ಬೆಂಗಳೂರು(ಮಾ.22): ಓಲಾ ಕ್ಯಾಬ್ ಸೇವೆಗೆ ರಾಜ್ಯ ಸರ್ಕಾರ 6 ತಿಂಗಳುಗಳ ಕಾಲ ನಿಷೇಧ ಹೇರಿ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದ ಆರೋಪ ಮೇಲೆ ನಿಷೇಧ ಹೇರಲಾಗಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಸಾರಿಗೆ ನಿಯಮ ಉಲ್ಲಂಘನೆ ಮಾಡಿರುವ ಕಾರಣ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚರಿಸುವ, ಆ್ಯಪ್ ಆಧಾರಿತ ಸಾರಿಗೆ ಓಲಾ ಕ್ಯಾಬ್ ಸೇವೆಗೆ ಸಾರಿಗೆ ಇಲಾಖೆ ಆರು ತಿಂಗಳ ಕಾಲ ನಿಷೇಧ ಹೇರಿದೆ.

ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ವೆಬ್ ತಂತ್ರಜ್ಞಾನ ಅಗ್ರಿಗೇಟರ್ ಅಧಿನಿಯಮ- 2016ರ  ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ  ಓಲಾ ಸಂಸ್ಥೆ ಪರವಾನಗಿಯನ್ನು ಸಾರಿಗೆ ಇಲಾಖೆ ರದ್ದುಪಡಿಸಿದೆ.

ಈ ಕುರಿತು ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಕಳೆದ ಮಾರ್ಚ್ 18ರಂದು ಆದೇಶ ಹೊರಡಿಸಿದ್ದು, ಈ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ಓಲಾ ಪರವಾನಗಿಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಬೇಕು ಎಂದೂ ಆದೇಶಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಓಲಾ ಟ್ಯಾಕ್ಸಿ ಓಡಿಸಲು ಅನಿ ಟೆಕ್ನಾಲಜಿಸ್ ಸಂಸ್ಥೆ ಹೆಸರಿನಲ್ಲಿ ಓಲಾಗೆ 2021ರವರೆಗೆ ಪರವಾನಗಿ ನೀಡಲಾಗಿತ್ತು. ಆದರೆ ಓಲಾ ಕೇವಲ ಟ್ಯಾಕ್ಸಿಗಳನ್ನು ಮಾತ್ರವಲ್ಲದೆ ಬೈಕ್ ಟ್ಯಾಕ್ಸಿಗಳನ್ನೂ ಪ್ರಾರಂಭಿಸಿ ನಿಯಮವನ್ನು ಉಲ್ಲಂಘಿಸಿದೆ ಎಂದು ಇಲಾಖೆ ಆರೋಪಿಸಿದೆ.