ರಾಜ್ಯದಲ್ಲಿ ಹಾಲು, ಗ್ಯಾಸ್‌, ವಿದ್ಯುತ್‌ ದರ ಹೆಚ್ಚಳವಾದ ಬೆನ್ನಲ್ಲೇ ಹೋಟೆಲ್‌ಗಳ ಮಾಲೀಕರು ಕಾಫಿ, ಟೀ, ತಿಂಡಿ, ಊಟದ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು (ಜೂ.22): ರಾಜ್ಯದಲ್ಲಿ ಹಾಲು, ಗ್ಯಾಸ್‌, ವಿದ್ಯುತ್‌ ದರ ಸೇರಿ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ, ಟೀ, ತಿಂಡಿ, ಊಟದ ದರವನ್ನು ಹೆಚ್ಚಳ ಮಾಡುವುದಾಗಿ ಬೆಂಗಳೂರು ಹೋಲೆಟ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು, ಒಂದು ಕಡೆ ವಿದ್ಯುತ್ ದರ ಹೆಚ್ಚಳವಾಗಿದೆ. ಮತ್ತೊಂದೆಡೆ ಹಾಲಿನ ದರ ಹೆಚ್ಚಳದ ಬಗ್ಗೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಭೀಮಾನಾಯ್ಕ ಅವರು ನಿರ್ಧಾರ ಮಾಡಿದ್ದಾರೆ. ಜೊತೆಗೆ, ಹೋಟೆಲ್ ನಲ್ಲಿ ಉಪಯೋಗಿಸುವ ಗ್ಯಾಸ್, ತರಕಾರಿ, ಬೇಳೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ದರ ಏರಿಕೆಯ ಹೊಡೆತ ನಮ್ಮ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವು ಕೂಡ ಹೋಟೆಲ್‌ನಲ್ಲಿಯೂ ಕಾಫಿ, ತಿಂಡಿ, ಊಟದ ದರ ಏರಿಕೆ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಈ ಬಗ್ಎ ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಚರ್ಚೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ನಂದಿನಿ ಹಾಲಿನ ದರ 5 ರೂ. ಹೆಚ್ಚಳ: ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧಾರ

ಸಾರ್ವಜನಿಕರನ ಜೇಬಿಗೆ ಕತ್ತರಿ ಗ್ಯಾರಂಟಿ: ರಾಜ್ಯಾದ್ಯಂತ ಮನೆಯಲ್ಲಿ ಅಡುಗೆ ಮಾಡದೇ ಹಾಗೂ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಹೋಟೆಲ್‌ಗಳಲ್ಲಿ ಕಾಫಿ,ಟೀ, ತಿಂಡಿ ಮತ್ತು ಊಟಗಳನ್ನು ಮಾಡುತ್ತಿದ್ದ ಎಲ್ಲ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲು ಹೋಟೆಲ್‌ಗಳಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ, ಈಗಾಗಲೇ ಗ್ಯಾಸ್‌, ವಿದ್ಯುತ್‌ ದರ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸರ್ಕಾರ ಸುಳಿವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಮಾಲೀಕರ ಸಂಘದಿಂದ ದರ ಹೆಚ್ಚಳದ ಚರ್ಚೆ ಮಾಡಲಾಗುತ್ತಿದ್ದು, ಬಹುತೇಕ ಬೆಲೆ ಹೆಚ್ಚಳವಾಗಲಿದೆ ಎಂದು ಹೋಟೆಲ್‌ ಮಾಲೀಕರು ತಿಳಿಸಿದ್ದಾರೆ.

ಬೇಕರಿ ತಿಂಡಿಗಳ ಬೆಲೆ ಏರಿಕೆಯೂ ಖಚಿತ: ಇನ್ನು ಹಾಲಿನ ದರ ಹೆಚ್ಚಳವಾದಲ್ಲಿ ಹಾಲಿನಿಂದ ಉತ್ಪಾದನೆ ಮಾಡುವ ಎಲ್ಲ ಬೇಕರಿ ಉತ್ಪಾದನೆಗಳ ಮೇಲೆಯೂ ಹೊಡೆತ ಬೀಳಲಿದೆ. ಆದ್ದರಿಂದ ಹೋಟೆಲ್‌ಗಳ ಬೆನ್ನಲ್ಲೇ ರಾಜ್ಯಾದ್ಯಂತ ಬೇಕರಿಯ ಉತ್ಪನ್ನಗಳಾದ ಎಲ್ಲ ಸಿಹಿ ಪದಾರ್ಥಗಳು, ಕೇಕ್‌, ದೂದ್‌ ಪೇಡ, ಕೋವಾ ಪೇಡಾ ಸೇರಿ ಎಲ್ಲದರ ಬೆಲೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಇನ್ನು ಗ್ಯಾಸ್‌ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಮಾದರಿಯ ಕೇಕ್‌ ಹಾಗೂ ಬ್ರೆಡ್‌ ಮತ್ತು ಬನ್‌ಗಳ ಬೆಲೆಯಲ್ಲೂ ಹೆಚ್ಚಳವಾಗುವ ಸಧ್ಯತೆ ಕಂಡುಬರುತ್ತಿದೆ. ಒಟ್ಟಾರೆ, ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತವಾಗಿದೆ.

ಹೋಟೆಲ್‌ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌ಗೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ

ಬೆಂಗಳೂರು (ಜೂ.21): ರಾಜ್ಯದ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೂಲಕ ರೈತರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ನೂತನ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿನಿ ಹಾಲು ರಾಷ್ಟ್ರಮಟ್ಟದ ಬ್ರಾಂಡ್ ಆಗಿದೆ. ಖಾಸಗಿಯವರಿಗೆ ಸ್ಪರ್ಧೆ ನೀಡುವ ಕೆಲಸವನ್ನ ಕೆಎಂಎಫ್ ಮಾಡಲಿದೆ. ರೈತರಿಗೆ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರೋತ್ಸಾಹಧನ ಮೊತ್ತವನ್ನು ಇನ್ನೂ 2 ರೂ. ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ. ಆದ್ದರಿಂದ ಗ್ರಾಹಕರಿಕೆ ಮಾರಾಟ ಮಾಡುವ ನಂದಿನಿ ಹಾಲಿನ ಪ್ರತಿ ಲೀಟರ್ ಗೆ 5 ರೂ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.