ವೆಚ್ಚಕ್ಕೆ ಕಡಿವಾಣ ಹಾಕದೆ ಪ್ರತಿವರ್ಷ ಆದಾಯ ಹೆಚ್ಚಳವಾದ್ರೂ ಸಾಲುತ್ತಿಲ್ಲ ಎಂದು ಗೊಣಗೋರು ಇಂಗ್ಲೆಂಡ್‌ನಲ್ಲಿ 10 ಕೋಟಿ ರೂ. ಉಳಿತಾಯದ ಹಣದೊಂದಿಗೆ 35ನೇ ವಯಸ್ಸಿಗೆ ನಿವೃತ್ತಿಯಾದ ಮಹಿಳೆ ಕುರಿತು ತಿಳಿದುಕೊಳ್ಳಲೇಬೇಕು.

ಲಕ್ಷಾಂತರ ರೂಪಾಯಿ ಆದಾಯವಿದ್ರೂ ತಿಂಗಳ ಕೊನೆಯಲ್ಲಿ ಕೈ ಖಾಲಿ ಮಾಡಿಕೊಂಡು ಸ್ನೇಹಿತರ ಬಳಿ ಸಾಲ ಮಾಡೋರ ಸಂಖ್ಯೆಗೇನೂ ಕೊರತೆಯಿಲ್ಲ.ಇದ್ದಷ್ಟೂ ಆಸೆ ಜಾಸ್ತಿ ಎಂಬಂತೆ ಎಷ್ಟಿದ್ದರೂ ಕಡಿಮೆ ಎಂಬ ಭಾವನೆಯಿಂದ ಬದುಕೋರ ಸಂಖ್ಯೆ ಇಂದು ಹಿಂದಿಗಿಂತ ಜಾಸ್ತಿ. ಹಾಸಿಗೆಯಿದ್ದಷ್ಟೇ ಕಾಲು ಚಾಚು ಎಂಬ ಹಿರಿಯರ ಮಾತನ್ನು ಇಂದಿನ ಯುವಪೀಳಿಗೆ ಅಕ್ಷರಶಃ ಮರೆತು ಬಿಟ್ಟಿದೆ. ಐಷಾರಾಮಿ ಕಾರು, ಮನೆ, ಕಂಡಿದ್ದೆಲ್ಲ ಖರೀದಿಸೋ ಕೊಳ್ಳುಬಾಕತನ….ಒಟ್ಟಾರೆ ಹೈಫೈ ಲೈಫ್‌ಸ್ಟೈಲ್‌ಗೆ ಮಾರುಹೋಗಿ ಆದಾಯವನ್ನೆಲ್ಲ ವ್ಯಯಿಸಿ ಉಳಿತಾಯದ ಮಹತ್ವವನ್ನೇ ಮರೆತು ಬಿಟ್ಟಿದ್ದೇವೆ. ಆರ್ಥಿಕ ಶಿಸ್ತನ್ನು ಮರೆತ ಇಂಥ ಆಧುನಿಕ ಜಗತ್ತಿಗೆ ಮಾದರಿಯಾಗಿ ನಿಲ್ಲುತ್ತಾರೆ ಇಂಗ್ಲೆಂಡ್‌ನ ಕಟೈ ಡೊನೆಗನ್. ಹೌದು, ಕೇವಲ 35 ವರ್ಷ ವಯಸ್ಸಿಗೆ ನಿವೃತ್ತಿ ಪಡೆದಿರೋ ಈ ಮಹಿಳೆ ತನ್ನ ಪತಿಯೊಂದಿಗೆ ಸೇರಿ ಉಳಿತಾಯ ಮಾಡಿರೋದು ಬರೋಬರಿ 10 ಕೋಟಿ ರೂಪಾಯಿ! 

