Karnataka Budget 2023 for Urban Sector: ಸಿದ್ಧರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ 45 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಇದರಲ್ಲಿ ಬ್ರ್ಯಾಂಡ್ ಬೆಗಳೂರಿಗೆ ಆದ್ಯತೆ ನೀಡುವುದಾಗಿಯೂ ತಿಳಿಸಿದ್ದಾರೆ. ಹೆಬ್ಬಾಳದಿಂದ ಸರ್ಜಾಪುರಕ್ಕೆ ಹೊಸ ಮೆಟ್ರೋ ಮಾರ್ಗ ಘೋಷಣೆಯಾಗಿದೆ.
ಬೆಂಗಳೂರು (ಜು.7): ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಸಿದ್ಧರಾಮಯ್ಯ ಬೆಂಗಳೂರು ಅಭಿವೃದ್ಧಿಗೆ ಭರ್ಜರಿಯಾಗಿ 45 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಬೆಂಗಳೂರು ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು ಮತ್ತು ದುರಸ್ತಿಗೆ ಅನುದಾನ ಘೋಷಿಸಿದ್ದಾರೆ. ಅಲ್ಲದೇ ಮೆಟ್ರೋ, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಹಣ ಮೀಸಲಿಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಬ್ರ್ಯಾಂಡ್ ಬೆಂಗಳೂರು ಯೋಜನೆಗೂ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ. 'ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿ ಪ್ರಾರಂಭಿಸಿದ ನಗರೋತ್ಥಾನ, ಇಂದಿರಾ ಕ್ಯಾಂಟೀನ್ ನಂತಹ ಹಲವಾರು ಜನಪರ ಯೋಜನೆಗಳನ್ನು ನಿರ್ಲಕ್ಷಿಸುವ ಮೂಲಕ ಹಿಂದಿನ ಸರ್ಕಾರದ ಅವಧಿಯಲ್ಲಿ ನಗರಗಳ ಅಭಿವೃದ್ಧಿಯು ಕುಂಠಿತಗೊಂಡಿರುತ್ತದೆ. ಅಲ್ಲದೇ, 2022-23ನೇ ಸಾಲಿಗೆ 45,000 ಕೋಟಿ ರೂ.ಗಳ ಅಪೂರ್ಣ ಕಾಮಗಾರಿಗಳ ಮತ್ತು ಬಾಕಿ ಮೊತ್ತದ ಹೊರೆಯನ್ನು ಹಿಂದಿನ ಸರ್ಕಾರ ನಮ್ಮ ಸರ್ಕಾರದ ಮೇಲೆ ಹೊರೆಸಿರುತ್ತದೆ.
ಪ್ರಸ್ತುತ ಇರುವ ಆಯವ್ಯಯದ ಮಿತಿಯಲ್ಲಿ ಬಾಕಿ ಹೊರೆಯನ್ನು ತೀರಿಸಲು ಕನಿಷ್ಠ 6-8 ವರ್ಷಗಳ ಕಾಲಾವಕಾಶದ ಅಗತ್ಯತೆ ಇರುತ್ತದೆ. ಇದು ಅವರ ಅಶಿಸ್ತು ಮತ್ತು ಅವಿವೇಚನೆಗೆ ಹಿಡಿದ ಕನ್ನಡಿಯಾಗಿರುತ್ತದೆ. ಆದಾಗ್ಯೂ, ನಮ್ಮ ಸರ್ಕಾರ ನಗರಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ' ಎಂದು ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೆಟ್ರೋಗೆ ಬಿಗ್ ಬೂಸ್ಟ್: ಸುಮಾರು 5.7 ಲಕ್ಷ ಪ್ರಯಾಣಿಕರು ದಿನಂಪ್ರತಿ ಸಂಚರಿಸುವ 70 ಕಿ.ಮೀ. ಉದ್ದದ ಸಂಪರ್ಕ ಜಾಲವನ್ನು ನಮ್ಮ ಮೆಟ್ರೋ ಹೊಂದಿದೆ. 2024ರ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರದವರೆಗೆ, ಕೆಂಗೇರಿಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ಮಾದಾವರದವರೆಗೆ, ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಒಟ್ಟು 27 ಕಿ.ಮೀ.ಗಳ ನೂತನ ಮಾರ್ಗ ಆರಂಭವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ.ನ ಸಂಪರ್ಕಜಾಲವನ್ನು 176 ಕಿ.ಮೀ.ಗೆ ವಿಸ್ತರಿಸಲಾಗುತ್ತಿದೆ. ಪ್ರಗತಿಯಲ್ಲಿರುವ ಏರ್‌ಪೋರ್ಟ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ 2026 ರಲ್ಲಿ ಕಾರ್ಯಾರಂಭ ಮಾಡಲಾಗುವುದು.
