Marriage Loan : ಧೂಮ್ಧಾಮ್ ಮದುವೆಗೆ ಹಣ ಸಾಲ್ತಿಲ್ವಾ? ಇಲ್ಲಿ ಸಿಗುತ್ತೆ ಸಾಲ
ಮನೆ ಕಟ್ಟಿ ನೋಡು,ಮದುವೆ ಮಾಡಿ ನೋಡು ಎಂಬ ಮಾತಿದೆ. ಮದುವೆ ಮಾಡೋದು ಸುಲಭದ ಕೆಲಸವಲ್ಲ. ಕಂಕಣಭಾಗ್ಯ ಕೂಡಿ ಬಂದಾಗ ಹಣ ಹೊಂದಿಸುವುದು ಸವಾಲಿನ ಕೆಲಸ. ಅಂಥವರಿಗೆ ಬ್ಯಾಂಕ್ ನೆರವಾಗುತ್ತದೆ.
Business Desk: ಮದುವೆ (Marriage),ಜೀವನದ ದೊಡ್ಡ ಘಟ್ಟ. ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು (Dream) ಕಾಣುತ್ತಾರೆ. ಈ ವಿಶೇಷ ದಿನ ಸದಾ ನೆನಪಿರಬೇಕೆಂದು ಎಲ್ಲರೂ ಬಯಸ್ತಾರೆ. ಮದುವೆ ಬಗ್ಗೆ ತಮ್ಮದೇ ಕಲ್ಪನೆ ಹೊಂದಿರುತ್ತಾರೆ. ಆಡಂಬರ ಮದುವೆಯನ್ನು ಬಹುತೇಕ ಎಲ್ಲರೂ ಬಯಸ್ತಾರೆ. ಆದ್ರೆ ಆರ್ಥಿಕ ಸಮಸ್ಯೆಯಿಂದ ಐಷಾರಾಮಿ ಮದುವೆ ಸಾಧ್ಯವಾಗುವುದಿಲ್ಲ.ಹಾಗಾಗಿ ಕನಸನ್ನು ಬದಿಗಿಟ್ಟು,ಸರಳವಾಗಿ ಮದುವೆಯಾಗಲು ಮುಂದಾಗ್ತಾರೆ. ಮದುವೆ ಸಂಭ್ರಮದಲ್ಲಿ ರಾಜಿ ಮಾಡಿಕೊಳ್ಳುವುದು ಸ್ವಲ್ಪ ನೋವಿನ ಸಂಗತಿ. ಯಾಕೆಂದ್ರೆ ಜೀವನದಲ್ಲಿ ಒಮ್ಮೆ ನಡೆಯುವ ಸಮಾರಂಭವಿದು. ನೀವೂ ಮದುವೆಯಾಗಲು ಹೊರಟಿದ್ದರೆ ಮತ್ತು ನಿಮ್ಮ ಮದುವೆಯನ್ನು ವೈಭವದಿಂದ ಮಾಡಲು ಬಯಸಿದರೆ, ಚಿಂತಿಸಬೇಕಾಗಿಲ್ಲ. ಹಣವಿಲ್ಲವೆಂಬ ಕಾರಣಕ್ಕೆ ನಿಮ್ಮ ಆಸೆಯನ್ನು ಅದುಮಿಡಬೇಕಾಗಿಲ್ಲ. ಏಕೆಂದರೆ ಅನೇಕ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಮದುವೆಯ ಅಗತ್ಯ ವೆಚ್ಚಗಳನ್ನು ಪೂರೈಸಲು ನಿಮಗೆ ಮದುವೆ ಸಾಲವನ್ನು ನೀಡುತ್ತವೆ. ನಿಮಗೆ ಅಗತ್ಯವಿರುವಷ್ಟು ಸಾಲ ತೆಗೆದುಕೊಂಡು ನೀವು ನಿಮಗಿಷ್ಟವಾದಂತೆ ಮದುವೆ ಮಾಡಿಕೊಳ್ಳಬಹುದು. ಇಂದು ಮದುವೆ ಸಾಲದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ.
ಮದುವೆ ಸಾಲ (Loans) ಎಂದರೇನು? : ಮದುವೆ ಸಾಲವನ್ನು ವೈಯಕ್ತಿಕ ಸಾಲವಾಗಿ ನೋಡಬಹುದು. ಸಾಲ ತೆಗೆದುಕೊಳ್ಳುವಾಗ ಮದುವೆಯನ್ನು ಕಾರಣವಾಗಿ ನೀಡಬೇಕಾಗುತ್ತದೆ. ಇದಕ್ಕೆ ಬಡ್ಡಿ (Interest)ಪಾವತಿ ಮಾಡಬೇಕಾಗುತ್ತದೆ. ಸಾಲ ಸಾಲಕ್ಕೆ ಬಡ್ಡಿಯಲ್ಲಿ ಬದಲಾವಣೆ ಮಾಡಲಾಗುತ್ತಿರುತ್ತದೆ. ಮದುವೆ ಋತುವಿನಲ್ಲಿ ವಿವಾಹ ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡುವುದುಂಟು.
