- ಅಪೆಕ್ಸ್‌ ಬ್ಯಾಂಕಲ್ಲಿ ವಿಲೀನಕ್ಕೆ ಪರಿಶೀಲನೆ: ಎಸ್ಟಿಎಸ್‌- ಡಿಸಿಸಿ ಬ್ಯಾಂಕ್‌ಗಳನ್ನು ಮುಚ್ಚುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲನೆ - ಕೇವಲ ಅಪೆಕ್ಸ್‌ ಬ್ಯಾಂಕ್‌ ಹಾಗೂ ಪ್ಯಾಕ್ಸ್‌ ಉಳಿಸಿಕೊಳ್ಳಲು ಚಿಂತನೆ

ಬೆಂಗಳೂರು(ಮಾ.30) ರಾಜ್ಯದಲ್ಲಿ ಅಪೆಕ್ಸ್‌ ಬ್ಯಾಂಕ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘ (ಪ್ಯಾಕ್ಸ್‌) ಮಾತ್ರ ಉಳಿಸಿಕೊಂಡು ಡಿಸಿಸಿ ಬ್ಯಾಂಕ್‌ಗಳನ್ನು ಮುಚ್ಚುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಸಹಕಾರ ಖಾತೆ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್‌ನಲ್ಲಿ ಬಿಜೆಪಿಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈಗಾಗಲೇ ಗುಜರಾತ್‌, ಕೇರಳ ಹಾಗೂ ಛತ್ತೀಸ್‌ಗಢ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್‌ ಬ್ಯಾಂಕುಗಳಲ್ಲಿ ವಿಲೀನಗೊಳಿಸಲಾಗಿದೆ. ಕೇವಲ ಅಪೆಕ್ಸ್‌ ಬ್ಯಾಂಕ್‌ ಹಾಗೂ ಪ್ಯಾಕ್ಸ್‌ ಮಾತ್ರ ಉಳಿಸಿಕೊಳ್ಳಲಾಗಿದೆ. ಆದರೆ ರಾಜ್ಯದಲ್ಲೂ ಇದೇ ವ್ಯವಸ್ಥೆ ಜಾರಿಯಿಂದ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳನ್ನು ಕೇರಳ ಹಾಗೂ ಛತ್ತೀಸ್‌ಗಢ ರಾಜ್ಯಗಳಿಗೆ ಕಳುಹಿಸಿ ಅಧ್ಯಯನ ವರದಿ ಸಲ್ಲಿಸುವಂತೆ ಈಗಾಗಲೇ ಸೂಚಿಸಿದ್ದು, ವರದಿ ಸಲ್ಲಿಕೆಯಾದ ನಂತರ ರಾಜ್ಯಕ್ಕೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂಬುದನ್ನು ಪರಿಶೀಲಿಸಿ ನಿರ್ಧರಿಸಲಾಗುವುದು’ ಎಂದು ತಿಳಿಸಿದ್ದಾರೆ.

DCC Bank Scam: 15 ದಿನದಲ್ಲಿ ತನಿಖೆ ಪೂರ್ಣ: ಸಚಿವ ಸೋಮಶೇಖರ್‌

ಜೊತೆಗೆ ವರದಿ ಬಂದ ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಅಲ್ಲಿಂದ ಬರುವ ನಿರ್ದೇಶನ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಈಗಾಗಲೇ ರಾಜ್ಯದಲ್ಲಿರುವ 21 ಅಪೆಕ್ಸ್‌ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

ನಕಲಿ ಸಾಲ ನೀಡಿಲ್ಲ:
ರಾಜ್ಯದ ಯಾವುದೇ ಡಿಸಿಸಿ ಬ್ಯಾಂಕುಗಳಲ್ಲಿ ನಕಲಿ ಸಂಘದ ಹೆಸರಿನಲ್ಲಿ ಸಾಲ ನೀಡಿದ ಪ್ರಕರಣಗಳು ನಡೆದಿಲ್ಲ, ಒಂದು ವೇಳೆ ನಿರ್ದಿಷ್ಟಪ್ರಕರಣಗಳಿದ್ದರೆ ತನಿಖೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ: ರಮೇಶ್ ಕುಮಾರ್‌ರನ್ನು ಜೈಲಿಗೆ ಕಳ್ಸೋವರ್ಗು ಬಿಡಲ್ಲ: ಸುಧಾಕರ್

ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕುಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಹೆಸರಿನಲ್ಲಿ ಸಾಲ ನೀಡಲಾಗಿದೆ, ಕೆಲವೇ ವ್ಯಕ್ತಿಗಳಿಗೆ ಕೃಷಿಯೇತರ ಉದ್ದೇಶದ ಹೆಸರಿನಲ್ಲಿ ಸಾಲ ನೀಡಲಾಗಿದೆ ಎಂಬ ನಾರಾಯಣ ಸ್ವಾಮಿ ಅವರ ಆರೋಪಕ್ಕೆ ಉತ್ತರಿಸಿದ ಅವರು, ಸಾಲ ಪಡೆದು ಬಾಕಿ ಉಳಿಸಿಕೊಂಡಿರುವ ಖಾಸಗಿ ವ್ಯಕ್ತಿಗಳಿಂದ ಸಾಲ ವಸೂಲಾತಿಗೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸದರಿ ಡಿಸಿಸಿ ಬ್ಯಾಂಕುಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಅನೇಕರು ದೂರಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿಯಮದ ಪ್ರಕಾರ ತನಿಖೆ ನಡೆಯುತ್ತಿದೆ. ಒಂದು ತಿಂಗಳಲ್ಲಿ ತನಿಖಾ ವರದಿ ಬರಲಿದ್ದು, ನಂತರ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಹಕಾರ ಇಲಾಖೆಯ ಅಧಿಕಾರಿಗಳನ್ನು ಕೇರಳ, ಛತ್ತೀಸ್‌ಗಢಕ್ಕೆ ಕಳಿಸಿ ಅಧ್ಯಯನ ನಡೆಸಲಾಗುವುದು. ಅವರು ವರದಿ ನೀಡಿದ ನಂತರ ಅಪೆಕ್ಸ್‌ ಬ್ಯಾಂಕ್‌ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು ಮಾತ್ರ ಉಳಿಸಿಕೊಂಡು ಡಿಸಿಸಿ ಬ್ಯಾಂಕ್‌ಗಳನ್ನು ಮುಚ್ಚಿದರೆ ಎಷ್ಟುಅನುಕೂಲವಾಗುತ್ತದೆ ಎಂಬುದನ್ನು ಪರಿಶೀಲಿಸಿ ನಿರ್ಧರಿಸಲಾಗುವುದು.
- ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವ

ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ 2016-17ನೇ ಸಾಲಿನಿಂದ 2022ರ ಫೆಬ್ರವರಿ ಅಂತ್ಯದವರೆಗೂ ಒಟ್ಟು 64,854.21 ಲಕ್ಷರೂ ಸಾಲ ವಿತರಿಸಿದ್ದು, 825.49 ಲಕ್ಷರೂ ಸುಸ್ತಿಯಾಗಿದೆ ಮತ್ತು 198.10 ಕೋಟಿ ರೂ ಕೃಷಿಯೇತರ ಸಾಲ ವಿತರಿಸಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಸರ್ಕಾರದ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಅವರಿಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಉತ್ತರ ನೀಡಿದರು.ಸದನದಲ್ಲಿ ಡಿಸಿಸಿ ಬ್ಯಾಂಕಿನಿಂದ ಸಾಲ ನೀಡಲು ಇರುವ ಮಾನದಂಡಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುವಾಗ ಗುಂಪುಗಳು ಕನಿಷ್ಟ6 ತಿಂಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಿರಬೇಕು, ನಿಯತ ಕಾಲಿಕ ಯಶಸ್ವಿ ಉಳಿತಾಯ ಮಾಡಿರಬೇಕು, ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರಬೇಕು, ಸಂಘದ ಸದಸ್ಯರು ಕಾಲಕಾಲಕ್ಕೆ ಸಭೆ ನಡೆಸಿ ದಾಖಲಿಸಿರಬೇಕು ಎಂದು ಉತ್ತರಿಸಿದರು.