ಕಾರ್ಡ್ ಟೋಕನೈಸೇಷನ್: ಮುಂದಿನ ವರ್ಷದಿಂದ ಆನ್ಲೈನ್ ಪಾವತಿ ಸುರಕ್ಷಿತ

ಇದು ಹೇಗೆ ಸಾಧ್ಯವಾಯ್ತು?
ಸರ್ಕಾರದ ನಿಯಮಾವಳಿಗಳ ಪ್ರಕಾರ 60 ವರ್ಷಕ್ಕೆ ನಿವೃತ್ತಿಯಾದ್ರೂ ಉಳಿತಾಯ ನೋಡಿದ್ರೆ ಇನ್ನೊಂದು ಕೆಲಸ ಆರಿಸಿಕೊಳ್ಳಬೇಕಾದ ಪರಿಸ್ಥಿತಿ ಅನೇಕರದ್ದು. ಹೀಗಿರೋವಾಗ ಕೇವಲ 35 ವರ್ಷಕ್ಕೆ ನಿವೃತ್ತಿ ಪಡೆದುಕೊಂಡವಳ ಬಳಿ 10 ಕೋಟಿ ರೂ. ಹಣವಿದೆ ಎಂದ್ರೆ ಆಕೆಯ ವೇತನ ಕೂಡ ದೊಡ್ಡ ಮೊತ್ತದ್ದೇ ಆಗಿರುತ್ತದೆ ಎಂಬುದು ನಿಮ್ಮ ಲೆಕ್ಕಾಚಾರವಾಗಿದ್ರೆ ಖಂಡಿತಾ ತಪ್ಪು. ಕಟೈ ಡೊನೆಗನ್ ವಾರ್ಷಿಕ 21ಲಕ್ಷ ರೂ. ಪ್ಯಾಕೇಜ್‌ ಹೊಂದಿದ್ದಳು. ಇದು ಭಾರತದಲ್ಲಿ ದೊಡ್ಡ ಮೊತ್ತದ ವೇತನವಾಗಿ ಕಾಣಿಸಿದ್ರೂ ಇಂಗ್ಲೆಂಡ್‌ನ ವೆಚ್ಚ, ಜೀವನಶೈಲಿಗೆ ಹೋಲಿಸಿದ್ರೆ ಕಡಿಮೇನೆ. ಹೀಗಾಗಿ ಕೇವಲ 35ನೇ ವಯಸ್ಸಿಗೆ 10 ಕೋಟಿ ರೂ. ಉಳಿಸಿ ನಿವೃತ್ತಿಯಾಗೋದೆಂದ್ರೆ ಸಾಮಾನ್ಯ ಸಂಗತಿಯೇನಲ್ಲ. ಹಾಗಾದ್ರೆ ಇಷ್ಟು ಹಣ ಉಳಿಸಲು ಡೊನೆಗನ್ಗೆ ಹೇಗೆ ಸಾಧ್ಯವಾಯ್ತು? ಇದಕ್ಕೆ ಆಕೆ ನೀಡಿರೋ ಸರಳ ಉತ್ತರ ವೆಚ್ಚ ಕಡಿತ. 

ದುಂದು ವೆಚ್ಚಕ್ಕೆ ಕಡಿವಾಣ
ಕಟೈ ಕುಟುಂಬದ ಬಳಿ ನೆಮ್ಮದಿಯ ಜೀವನ ನಡೆಸಲು ಸಾಕಾಗುವಷ್ಟು ಹಣವಿತ್ತು. ಆದ್ರೂ ಆಕೆ ಮತ್ತು ಅವಳ ಕುಟುಂಬ ಸದಸ್ಯರು ರಜಾದಿನಗಳ ಮೋಜು-ಮಸ್ತಿ ಅಥವಾ ಹೋಟೆಲ್‌, ಪಬ್‌ಗಳಲ್ಲಿನ ಪಾರ್ಟಿಗಳಿಗೆ ಹೆಚ್ಚಿನ ಹಣ ವ್ಯಯಿಸುತ್ತಿರಲಿಲ್ಲ. ಸ್ನೇಹಿತರನ್ನು ಮನೆಗೇ ಕರೆದು ಪಾರ್ಟಿ ಮಾಡುತ್ತಿದ್ದರು. ಹೀಗೆ ಮಾಡೋದ್ರಿಂದ ಕಡಿಮೆ ಖರ್ಚಿನಲ್ಲಿ ಪಾರ್ಟಿ ಮುಗಿಯುತ್ತಿತ್ತು. ಇನ್ನು ಮನೆಯ ಹೊರಗಿನ ಆಹಾರಗಳಿಗೆ ಹೆಚ್ಚಿನ ಹಣ ವ್ಯಯಿಸುತ್ತಿರಲಿಲ್ಲ. ಮನೆಯಿಂದಲೇ ಬಾಕ್ಸ್ಗಳನ್ನು ಕೊಂಡು ಹೋಗುತ್ತಿದ್ದ ಕಾರಣ ಹೋಟೆಲ್‌ಗೆ ಹಣ ವ್ಯಯಿಸೋದು ತಪ್ಪಿತ್ತು. ಇದು ಜೇಬು ಹಾಗೂ ಆರೋಗ್ಯ ಎರಡಕ್ಕೂ ಹಿತಕರವಾಗಿತ್ತು. ಇನ್ನು ಸೆಕೆಂಡ್‌ ಹ್ಯಾಂಡ್‌ ಕಾರ್‌ಗಳನ್ನು ಖರೀದಿಸಿ ಬಳಸೋ ಮೂಲಕ ಅಲ್ಲೂ ವೆಚ್ಚಕ್ಕೆ ಕಡಿವಾಣ ಹಾಕಿದ್ದರು. ಬಾಲ್ಯದಿಂದಲೂ ಹಣವನ್ನು ಖರ್ಚು ಮಾಡೋದಕ್ಕಿಂತ ಉಳಿತಾಯ ಮಾಡೋದ್ರಲ್ಲಿ ಕಟೈ ಖುಷಿ ಕಾಣುತ್ತಿದ್ದಳಂತೆ. ಆಕೆಯೇ ಹೇಳೋ ಪ್ರಕಾರ ಅವಳಿಗೆ ಸಿಗೋ ಪಾಕೆಟ್‌ ಮನಿಯನ್ನು ಖರ್ಚು ಮಾಡದೆ ಉಳಿಸುತ್ತಿದ್ದಳಂತೆ. ಹೆಚ್ಚೆಚ್ಚು ಹಣ ಸಂಗ್ರಹವಾದಂತೆ ಆಕೆಯ ಖುಷಿಯೂ ಹೆಚ್ಚುತ್ತಿತ್ತಂತೆ. 

