ಬೆಂಗಳೂರು(ಆ.22):  ಕೊರೋನಾ ಸಂಕಷ್ಟದಿಂದ ಈಗಾಗಲೇ ಶೇ.20ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ವಹಿವಾಟಿನಲ್ಲಿ ಶೇ.30 ರಿಂದ 70 ರಷ್ಟು ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ಮನವಿ ಮಾಡಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಂಕಷ್ಟದಿಂದ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಜಿಲ್ಲಾವಾರು ಸ್ಥಳೀಯ ಕೈಗಾರಿಕಾ ಸಂಘ-ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿ ತಂದಿರುವ ಎಂಎಸ್‌ಎಂಇ ಸಾಲಗಳ ಪಾವತಿ ಅವಧಿ ವಿಸ್ತರಣೆ ಅಸಮರ್ಪಕವಾಗಿದ್ದು ಅದನ್ನು ವರ್ಷಾಂತ್ಯದವರೆಗೆ ವಿಸ್ತರಿಸಬೇಕು. ಜಿಎಸ್‌ಟಿ ರಿಟರ್ನ್‌ ಫೈಲಿಂಗ್‌ ಸರಳೀಕರಣಗೊಳಿಸಬೇಕು. ಜತೆಗೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಉದ್ಯೋಗಿಗಳ ವೇತನ ಪಾವತಿಸಲು ಹಣಕಾಸಿನ ವರ್ಷದ ಅಂತ್ಯದವರೆಗೆ ಸೂಕ್ತ ಹಣಕಾಸಿನ ನೆರವು ನೀಡಬೇಕು. ಎಂಎಸ್‌ಎಂಇ ಸಾಲಗಳ ಬಡ್ಡಿ ದರವನ್ನು ಶೇ.6ಕ್ಕೆ ಇಳಿಸಬೇಕು. ಸರ್ಕಾರ ಎಂಎಸ್‌ಎಂಇ ಪರ ಪಿಎಫ್‌ ಕೊಡುಗೆ ನೀಡಿದರೆ ಇಎಸ್‌ಐ ಕೊಡುಗೆಯನ್ನೂ ನೀಡಬೇಕು. ಉದ್ಯಮಗಳಿಗೆ ಮತ್ತಷ್ಟು ಸರಳವಾಗಿ ಸಾಲ ದೊರೆಯುವಂತಾಗಬೇಕು. ಎನ್‌ಪಿಎ ಮಾನದಂಡ ಸಡಿಲಗೊಳಿಸಬೇಕು ಎಂದು ಮನವಿ ಮಾಡಿದರು.

ಹೊಸ ಕೈಗಾರಿಕಾ ನೀತಿ, ಕೈಗಾರಿಕೋದ್ಯಮಿಗಳಿಗೆ ಸಹಕಾರಿ: ಸಚಿವ ಜಗದೀಶ ಶೆಟ್ಟರ್‌

ರಾಜ್ಯ ಸರ್ಕಾರಕ್ಕೆ ಮನವಿ:

ರಾಜ್ಯ ಸರ್ಕಾರ ಸಣ್ಣ ಕೈಗಾರಿಕೆಗಳ ಉತ್ತೇಜಿಸಲು ಕೈಗಾರಿಕಾ ಚಟುವಟಿಕೆಗಳಿಗಾಗಿ ಭೂಮಿ ಲಭ್ಯತೆ, ಸಮರ್ಪಕ ಬೆಲೆ, ವಿದ್ಯುತ್‌ ಸರಬರಾಜು, ಆನ್‌ಲೈನ್‌ ವ್ಯವಸ್ಥೆ ಕಾರ್ಯರೂಪಕ್ಕೆ ತರುವುದು, ಏಕಗವಾಕ್ಷಿ ವ್ಯವಸ್ಥೆಯಲ್ಲಿನ ತೊಂದರೆಗಳ ನಿವಾರಣೆ, ಮೂಲಭೂತ ಸೌಕರ್ಯಗಳು, ರೆಡ್‌ಟೇಪ್‌ ಮತ್ತು ಬಾಡಿಗೆ ನೀಡುವ ವಿಷಯಗಳಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು. ಅಲ್ಲದೆ, ಹೊಸ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಬೇಕು. ಇವುಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಹೊಸ ಇಂಡಸ್ಟ್ರಿಯಲ್‌ ಎಸ್ಟೇಟ್‌ ನಿರ್ಮಾಣ, ನೂತನವಾಗಿ ನಿರ್ಮಾಣವಾಗಿರುವ ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿನ ತೊಂದರೆ ನಿವಾರಿಸಬೇಕು. ಜಲಮಂಡಳಿಯು ಕೈಗಾರಿಕೆಗಳಿಗೆ ವಿಧಿಸುತ್ತಿರುವ ಪ್ರೊರೇಟಾ ಶುಲ್ಕವನ್ನು ಚದರ ಮೀಟರ್‌ಗೆ .400 ರಿಂದ .200ಕ್ಕೆ ಇಳಿಸಬೇಕು. ಅಗ್ನಿಶಾಮಕ ದಳದ ಪರಿಶೀಲನೆ ಮತ್ತು ಅನುಮೋದನೆ ಶುಲ್ಕ ಸಡಿಲಗೊಳಿಸಬೇಕು ಎಂದು ಹೇಳಿದರು.

ಈ ವೇಳೆ ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎನ್‌.ಆರ್‌.ಜಗದೀಶ್‌, ಜಂಟಿ ಕಾರ್ಯದರ್ಶಿ ಜಯಕುಮಾರ್‌, ಜಂಟಿ ಕಾರ್ಯದರ್ಶಿ (ಗ್ರಾಮೀಣ) ಚನ್ನಬಸಪ್ಪ ಹೊಂಡದಕಟ್ಟಿ, ಖಜಾಂಚಿ ಎಸ್‌.ಶಂಕರನ್‌ ಹಾಜರಿದ್ದರು.

ಕಾಸಿಯಾ ಪ್ರಮುಖ ಯೋಜನೆಗಳು

* 2021ರ ಮೇ ತಿಂಗಳಲ್ಲಿ ದಾಬಸ್‌ಪೇಟೆಯಲ್ಲಿರುವ ಕಾಸಿಯಾ ವಸ್ತು ಪ್ರದರ್ಶನ ಮೈದಾನದಲ್ಲಿ ಅಂತರಾಷ್ಟ್ರೀಯ ಬೃಹತ್‌ ವ್ಯಾಪಾರ ಮೇಳ ಹಮ್ಮಿಕೊಳ್ಳಲಾಗುವುದು.
* ವ್ಯಾಪಾರ, ಹೂಡಿಕೆ ವಿಸ್ತರಿಸಲು ಯೂರೋಪ್‌, ಸೌತ್‌ ಈಸ್ಟ್‌ ಏಷಿಯಾ, ಆಫ್ರಿಕಾಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಹಭಾಗಿತ್ವ ಸ್ಥಾಪನೆ.
* ಎಂಎಸ್‌ಎಂಇ ಸಚಿವಾಲಯದೊಂದಿಗೆ ಸೇರಿ ಖರೀದಿದಾರ ಮತ್ತು ಮಾರಾಟಗಾರರ ಸಮಾವೇಶ ಆಯೋಜಿಸುವುದು.