ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ, 2024-25ನೇ ಹಣಕಾಸು ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಸ್ವೀಕಾರದಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿದೆ.
ನವದೆಹಲಿ (ಮೇ.28): ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ, 2024-25ನೇ ಹಣಕಾಸು ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಸ್ವೀಕಾರದಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. 2023-24ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು. ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಅನ್ವಯ, 2024-25 ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಒಟ್ಟು 4.2 ಲಕ್ಷ ಕೋಟಿ ರು. ಮೊತ್ತದ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.
ಇದರಲ್ಲಿ 1.6 ಲಕ್ಷ ಕೋಟಿ ರು. ಹೂಡಿಕೆಯೊಂದಿಗೆ ಮಹಾರಾಷ್ಟ್ರ (ಶೇ.39ರಷ್ಟು ಪಾಲು) ಮೊದಲ ಸ್ಥಾನ ಪಡೆದುಕೊಂಡಿದ್ದರೆ, 56000 ಕೋಟಿ ರು. ಬಂಡವಾಳ ಸ್ವೀಕಾರದೊಂದಿಗೆ ಕರ್ನಾಟಕ (ಶೇ.13ರಷ್ಟು ಪಾಲು) 2ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ದೆಹಲಿ, ಗುಜರಾತ್, ತಮಿಳುನಾಡು, ಹರ್ಯಾಣ, ತೆಲಂಗಾಣ ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ.
ಇನ್ನು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2024-25ನೇ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಒಟ್ಟು 4.2 ಲಕ್ಷ ಕೋಟಿ ರು. ಹೂಡಿಕೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.13ರಷ್ಟು ಏರಿಕೆಯಾಗಿದೆ. ಅತ್ತ ಷೇರುಗಳ ಒಳಹರಿವು, ಮರುಹೂಡಿಕೆ ಮತ್ತು ಇತರ ಬಂಡವಾಳ ಸೇರಿ ಹೂಡಿಕೆಯಲ್ಲಿ ಶೇ.14ರಷ್ಟು ಏರಿಕೆಯಾಗಿ 6.9 ಲಕ್ಷ ಕೋಟಿ ರು. ಆಗಿದೆ.
ಟಾಪ್ ಹೂಡಿಕೆ ದೇಶಗಳು: 2024-25ನೇ ವರ್ಷದಲ್ಲಿ ಸಿಂಗಾಪುರ ಅತಿ ಹೆಚ್ಚು 1.2 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ. ಮಾರಿಷಸ್, ಅಮೆರಿಕ, ನೆದರ್ಲೆಂಡ್, ಯುಎಇ, ಜಪಾನ್, ಸೈಪ್ರಸ್, ಬ್ರಿಟನ್, ಜರ್ಮನಿ ನಂತರದ ಸ್ಥಾನಗಳಲ್ಲಿವೆ.
ಟಾಪ್-5 ರಾಜ್ಯಗಳು
ಸ್ಥಾನ ರಾಜ್ಯಗಳು ಹೂಡಿಕೆ
1. ಮಹಾರಾಷ್ಟ್ರ 1.6 ಲಕ್ಷ ಕೋಟಿ ರು.
2. ಕರ್ನಾಟಕ 56,000 ಕೋಟಿ ರು.
3. ದೆಹಲಿ 51,000 ಕೋಟಿ ರು
4. ಗುಜರಾತ್ 48,000 ಕೋಟಿ ರು.
5. ತಮಿಳುನಾಡು 25,000 ಕೋಟಿ ರು.