ಮದುವೆ ಸಾಲವನ್ನು ತೆಗೆದುಕೊಳ್ಳುವ ಪ್ರಯೋಜನಗಳು : ಮದುವೆ ಹತ್ತಿರ ಬರ್ತಿದ್ದಂತೆ ಟೆನ್ಷನ್ ಜಾಸ್ತಿಯಾಗುತ್ತದೆ. ವಿವಾಹಕ್ಕಾಗುವ ಖರ್ಚಿನ ಪಟ್ಟಿ ಉದ್ದವಾಗಿರುತ್ತದೆ. ಆದ್ರೆ ಕೈನಲ್ಲಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಸಂಬಂಧಿಕರು,ಸ್ನೇಹಿತರ ಬಳಿ ಹಣ ಕೇಳುವುದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರು ಮದುವೆಗಾಗಿ ಒಂದಿಷ್ಟು ಹಣ ಕೂಡಿಟ್ಟಿರುತ್ತಾರೆ. ದುಬಾರಿ ದುನಿಯಾದಲ್ಲಿ ಇದು ಕಲ್ಯಾಣ ಮಂಟಪ,ಬಟ್ಟೆಗೆ ಸರಿಯಾಗಿರುತ್ತದೆ. ಇಂಥ ಸಂದರ್ಭದಲ್ಲಿ ನೆರವಿಗೆ ಬರುವುದು ಮದುವೆ ಸಾಲ. ಮದುವೆ ಸಾಲವನ್ನು ತೆಗೆದುಕೊಳ್ಳುವ ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ಎಲ್ಲಾ ಪ್ರಮುಖ ವೆಚ್ಚಗಳನ್ನು ಒಳಗೊಂಡಿರುತ್ತದೆ. ನಿಮ್ಮ ಮದುವೆಯನ್ನು ನೀವು ಆಡಂಬರದಿಂದ ಮಾಡಬಹುದು ಮತ್ತು ಮದುವೆ ಸಾಲದ ಮೂಲಕ ನಿಮಗಿಷ್ಟದಂತೆ ಮದುವೆ ಎಂಜಾಯ್ ಮಾಡಬಹುದು. ಖರ್ಚಿಗಾಗಿ ಬೇರೆಯವರ ಮುಂದೆ ಕೈಚಾಚಬೇಕಾಗಿಲ್ಲ.
ಇದನ್ನೂ ಓದಿ: Business Ideas ಕೇವಲ 8ನೇ ತರಗತಿ ಅನ್ನೋ ಚಿಂತೆ ಬೇಡ, ಕಡಿಮೆ ಹೂಡಿಕೆಯಲ್ಲಿ ಕೈತುಂಬ ಆದಾಯ ಗಳಿಸಿ!
ಮದುವೆ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ? : ಮದುವೆ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ನ ಕಸ್ಟಮರ್ ಕೇರ್ ಜೊತೆ ಮಾತನಾಡಬೇಕು.ಇಲ್ಲವೆ ಬ್ಯಾಂಕ್ ಶಾಖೆಗೆ ಹೋಗಿಯೂ ನೀವು ಇದ್ರ ಬಗ್ಗೆ ಮೊದಲು ಮಾಹಿತಿ ಪಡೆಯಬೇಕು. ಮದುವೆ ಸಾಲಕ್ಕೆ ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ಬಡ್ಡಿಯನ್ನು ವಿಧಿಸುತ್ತವೆ. ಹಾಗಾಗಿ ಯಾವ ಬ್ಯಾಂಕ್ ಕಡಿಮೆ ಬಡ್ಡಿಗೆ ಮದುವೆ ಸಾಲ ನೀಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಮದುವೆ ಸಾಲಕ್ಕೆ ಅರ್ಜಿ ಸಲ್ಲಿಸುವ ವೇಳೆ ಕೆಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಸಾಲಕ್ಕೆ ಕಾರಣ ಮದುವೆ ಎಂದು ನೀವು ನಮೂದಿಸಬೇಕಾಗುತ್ತದೆ.
ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತ್ರ ಬ್ಯಾಂಕ್ ನಿಮ್ಮ ಸಾಲಕ್ಕೆ ಒಪ್ಪಿಗೆ ನೀಡುತ್ತದೆ. ನಿಮ್ಮ ಖಾತೆಗೆ ಸಾಲದ ಹಣವನ್ನು ವರ್ಗಾವಣೆ ಮಾಡುತ್ತದೆ. ಇದಾದ ನಂತ್ರ ನೀವು ಇಎಂಐ ರೂಪದಲ್ಲಿ ಬಡ್ಡಿ ಪಾವತಿಸಬೇಕು.
ಇದನ್ನೂ ಓದಿ: Bindu Beverages ತಂಪು ಪಾನೀಯ ಪೇಟೆಂಟ್ ದುರುಪಯೋಗ: 2 ಕಂಪನಿ ವಿರುದ್ಧ ಎಫ್‌ಐಆರ್!
ಎಸ್ಬಿಐ ಮದುವೆ ಸಾಲ : ಸಂಬಳ ಪಡೆಯುವ ವ್ಯಕ್ತಿಯಾಗಿದ್ದರೆ ಮತ್ತು ಎಸ್ಬಿಐ ಅಥವಾ ಯಾವುದೇ ಇತರ ಬ್ಯಾಂಕ್‌ನಲ್ಲಿ ಸಂಬಳ ಖಾತೆಯನ್ನು ಹೊಂದಿದ್ದರೆ ಅಥವಾ ನೀವು ಪಿಂಚಣಿದಾರರಾಗಿದ್ದರೆ, ನೀವು ಎಸ್ಬಿಐ ಮದುವೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಎಸ್‌ಬಿಐ, 20 ಲಕ್ಷ ರೂಪಾಯಿಯವರೆಗೆ ಸಾಲ ನೀಡುತ್ತದೆ. 6 ರಿಂದ 60 ತಿಂಗಳವರೆಗೆ ಸಾಲ ಪಾವತಿಸಲು ಅವಕಾಶವಿರುತ್ತದೆ. ಮದುವೆ ಸಾಲವನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ.