ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೊಗಳಿದ್ದಾರೆ. ಆದರೆ, ಶಾಸಕ ಪ್ರಭು ಚೌವ್ಹಾಣ್ ಟೀಕಿಸಿದ್ದು, ಪಶು ಸಂಗೋಪನೆಗೆ ಏನೂ ನೀಡಿಲ್ಲ ಎಂದಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಮ್ಮ ಕ್ಷೇತ್ರದ ಬೇಡಿಕೆ ಈಡೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಸಮಾಜಮುಖಿ ಬಜೆಟ್ ಆಗಿದೆ. ಎಲ್ಲ ವರ್ಗಗಳು, ಸಮುದಾಯಕ್ಕೂ ಅನುದಾನ ಕೊಟ್ಟಿದ್ದಾರೆ. ಕರಾವಳಿ ಭಾಗಕ್ಕೆ ಒಳ್ಳೆಯ ಯೋಜನೆ ಘೋಷಣೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹಾಡಿ ಹೊಗಳಿದ್ದಾರೆ.

ಕರ್ನಾಟಕ ಬಜೆಟ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮ್ ಹೆಬ್ಬಾರ್ ಅವರು, ಇದೊಂದು ಸಮಾಜಮುಖಿ ಬಜೆಟ್. ಎಲ್ಲ ವರ್ಗಕ್ಕೂ ಸಮುದಾಯಕ್ಕೂ ಅಭಿವೃದ್ಧಿ ಕೊಟ್ಟಿದ್ದಾರೆ. ಕರಾವಳಿ ಭಾಗಕ್ಕೆ ಒಳ್ಳೆಯ ಯೋಜನೆ ಘೋಷಣೆ ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ನಾನು ಪಕ್ಷಪಾತ ಮಾಡಲ್ಲ. ಶಾಸಕನಾಗಿ ಹೇಳುತ್ತಿದ್ದೇನೆ ಒಳ್ಳೆಯ ಬಜೆಟ್ ಇದಾಗಿದೆ . ಇನ್ನು ಬಿಜೆಪಿ ಶಾಸಕರು ಬಜೆಟ್ ಬಗ್ಗೆ ಏನಾದರೂ ಆರೋಪ ಮಾಡಲಿ. ಆದರೆ, ನಾನು ಶಾಸಕನಾಗಿ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ತಿಳಿಸಿದರು.

ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರಭು ಚೌವ್ಹಾಣ್ ಅವರು, ಸಿದ್ದರಾಮಯ್ಯ ಅವರ ಬಜೆಟ್ ನಿರ್ಜೀವ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಜೀವ ಇಲ್ಲ. ಪಶು ಸಂಗೋಪನೆ ಇಲಾಖೆಗೆ ಏನೂ ಕೊಟ್ಟಿಲ್ಲ. ಕಸಾಯಿ ಖಾನೆಗೆ ಕೊಟ್ಟಿಲ್ಲ, ಪ್ರಾಣಿ ಸಹಾವಾಣಿ ಕೇಂದ್ರವೂ ಬಂದ್ ಆಗಿದೆ. ಈ ಬಜೆಟ್ ನಿರ್ಜೀವ ಬಜೆಟ್, ಜೀವ ಇಲ್ಲ. 7 ಕೋಟಿ ಜನತೆಗೆ ಮೋಸದ ಬಜೆಟ್. ನಮ್ಮ ತಾಲೂಕಿಗೆ ಏನೂ ಕೊಟ್ಟಿಲ್ಲ, ಕಲ್ಯಾಣ ಕರ್ನಾಟಕಕ್ಕೂ ಹಣ ನೀಡಿಲ್ಲ. ಈ ಸರ್ಕಾರ ಮೂಕ ಪ್ರಾಣಿಗಳ ವಿರೋಧಿ ಸರ್ಕಾರ. ಗೋ ಶಾಲೆಗಳು ಬಂದ್ ಮಾಡಿದ್ದಾರೆ. ಪ್ರಾಕ್ಟೀಕಲ್ ಸಾಧನೆಗೆ ಅರ್ಥ ಇಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: Karnataka Budget 2025 live: ಮುಸ್ಲಿಮರಿಗೆ ಶೇ.20ರಷ್ಟು ಭೂಮಿ ಮೀಸಲು

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ಬೇಡಿಕೆಗಳನ್ನ ಇಟ್ಟಿದ್ದೆವು. ನಮ್ಮ ಬೇಡಿಕೆಗಳು ಈಡೇರಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಆಗಿದೆ. ಇಷ್ಟು ದಿನ ನನ್ನ ಕ್ಷೇತ್ರದ ವಿದ್ಯಾರ್ಥಿಗಳು ಬೇರೆ ಕಡೆ ಕಾಲೇಜಿಗೆ ಹೋಗುತ್ತಿದ್ದರು. ಇನ್ನುಮುಂದೆ ನನ್ನ ಕ್ಷೇತ್ರದಲ್ಲೇ ಮೆಡಿಕಲ್ ಕಾಲೇಜಿಗೆ ಹೋಗುತ್ತಾರೆ ಎಂದು ಖುಷಿ ಆಗುತ್ತಿದೆ. ಇದಕ್ಕಾಗಿ ನಾವು ವಿಧಾನಸೌಧದಲ್ಲೇ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಚಿವ ಜಮೀರ್ ಅಹಮದ್ ಮಾತನಾಡಿ, ರಾಜ್ಯಕ್ಕೆ ಬರೋಬ್ಬರಿ 4.9 ಲಕ್ಷ ಕೋಟಿ ಬಜೆಟ್ ಕೊಟ್ಟಿದ್ದಾರೆ. ಬಿಜೆಪಿ ಅವರಿಗೆ ಹೇಳೊಕೆ ಏನಿದೆ. ಗ್ಯಾರಂಟಿ ಇದ್ದರೂ ಇಷ್ಟು ದೊಡ್ಡ ಮೊತ್ತದ ಬಜೆಟ್ ಕೊಟ್ಟಿದ್ದಾರೆ. ಮುಸ್ಲಿಂ ಜನಸಂಖ್ಯೆ 14% ಇದೆ. ಜನಸಂಖ್ಯೆ ಪ್ರಕಾರ ಕನಿಷ್ಠ 60 ಸಾವಿರ ಕೋಟಿ ಕೊಡಬೇಕು. 4,700 ಕೋಟಿ ಕೊಟ್ಟಿದ್ದಾರೆ ಅಷ್ಟೇ. ಅಲ್ಪಸಂಖ್ಯಾತರ ಎಜುಕೇಶನ್ ಗಾಗಿ ಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ರಾಜಧಾನಿ ಅಭಿವೃದ್ಧಿಗೆ 7,000 ಕೋಟಿ ರೂ, ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಬಂಪರ್ ಕೊಡುಗೆ!