e-Shram portal: ಹೆಸರು ನೋಂದಾಯಿಸಿದ್ರೆ ಕಾರ್ಮಿಕರಿಗೇನು ಲಾಭ?

ಮದುವೆಯೂ ಸರಳ
2005ರ ಜನವರಿಯಲ್ಲಿ ಪ್ರಾಜೆಕ್ಟ್‌ ಸಲುವಾಗಿ ಕೋಸ್ಟ ರಿಕಾಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಟೈ ತನ್ನ ಪತಿ ಅಲನ್‌ ಅವರನ್ನು ಮೊದಲ ಬಾರಿಗೆ ಭೇಟಿ ಆಗುತ್ತಾಳೆ. ಇವರಿಬ್ಬರೂ ವೆಚ್ಚ ಹಾಗೂ ಉಳಿತಾಯಕ್ಕೆ ಸಂಬಂಧಿಸಿ ಸಮಾನ ಮನಸ್ಥಿತಿ ಹೊಂದಿದ್ದ ಕಾರಣ ಸರಳವಾಗಿ ವಿವಾಹವಾಗಲು ನಿರ್ಧರಿಸುತ್ತಾರೆ. ಅದರಂತೆ 2013ರ ಜೂನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಟೈ ದಂಪತಿ ಸ್ಥಳೀಯ ಸಮುದಾಯ ಭವನದಲ್ಲಿ ಸ್ನೇಹಿತರ ಸಹಾಯದಿಂದ ಎಲ್ಲ ಸಿದ್ಧತೆಗಳನ್ನು ಮಾಡೋ ಜೊತೆ ಇ-ಮೇಲ್‌ ಮೂಲಕವೇ ಸ್ನೇಹಿತರು, ಬಂಧುಗಳಿಗೆ ಆಹ್ವಾನ ನೀಡುತ್ತಾರೆ. ಇಂಥ ಕ್ರಮಗಳಿಂದಾಗಿ ಹೆಚ್ಚು ವೆಚ್ಚವಿಲ್ಲದೆ ಮದುವೆ ನಡೆಯುತ್ತದೆ. 

ಮದುವೆ ಬಳಿಕವೂ ವೆಚ್ಚಕ್ಕೆ ಕಡಿವಾಣ
ಮದುವೆ ಬಳಿಕ ಕಟೈ ವೇತನದಲ್ಲಿ ಹೆಚ್ಚಳವಾದ್ರೂ ಖರ್ಚಿನ ವಿಷಯದಲ್ಲಿ ಅವರ ಜಿಪುಣತನ ಮುಂದುವರಿಯಿತು. 