ಇದರೊಂದಿಗೆ ಮೆಟ್ರೋ 3ನೇ ಹಂತದಡಿ ಅಂದಾಜು 16,328 ಕೋಟಿ ರೂ. ವೆಚ್ಚದಲ್ಲಿ ಕೆಂಪಾಪುರದಿಂದ ಜೆ.ಪಿ. ನಗರ 4ನೇ ಹಂತದವರೆಗಿನ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಓ.ಆರ್.ಆರ್. ಮಾರ್ಗವನ್ನು ಒಳಗೊಳ್ಳುವಂತಹ 45 ಕಿ.ಮೀ. ಉದ್ದದ ಮಾರ್ಗದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ, 15,000 ಕೋಟಿ ರೂ. ಅಂದಾಜು ವೆಚ್ಚದ, ಹೆಬ್ಬಾಳದಿಂದ ಸರ್ಜಾಪುರದವರೆಗಿನ 37 ಕಿ.ಮೀ. ಉದ್ದದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
-ಬೆಂಗಳೂರು ಅಭಿವೃದ್ಧಿಗೆ ಸಿದ್ದು ಸರ್ಕಾರದ ಯೋಜನೆಗಳು
1. ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ, ಹೈಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಮತ್ತಿತರ ಹಲವಾರು ಪ್ರಗತಿಯಲ್ಲಿರುವ ಯೋಜನೆಗಳಿಗೆ ಪ್ರಸ್ತುತ 12,000 ಕೋಟಿ ರೂ. ಅನುದಾನ.
2. ಸಂಚಾರ ದಟ್ಟಣೆ ನಿವಾರಣೆಗಾಗಿ 30,000 ಕೋಟಿ ರೂ.ಗಳಿಗೂ ಹೆಚ್ಚಿನ ಅಂದಾಜು ವೆಚ್ಚದಲ್ಲಿ ನಮ್ಮ ಮೆಟ್ರೋ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳು ಪೂರ್ಣಗೊಳ್ಳಲು ಐದು ವರ್ಷಗಳ ಕಾಲಾವಕಾಶದ ಅಗತ್ಯವಿದೆ.
3. ʻಬ್ರಾಂಡ್ ಬೆಂಗಳೂರುʼ ಪರಿಕಲ್ಪನೆಯು ಬೆಂಗಳೂರು ನಗರದ ನಿವಾಸಿಗಳ ಸುರಕ್ಷತೆ ಹಾಗೂ ಅನುಕೂಲವನ್ನು ಕೇಂದ್ರಬಿಂದುವಾಗಿಸಿದೆ. ಈ ಪರಿಕಲ್ಪನೆಯು ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆ ಈ ಒಂಬತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ.
4. ಬಿಬಿಎಂಪಿ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು 1,411 ಕೋಟಿ ರೂ. ಅನುದಾನ
5. ನೈಋತ್ಯ ರೈಲ್ವೇ ಇಲಾಖೆಯವರು ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನಿರ್ಮಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಸರಿಯಾದ ಮೆಟ್ರೋ ಮತ್ತು ರಸ್ತೆಗಳ ಸಂಪರ್ಕವಿಲ್ಲ. ಈ ಸಮಸ್ಯೆಯ ನಿವಾರಣೆಗಾಗಿ 263 ಕೋಟಿ ವೆಚ್ಚದಲ್ಲಿ ಹೊಸ ಮೇಲ್ಸೇತುವೆ.
6. 2023-24ನೇ ಸಾಲಿನಲ್ಲಿ 800 ಕೋಟಿ ರೂ. ವೆಚ್ಚದಲ್ಲಿ 100 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ವೈಟ್ ಟಾಪ್ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುವುದು.
7. ಬೆಂಗಳೂರು ನಗರದಲ್ಲಿರುವ ಹೆಚ್ಚಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು 2023-24ನೇ ಸಾಲಿನಲ್ಲಿ 83 ಕಿ.ಮೀ. ಉದ್ದದ ರಸ್ತೆಗಳನ್ನು 273 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ.
8. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗಾಗಿ ರೂಪಿಸಿರುವ ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಪ್ರಕ್ರಿಯೆಯು ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್ ಇದಕ್ಕೆ ಅನುಮತಿ ನೀಡಿದ್ದು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತ್ವರಿತವಾಗಿ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ.
