ತು ಕಳೆದುಹೋದ್ರೆ ಅಥವಾ ಹಾನಿಯಾದ್ರೆ ಅಂಥ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಪರಿಹಾರ ಪಾವತಿಸಬೇಕಾಗಿಲ್ಲ.
ಪಾಸಿಟಿವ್ ಪೇ ವ್ಯವಸ್ಥೆ ಅಂದ್ರೇನು? ಅದ್ರಿಂದ ಯಾರಿಗೆ ಲಾಭ?
ಹೊಸ ಒಪ್ಪಂದ
ಆರ್ಬಿಐ ಅಧಿಸೂಚನೆ ಅನ್ವಯ ಹೊಸ ಲಾಕರ್ ಒಪ್ಪಂದವನ್ನು ಬ್ಯಾಂಕ್ಗಳು 2022ರ ಜನವರಿ 1ರಿಂದ ಅನುಷ್ಠಾನಗೊಳಿಸಲಿವೆ. ಲಾಕರ್ ಹೊಂದಿರೋ ಗ್ರಾಹಕರು ಬ್ಯಾಂಕ್ ಜೊತೆ ಈ ಒಪ್ಪಂದಕ್ಕೆ ಸಹಿ ಮಾಡಿದ್ರೆ ಮಾತ್ರ ಪರಿಹಾರ ಪಡೆಯಲು ಆರ್ಹರಾಗಿರುತ್ತಾರೆ.
ಎಸ್ಎಂಎಸ್ ಮಾಹಿತಿ
ಲಾಕರ್ ಅನ್ನು ಆ ದಿನ ಯಾರಾದ್ರೂ ತೆರೆದಿದ್ದಾರಾ ಎಂಬ ಮಾಹಿತಿಯನ್ನು ದಿನದ ಕೊನೆಯಲ್ಲಿ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಗ್ರಾಹಕರಿಗೆ ತಿಳಿಸೋ ವ್ಯವಸ್ಥೆ ಕೂಡ ಜಾರಿಯಾಗಲಿದೆ. ದಿನದ ಯಾವ ಸಮಯದಲ್ಲಿ ಲಾಕರ್ ತೆರೆಯಲಾಯ್ತು ಎಂಬ ಮಾಹಿತಿ ಗ್ರಾಹಕರಿಗೆ ಸಿಗುತ್ತದೆ.
ಪಾರದರ್ಶಕ ವ್ಯವಸ್ಥೆ
ಬ್ಯಾಂಕ್ಗಳು ಲಾಕರ್ ಹಂಚಿಕೆಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಈ ತನಕ ಅನುಸರಿಸುತ್ತಿರಲಿಲ್ಲ. ಇದ್ರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು. ಯಾವ ಬ್ಯಾಂಕ್ನಲ್ಲಿ ಅಥವಾ ಶಾಖೆಯಲ್ಲಿ ಎಷ್ಟು ಲಾಕರ್ ಖಾಲಿಯಿದೆ ಎಂಬ ಮಾಹಿತಿ ಗ್ರಾಹಕರಿಗೆ ಸಿಗುತ್ತಿಲ್ಲ. ಆದ್ರೆ ಇನ್ನು ಹೊಸ ಲಾಕರ್ ಒಪ್ಪಂದ ಜಾರಿಗೆ ಬಂದ ಮೇಲೆ ಯಾವ ಬ್ಯಾಂಕ್ನಲ್ಲಿ ಎಷ್ಟು ಲಾಕರ್ ಖಾಲಿಯಿದೆ ಎಂಬ ಮಾಹಿತಿ ಗ್ರಾಹಕರಿಗೆ ಸಿಗಲಿದೆ. ಇದ್ರಿಂದ ಲಾಕರ್ ಹಂಚಿಕೆ ಪ್ರಕ್ರಿಯೆ ಕೂಡ ಪಾರದರ್ಶಕವಾಗಿರಲಿದೆ.
ಠೇವಣಿ ಮುಂದುವರಿಕೆ
ವಾರ್ಷಿಕ ಲಾಕರ್ ಬಾಡಿಗೆಯನ್ನು ವಸೂಲಿ ಮಾಡೋ ಉದ್ದೇಶದಿಂದ ಬ್ಯಾಂಕ್ಗಳು ಲಾಕರ್ ನೀಡೋ ಸಮಯದಲ್ಲಿ ತುಸು ಹೆಚ್ಚೇ ಠೇವಣಿ ಪಡೆದುಕೊಳ್ಳೋದು ಸಾಮಾನ್ಯ. ಹೊಸ ನಿಯಮಗಳಲ್ಲಿ ಈ ಬಗ್ಗೆ ಹೆಚ್ಚು ಸ್ಪಷ್ಟನೆ ನೀಡಲಾಗಿದ್ದು, ಲಾಕರ್ ಹಂಚಿಕೆ ಸಮಯದಲ್ಲಿ ಗ್ರಾಹಕರಿಂದ 3 ವರ್ಷಗಳ ಲಾಕರ್ ಬಾಡಿಗೆ ಎಷ್ಟಾಗುತ್ತದೆಯೋ ಅಷ್ಟು ಮೊತ್ತದ ಠೇವಣಿಯನ್ನು ಬ್ಯಾಂಕ್ಗಳು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಉದ್ಯೋಗಿಗಳು EPF ಎರಡು ಖಾತೆ ತೆರೆಯೋದು ಅಗತ್ಯವೇ?
ಸಿಸಿಟಿವಿ ರೆಕಾರ್ಡಿಂಗ್
ಬ್ಯಾಂಕ್ ತನ್ನ ಸ್ಟ್ರಾಂಗ್ ರೂಮ್ನಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಅಲ್ಲದೆ, ಲಾಕರ್ ಸುತ್ತಮುತ್ತ ನಡೆಯೋ ಚಟುವಟಿಕೆಗಳ ಸಿಸಿಟಿವಿ ಫೋಟೇಜ್ ಅನ್ನು 180 ದಿನಗಳ ಕಾಲ ಸಂರಕ್ಷಿಸಿಡಬೇಕು.
ಇ-ಲಾಕರ್ ಸುರಕ್ಷತೆಗೆ ಒತ್ತು
ಒಂದು ವೇಳೆ ಲಾಕರ್ಗಳನ್ನು ಇಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ನಿರ್ವಹಿಸಲಾಗುತ್ತಿದ್ರೆ, ಹ್ಯಾಕಿಂಗ್ ಅಥವಾ ಭದ್ರತಾ ಲೋಪವಾಗದಂತೆ ಬ್ಯಾಂಕ್ಗಳು ಸೂಕ್ತ ವ್ಯವಸ್ಥೆ ಮಾಡಬೇಕು.
ವಾರಸುದಾರರಿಗೆ ಹಸ್ತಾಂತರ
ಒಂದು ವೇಳೆ ಲಾಕರ್ ಹೊಂದಿರೋ ವ್ಯಕ್ತಿ ಮರಣ ಹೊಂದಿದ್ರೆ, ಆತ ಮೊದಲೇ ಸಚಿಸಿರೋ ವಾರಸುದಾರನಿಗೆ ಲಾಕರ್ನಲ್ಲಿರೋ ವಸ್ತುಗಳನ್ನು ತೆಗೆಯಲು ಬ್ಯಾಂಕ್ ಅವಕಾಶ ನೀಡಬೇಕು. ಆದ್ರೆ ಇದಕ್ಕೂ ಮುನ್ನ ಲಾಕರ್ ಹೊಂದಿರೋ ವ್ಯಕ್ತಿಯ ಮರಣ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸೋದು ಅಗತ್ಯ.