FIRE ಆಂದೋಲನವೇ ಸ್ಫೂರ್ತಿ
ಕಟೈ 2015ರಲ್ಲಿ FIRE (Financial Independence, Retire Early) ಆಂದೋಲನದ ಬಗ್ಗೆ ತಿಳಿದುಕೊಂಡಳು. ಈ ಆಂದೋಲನ ವೆಚ್ಚವನ್ನು ಕಡಿತಗೊಳಿಸಲು ಹಾಗೂ ಪ್ರತಿ ಪೈಸೆಯನ್ನು ಹೇಗಾದರೂ ಮಾಡಿ ಉಳಿಸಲು ಪ್ರಯತ್ನಿಸಿ ಎಂಬ ಸಲಹೆ ನೀಡುತ್ತದೆ. ಕಟೈ ಹಾಗೂ ಅಲನ್‌ ಇದ್ರಿಂದ ಪ್ರಭಾವಿತರಾದರು ಕೂಡ.

ಬ್ಯಾಂಕ್ ಲಾಕರ್ ಹೊಸ ನಿಯಮ

10 ಕೋಟಿ ಉಳಿತಾಯದ ಗುರಿ
ಕಟೈ ದಂಪತಿ (Couple) 10 ಕೋಟಿ ಉಳಿತಾಯ ಮಾಡೋ ಗುರಿ ನಿಗದಿಪಡಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯನಿರತರಾದರು. ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ (Investment) ಮಾಡಿ ಹಣ ಸಂಪಾದಿಸೋದು ಹೇಗೆ ಎಂಬ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದರು. ಕಟೈ ಹೇಳೋ ಪ್ರಕಾರ ಅವರಿಬ್ಬರೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಗುಣಮಟ್ಟದ ಜೀವನ (Standard of living) ನಡೆಸಲು ಬಯಸಿದ್ದರು. 2019ರ ಮಾರ್ಚ್‌ ಹಾಗೂ ಏಪ್ರಿಲ್‌ ನಡುವೆ ಕಟೈ ದಂಪತಿ ತಮ್ಮ 10 ಕೋಟಿ ಉಳಿತಾಯದ ಗುರಿ ತಲುಪಿದರು. ಆ ಬಳಿಕ ಕಟೈ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದಳು. ಆಕೆಯ ನಿರ್ಧಾರವನ್ನು ಪತಿ ಅಲನ್‌ ಕೂಡ ಬೆಂಬಲಿಸಿದ್ದಾರೆ. ಆದ್ರೆ ಅಲನ್‌ ತನ್ನ ಉದ್ಯಮವನ್ನು ಇನ್ನೂ ಮುಂದುವರಿಸುತ್ತಿದ್ದಾರೆ. ಆದ್ರೆ ಪ್ರತಿದಿನ ಕೆಲಸದಲ್ಲಿ ತೊಡಗೋದಿಲ್ಲ. ಸದ್ಯಕ್ಕೆ ಇವರಿಬ್ಬರೂ ಥೈಲ್ಯಾಂಡ್‌ನಿಂದ ಮೆಕ್ಸಿಕೋ ತನಕ ಸೈಕ್ಲಿಂಗ್‌ (Cycling), ಹೈಕಿಂಗ್‌ (Hiking) ಎಂದು ಸುತ್ತಾಡುತ್ತ ಅಲೆಮಾರಿ ಬದುಕನ್ನು ಆಸ್ವಾದಿಸುತ್ತಿದ್ದಾರೆ. 

ಉಳಿತಾಯದ ಪಾಠ
ಖರ್ಚಿನ ಮೇಲೆ ಹಿಡಿತ ಸಾಧಿಸೋದು ಹೇಗೆ ಎಂಬ ಕುರಿತು ಕಟೈ 10 ವಾರಗಳ ಉಚಿತ ಆನ್‌ಲೈನ್‌ ಕೋರ್ಸ್ (Online Course) ನಡೆಸುತ್ತಿದ್ದಾಳೆ. ಇದಕ್ಕಾಗಿ ಆಕೆ ರೆಬೆಲ್‌ ಫೈನಾನ್ಷ್ ಸ್ಕೂಲ್‌ ಎಂಬ ಸಂಸ್ಥೆಯನ್ನು ಕೂಡ ಪ್ರಾರಂಭಿಸಿದ್ದಾಳೆ.