Asianet Suvarna News Asianet Suvarna News

e-Shram portal: ಹೆಸರು ನೋಂದಾಯಿಸಿದ್ರೆ ಕಾರ್ಮಿಕರಿಗೇನು ಲಾಭ?

ಅಸಂಘಟಿತ ವಲಯದ ಕಾರ್ಮಿಕರ ಮಾಹಿತಿ ಸಂಗ್ರಹಿಸೋ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ ಪೋರ್ಟಲ್ ಪ್ರಾರಂಭಿಸಿದೆ.ಇದ್ರಲ್ಲಿಹೆಸರು ನೋಂದಾಯಿಸೋದ್ರಿಂದ ಕಾರ್ಮಿಕರಿಗೆ ಸಿಗೋ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Benefits to the laborers from e-Shram portal
Author
Bangalore, First Published Sep 23, 2021, 2:36 PM IST

ಅಸಂಘಟಿತ ವಲಯದ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ ಆಗಸ್ಟ್ 26ರಂದು ʼಇ-ಶ್ರಮʼ (e-Shram ) ಪೋರ್ಟಲ್ಗೆ ಚಾಲನೆ ನೀಡಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಕಾರ್ಮಿಕರು ಈ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿದ್ದಾರೆ. ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್, ಕೋವಿಡ್ ಪರಿಹಾರ ಯೋಜನೆ, ಅಟಲ್ ವಿಮಾ ಕಲ್ಯಾಣ ಯೋಜನೆ ಪ್ರಯೋಜನ ಸಿಗಲಿದೆ. 

ಬ್ಯಾಂಕ್ ಲಾಕರ್ ಹೊಸ ನಿಯಮ: ವಸ್ತು ಕಳೆದು ಹೋದ್ರೆ ಸಿಗಲಿದೆ ಪರಿಹಾರ!

ಏನಿದು e-Shram ಪೋರ್ಟಲ್?
ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಮನೆಗೆಲಸದವರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರ ನೋಂದಣಿ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ಕಾರಣಕ್ಕೆ ಇ-ಶ್ರಮ ಪೋರ್ಟಲ್ ಪ್ರಾರಂಭಿಸಿದ್ದು, ಇದರಲ್ಲಿ ಕಾರ್ಮಿಕರು ತಮ್ಮ ಹೆಸರು ಮತ್ತು ಮಾಹಿತಿ ನೋಂದಾಯಿಸಬಹುದು. ಹೀಗೆ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ವಿಶಿಷ್ಟ ಗುರುತು ಸಂಖ್ಯೆ ಹೊಂದಿರೋ ಇ-ಶ್ರಮ ಕಾರ್ಡ್ ನೀಡಲಾಗುತ್ತದೆ. 

ಇ-ಶ್ರಮ ಕಾರ್ಡ್
ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ 12 ಅಂಕಿಗಳ ವಿಶಿಷ್ಟ ಗುರುತಿನ ಇ-ಶ್ರಮ ಕಾರ್ಡ್ ನೀಡಲಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕರಿಗೆ ಈ ಕಾರ್ಡ್ ನೆರವು ನೀಡಲಿದೆ. ಇದು ಜೀವಿತಾವಧಿ ವ್ಯಾಲಿಡಿಟಿ ಹೊಂದಿದೆ. ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಇದೊಂದೇ ಕಾರ್ಡ್ ಸಾಕು. 

ಪಾಸಿಟಿವ್ ಪೇ ವ್ಯವಸ್ಥೆ ಅಂದ್ರೇನು? ಅದ್ರಿಂದ ಯಾರಿಗೆ ಲಾಭ?

ಯಾರು ಹೆಸರು ನೋಂದಾಯಿಸಬಹುದು? 
16 ರಿಂದ 59 ವಯಸ್ಸಿನ ಕಟ್ಟಡ ನಿರ್ಮಾಣ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು. 

ಯಾವೆಲ್ಲ ದಾಖಲೆಗಳು ಅಗತ್ಯ?
ಹೆಸರು, ಉದ್ಯೋಗ, ಕಾಯಂ ವಿಳಾಸ, ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವದ ಮಾಹಿತಿ, ಕುಟುಂಬ ಸದಸ್ಯರ ಮಾಹಿತಿ, ಆಧಾರ್ ಸಂಖ್ಯೆ, ಆಧಾರ್ ಸಂಖ್ಯೆಗೆ ಜೋಡಣೆಯಾಗಿರೋ ಮೊಬೈಲ್ ನಂಬ್ರ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಮಾಹಿತಿಗಳಿಗೆ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು. 
 

Benefits to the laborers from e-Shram portal

ಪ್ರಯೋಜನಗಳೇನು?
-ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ್ರೆ 2 ಲಕ್ಷ ರೂ. ಸಿಗಲಿದೆ. 
-ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕ ಅರ್ಹನಾಗಿದ್ದಾನೆ. 
-ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ ಕಾರ್ಡ್ ಹೊಂದಿರೋರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ. 

ಉದ್ಯೋಗಿಗಳು EPF ಎರಡು ಖಾತೆ ತೆರೆಯೋದು ಅಗತ್ಯವೇ?

ನೋಂದಣಿ ಹೇಗೆ?
ಕಾರ್ಮಿಕರು https://eshram.gov.in ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಬೇಕು. ಈ ಪೋರ್ಟಲ್ಗೆ ಭೇಟಿ ನೀಡಿ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ಭರ್ತಿ ಮಾಡಬೇಕು. ನೋಂದಣಿ ಯಶಸ್ವಿಯಾದ್ರೆ ವಿಶಿಷ್ಟ ಸಂಖ್ಯೆ ಹೊಂದಿರೋ ಇ-ಶ್ರಮ ಕಾರ್ಡ್ ನೀಡಲಾಗುತ್ತದೆ. ಕಾರ್ಮಿಕರು ಸ್ವತಃ ನೋಂದಾಣಿ ಮಾಡಿಕೊಳ್ಳಬಹುದು. ಇಲ್ಲವೆ ಸಾಮಾನ್ಯ ಸೇವಾ ಕೇಂದ್ರಗಳು ಅಥವಾ ಪ್ರಾದೇಶಿಕ ಕಚೇರಿಗಳ ಮೂಲಕ ಕೂಡ ನೋಂದಣಿ ಮಾಡಿಸಬಹುದು. ನೋಂದಾಣಿಗೆ ಯಾವುದೇ ಶುಲ್ಕ ವಿಧಿಸಿಲ್ಲ. 

ನೆರವಿಗೆ ಹೆಲ್ಪ್ಲೈನ್ (Help Line)
ನೋಂದಣಿ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದ್ರೆ 14434 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು. ಹಿಂದಿ, ಇಂಗ್ಲಿಷ್, ತಮಿಳು, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತೆಲುಗು ಹಾಗೂ ಅಸಾಮಿ ಭಾಷೆಗಳಲ್ಲಿ ಹೆಲ್ಪ್ಲೈನ್ ಸೌಲಭ್ಯವಿದೆ. 
 

Follow Us:
Download App:
  • android
  • ios