ಮಂಗಳೂರು(ಫೆ.19): ಕೋವಿಡ್‌ನ ತೀವ್ರ ಸವಾಲಿನ, ಸಂಕಷ್ಟದ ಸ್ಥಿತಿಯಲ್ಲೂ ಕರ್ಣಾಟಕ ಬ್ಯಾಂಕ್‌ 9 ತಿಂಗಳ ಅವಧಿಯಲ್ಲಿ ಹಿಂದಿನ ಇಡೀ ಒಂದು ವರ್ಷದ ಲಾಭಕ್ಕಿಂತಲೂ ಹೆಚ್ಚು ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್‌ನ ದೃಢತೆಗೆ ಸಾಕ್ಷಿಯಾಗಿದೆ ಎಂದು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.

ನಗರದ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ದೇಶ ಹೊರಬರುತ್ತಿದ್ದು, ಆರ್ಥಿಕತೆಯೂ ಮತ್ತೆ ಪುಟಿದೇಳುವ ಸೂಚನೆಗಳೂ ಗೋಚರಿಸಿವೆ. ಅದಕ್ಕೆ ಪೂರಕವಾಗಿ ಕೇಂದ್ರದ ಬಜೆಟ್‌ ಕೂಡ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.

1999ರಲ್ಲೇ ಕೋರ್‌ ಬ್ಯಾಂಕಿಂಗ್‌ ಸೊಲ್ಯೂಷನ್‌ ಮೂಲಕ ದಿಟ್ಟ ಹೆಜ್ಜೆ ಇರಿಸಿದ ಕರ್ಣಾಟಕ ಬ್ಯಾಂಕ್‌, ಈಗಲೂ ಡಿಜಿಟಲ್‌ ಉಪಕ್ರಮಗಳಲ್ಲಿ ಮುಂಚೂಣಿಯಲ್ಲಿದೆ. ದೀಗ ಡಿಜಿಟಲ್‌ ಲೋನ್‌ ಸ್ಯಾಂಕ್ಷನ್‌ ಅನುಕೂಲತೆ ಕಲ್ಪಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದರು.

ಕರ್ಣಾಟಕ ಬ್ಯಾಂಕ್‌ಗೆ ಭರ್ಜರಿ ನಿವ್ವಳ ಲಾಭ

‘ಕೊಡುವುದರಲ್ಲಿನ ಖುಷಿ’ ಎನ್ನುವ ವಿಷಯದ ಕುರಿತು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕ್‌ನ ಅಧ್ಯಕ್ಷ ಪಿ.ಜಯರಾಮ ಭಟ್‌ ವಹಿಸಿದ್ದರು. ಮುಖ್ಯ ವಹಿವಾಟು ಅಧಿಕಾರಿ ಗೋಕುಲ್‌ದಾಸ್‌ ಪೈ ವಂದಿಸಿದರು. ಪ್ರಬಂಧಕ ಎಲ್‌ರಾಯ್‌ ಮೋನಿಸ್‌ ನಿರೂಪಿಸಿದರು.

ಹೂದೋಟ ಲೋಕಾರ್ಪಣೆ:

ಇನ್ನು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ ವತಿಯಿಂದ ಮಂಗಳೂರಿನ ಕೆಪಿಟಿ ವೃತ್ತದಿಂದ ಪಂಪ್‌ವೆಲ್‌ ಸರ್ಕಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯ ವಿಭಜಕಕ್ಕೆ 1.10 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ತಡೆಬೇಲಿ ಹಾಗೂ ಹೂದೋಟವನ್ನು ಬ್ಯಾಂಕ್‌ನ ಅಧ್ಯಕ್ಷ ಪಿ. ಜಯರಾಮ ಭಟ್‌ ಲೋಕಾರ್ಪಣೆ ಮಾಡಿದರು.