9. ಬೆಂಗಳೂರಿನಲ್ಲಿ ಮಳೆನೀರು ಸರಾಗವಾಗಿ ಹರಿಯದಿರಲು ರಾಜಕಾಲುವೆಗಳ ಒತ್ತುವರಿ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಕಂದಾಯ ಇಲಾಖೆ ಗುರುತಿಸಿರುವ ಒತ್ತುವರಿಗಳನ್ನು ಆದ್ಯತೆ ಮೇಲೆ ತೆರವು.
10. ಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ಬೆಂಗಳೂರು ನಗರದ 97 ಲಕ್ಷ ಟನ್‌ನಷ್ಟು ಹಳೆ ತ್ಯಾಜ್ಯವನ್ನು (legacy waste) ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರದ ಮೂಲಕ ಸಂಸ್ಕರಿಸಲಾಗುವುದು ಮತ್ತು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇಂತಹ 256 ಎಕರೆ ಭೂಮಿಯನ್ನು ಉದ್ಯಾನವನಗಳಾಗಿ ಪರಿವರ್ತನೆ
11. ಬೆಂಗಳೂರು ನಗರದ ಸುಗಮ ಸಂಚಾರಕ್ಕೆ ಪೂರಕವಾಗಿ ರೂಪಿಸಲಾಗಿರುವ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಪ್ರಸ್ತುತ ಸಾಲಿನಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರವು 1,000 ಕೋಟಿ ರೂ.ಗಳನ್ನು ಒದಗಿಸಲಿದೆ.
12. ಪಾರಂಪರಿಕ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಹಾಗೂ ಒಳಚರಂಡಿ ನೀರು ಸಂಸ್ಕರಿಸುವ ಆಧುನಿಕ ಪದ್ಧತಿಗಳನ್ನು ಅಳವಡಿಸುವ ಮೂಲಕ ನದಿಗಳು ಮತ್ತು ಕೆರೆಗಳಿಗೆ ಹರಿಯುವ ಮಾಲಿನ್ಯ ನಿಯಂತ್ರಿಸಲು 1,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಮತ್ತು ಇತರೇ ಪಟ್ಟಣಗಳಲ್ಲಿ 2,150 ಕೋಟಿ ರೂ. ವೆಚ್ಚದಲ್ಲಿ ಒಟ್ಟಾರೆ 3,400 ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿ.
13. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ಒಟ್ಟು 80೦ ಕೋಟಿ ರೂ. ಗಳನ್ನು ಒದಗಿಸಲಾಗುತ್ತದೆ.
Karnataka Budget 2023 Live Updates |ಬರೋಬ್ಬರಿ ಮೂರು ಗಂಟೆ ಬಜೆಟ್ ಮಂಡಿಸಿದ ಸಿಎಂ
14. ಇಂದಿರಾ ಕ್ಯಾಂಟೀಸ್ ಮೊದಲನೇ ಹಂತದಲ್ಲಿ (Phase-1) ಹೊಸ ಮೆನುವಿನೊಂದಿಗೆ, ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಿಬಿಎಂಪಿ ಹಾಗೂ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು. ಎರಡನೇ ಹಂತದಲ್ಲಿ (Phase-2) ಎಲ್ಲಾ ಹೊಸ ಪಟ್ಟಣಗಳಲ್ಲಿ ಮತ್ತು ಬಿಬಿಎಂಪಿಯ ಹೊಸ ವಾರ್ಡ್‌ಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿ, ನವೀಕರಣ ಹಾಗೂ ನಿರ್ವಹಣೆಗೆ ರಾಜ್ಯ ಸರ್ಕಾರವು 100 ಕೋಟಿ ರೂ. ಒದಗಿಸಲಿದೆ.
Karnataka Budget 2023: ಸ್ವಿಗ್ಗಿ, ಜೊಮೊಟೊ ಡೆಲಿವರಿ ಬಾಯ್‌ಗಳಿಗೆ ಭರ್ಜರಿ ಕೊಡುಗೆ: 4 ಲಕ್ಷ ರೂ. ವಿಮೆ ಸೌಲಭ್ಯ
15. ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಹೆಚ್ಚು ವೈಜ್ಞಾನಿಕವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ವಿಲೇವಾರಿ ಮಾಡಲು ಬೆಂಗಳೂರು ಘನತಾಜ್ಯ ನಿರ್ವಹಣಾ ಸಂಸ್ಥೆಯ (BSWMCL) ಪರಿಣಾಮಕಾರಿ ಕಾರ್ಯಾಚರಣೆಗಾಗಿ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
