ಮಂಗಳೂರು (ಅ.14):  ಕೊರೋನಾ ಸಂಕಷ್ಟದ ಸಮಯದಲ್ಲೂ ದೇಶದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ಅರ್ಧ ವರ್ಷಾಂತ್ಯಕ್ಕೆ ಶೇ.12.23ರ ಅಭಿವೃದ್ಧಿಯೊಂದಿಗೆ 315.73 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 281.33 ಕೋಟಿ ರು. ಲಾಭ ದಾಖಲಿಸಿತ್ತು.

ಮಂಗಳೂರಿನಲ್ಲಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಸಂಪನ್ನಗೊಂಡ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ತ್ರೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕ ಅಂತ್ಯಕ್ಕೆ ನಿವ್ವಳ ಲಾಭ ಶೇ.12.69ರ ದರದಲ್ಲಿ ವೃದ್ಧಿ ಕಂಡಿದ್ದು, 119.35 ಕೋಟಿ ರು. ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ (ಸೆಪ್ಟೆಂಬರ್‌ 2019-2020) ನಿವ್ವಳ ಲಾಭ 105.91 ಕೋಟಿಗಳಾಗಿತ್ತು.

ಬ್ಯಾಂಕಿನ ನಿರ್ವಹಣಾ ಲಾಭ ಹಿಂದಿನ ವರ್ಷದ ದ್ವಿತೀಯ ತ್ರೈಮಾಸಿಕದ ಅಂತ್ಯಕ್ಕೆ ಇದ್ದ 763.44 ಕೋಟಿಗಳಿಂದ 1,177.38 ಕೋಟಿ ತಲುಪಿ, ಶೇ.54.22ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ.11.75ರ ದರದಲ್ಲಿ ಹೆಚ್ಚಳಗೊಂಡು 1,109.99 ಕೋಟಿಗೆ ತಲುಪಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಅದು 993.31 ಕೋಟಿ ರು.ಗಳಾಗಿತ್ತು.

ಜಿಎಸ್‌ಟಿ ಜಾರಿಯಾಗಿ 3 ವರ್ಷ; ದೇಶದ ಆರ್ಥಿಕ ಪ್ರಗತಿಯ ದರ ದುಪ್ಪಟ್ಟಾಯಿತೇ?

ಬ್ಯಾಂಕಿನ ಒಟ್ಟು ವ್ಯವಹಾರ ಸೆಪ್ಟೆಂಬರ್‌ ಅಂತ್ಯಕ್ಕೆ 1,27,021.51 ರು. ತಲುಪಿದ್ದು, ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇ.2.72ರ ಬೆಳವಣಿಗೆ ಸಾಧಿಸಿದೆ. ಠೇವಣಿಗಳ ಮೊತ್ತ 70,189.65 ಕೋಟಿ ರು.ಗಳಿಂದ 72,922.58 ಕೋಟಿಗೆ ಹಾಗೂ ಮುಂಗಡಗಳು 53,468.42 ಕೋಟಿಯಿಂದ 54,098.93 ಕೋಟಿಗೆ ಏರಿಕೆಯಾಗಿದೆ. ಬ್ಯಾಂಕಿನ ಮುಂಗಡ ಮತ್ತು ಠೇವಣಿಗಳ ಅನುಪಾತ ಶೇ.74.18ರಷ್ಟಿದೆ.

ಪ್ರಸಕ್ತ ಸಾಲಿನ ದ್ವಿತೀಯ ತ್ರೈಮಾಸಾಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು ಇಳಿಕೆ ಕಂಡಿದ್ದು ಶೇ.3.97ರಷ್ಟಿವೆ. ಅದು ಹಿಂದಿನ ವರ್ಷದ ಇದೇ ತ್ರೈಮಾಸಿಕಾಂತ್ಯಕ್ಕೆ ಶೇ. 4.78 ಆಗಿತ್ತು. ಅದರಂತೆ ಬ್ಯಾಂಕಿನ ನಿವ್ವಳ ಅನುತ್ಪಾದಕ ಸೊತ್ತುಗಳು ಶೇ.2.21 ರಷ್ಟಕ್ಕೆ ಇಳಿಕೆಯಾಗಿದ್ದು, ಈ ಮುಂಚೆ ಅದು ಶೇ 3.48ರಷ್ಟಿತ್ತು. ಕಳೆದ ವರ್ಷದ ದ್ವಿತೀಯ ತ್ರೈಮಾಸಿಕ ಅಂತ್ಯಕ್ಕೆ ಶೇ.12.64ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತವು (ಕ್ಯಾಪಿಟಲ್‌ ಅಡೆಕ್ವೆಸಿ ರೇಶಿಯೋ) ಈ ತ್ರೈಮಾಸಿಕ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ.13.08ರಷ್ಟಾಗಿದೆ.

ಎಂಡಿ ಸಂತಸ: ದ್ವಿತೀಯ ತ್ರೈಮಾಸಿಕ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌, ಸಿಇಒ ಮಹಾಬಲೇಶ್ವರ ಎಂ.ಎಸ್‌, ಪ್ರಸಕ್ತ ವರ್ಷದ ಪ್ರಥಮ ಅರ್ಧ ವಾರ್ಷಿಕದಲ್ಲಿ ಬ್ಯಾಂಕ್‌ ಸರ್ವತೋಮುಖ ಅಭಿವೃದ್ಧಿ ಹೊಂದಿ ಶೇ.12.23ರ ಪ್ರಗತಿಯೊಂದಿಗೆ 315.73 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಕೋವಿಡ್‌ ಆಘಾತ ಮೆಟ್ಟಿನಿಂತು ಉತ್ತಮ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಬ್ಯಾಂಕಿನ ನಿವ್ವಳ ಲಾಭಾಂಶ ಹೆಚ್ಚಳ ಕಂಡಿದ್ದು ಅದು ಪ್ರಸ್ತುತ ತ್ರೈಮಾಸಿಕದಲ್ಲಿ ಶೇ.3.08ನ್ನು ತಲುಪಿದೆ. ಮುಂಬರುವ ದಿನಗಳಲ್ಲಿ ನಾವು ನಿರಂತರವಾದ ಹಾಗೂ ಸುಸ್ಥಿರವಾದ ಕಾರ್ಯಕ್ಷಮತೆಯನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.