ಕರ್ಣಾಟಕ ಬ್ಯಾಂಕ್ : ವಾರ್ಷಿಕ ಲಾಭದಲ್ಲಿ ಸಾರ್ವಕಾಲಿಕ ದಾಖಲೆ
- ಅಗ್ರಮಾನ್ಯ ಬ್ಯಾಂಕುಗಳಲ್ಲಿ ಪರಿಗಣಿಸಲ್ಪಡುವ ಕರ್ಣಾಟಕ ಬ್ಯಾಂಕ್
- ಪ್ರಸಕ್ತ ವಿತ್ತೀಯ ವರ್ಷ 2020-21ರಲ್ಲಿ ಸಾರ್ವಕಾಲಿಕ ದಾಖಲೆ ಲಾಭ
- 482.57 ಕೋಟಿ ರು.ಗಳ ನಿವ್ವಳ ಲಾಭವನ್ನು ಘೋಷಿಸಿದ ಬ್ಯಾಂಕ್
ಮಂಗಳೂರು (ಮೇ.27): ದೇಶದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಪರಿಗಣಿಸಲ್ಪಡುವ ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷ 2020-21ರಲ್ಲಿ ಸಾರ್ವಕಾಲಿಕ ದಾಖಲೆಯ 482.57 ಕೋಟಿ ರು.ಗಳ ನಿವ್ವಳ ಲಾಭವನ್ನು ಘೋಷಿಸಿ ಹೊಸ ವಿಕ್ರಮವನ್ನು ಮೆರೆದಿದೆ.
ಕಳೆದ ವಿತ್ತೀಯ ವರ್ಷದಲ್ಲಿ 431.78 ಕೋಟಿ ರು.ಗಳ ನಿವ್ವಳ ಲಾಭವನ್ನು ಘೋಷಿಸಿದ್ದ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ 11.76ರ ಬೆಳವಣಿಗೆಯನ್ನು ಸಾಧಿಸಿದೆ. ಅಂತೆಯೇ ಪ್ರಸಕ್ತ ವಿತ್ತೀಯ ವರ್ಷದ 4ನೇ ತ್ರೈಮಾಸಿಕದ ಅಂತ್ಯಕ್ಕೆ 31.36 ಕೋಟಿ ರು. ನಿವ್ವಳ ಲಾಭ ಘೋಷಿಸಿದೆ. ಕಳೆದ ವಿತ್ತೀಯ ವರ್ಷದ 4ನೇ ತ್ರೈಮಾಸಿಕ ಅಂತ್ಯಕ್ಕೆ 27.31 ಕೋಟಿ ರು. ನಿವ್ವಳ ಲಾಭ ಘೋಷಿಸಿತ್ತು. ಇದರಿಂದ ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಶೇ. 14.83ರ ಬೆಳವಣಿಗೆ ಸಾಧಿಸಿದಂತಾಗಿದೆ.
ಕೊರೋನಾ ನಡುವೆಯೂ 2020-21ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ .
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಬ್ಯಾಂಕಿನ 2020-21ರ ಪರಿಶೋಧಿತ ಹಣಕಾಸು ವರದಿಯನ್ನು ಅಂಗೀಕಾರಗೊಳಿಸಲಾಯಿತು. ಇದೇ ವೇಳೆ ಶೇ. 18 ಡಿವಿಡೆಂಡ್ ನೀಡಲೂ ಸಭೆ ಶಿಫಾರಸು ಮಾಡಿತು. ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ (31-03-2021ಕ್ಕೆ)1,27,348.56 ಕೋಟಿ ರು. ತಲುಪಿದೆ. ಬ್ಯಾಂಕಿನ ಠೇವಣಿ 75,654.86 ಕೋಟಿ ರು. ಹಾಗೂ ಮುಂಗಡ 51,693.70 ಕೋಟಿ ರು. ತಲುಪಿದೆ.
ಕೋವಿಡ್ ಕಾಲದಲ್ಲೂ ಸಾರ್ವಕಾಲಿಕ ಲಾಭ!
ಹಿಂದೆಂದೂ ಕಂಡು ಕೇಳರಿಯದ ಕೋವಿಡ್‌ನಂತಹ ದುರಿತದ ಕಾಲದಲ್ಲೂ ಈ ಬ್ಯಾಂಕ್ ಉತ್ತಮ ನಿರ್ವಹಣೆಯಿಂದ ಸಾರ್ವಕಾಲಿಕ ಲಾಭ ಘೋಷಿಸುವುದರಲ್ಲಿ ಸಮರ್ಥವಾಗಿದೆ. ಬ್ಯಾಂಕಿನ ಬಂಡವಾಳ ಪರ್ಯಾಪ್ತತಾ ಅನುಪಾತ ಕೂಡ ಶೇ.14.85ರಷ್ಟಕ್ಕೆ ತಲುಪಿದೆ. ಶೇ. 90.66ರಷ್ಟುಡಿಜಿಟಲ್ ವಹಿವಾಟು ಹೊಂದಿರುವ ಬ್ಯಾಂಕ್ ತನ್ನ ಅನುತ್ಪಾದಕ ಸ್ವತ್ತುಗಳ ಮೇಲೆಯೂ ನಿಯಂತ್ರಣ ಸಾಧಿಸಿದೆ. ಬ್ಯಾಂಕು ತನ್ನ ಮುಂಗಡಗಳ ಮರುಹೊಂದಾಣಿಕೆಯ ಉಪಕ್ರಮವಾಗಿ ರಿಟೇಲ್ ಹಾಗೂ ಮಿಡ್ ಕಾಪೊರ್‍ರೇಟ್ ಮುಂಗಡಗಳತ್ತ ತನ್ನ ಗಮನವನ್ನು ಕೇಂದ್ರೀಕರಿಸಿತ್ತು. ಹೀಗಾಗಿ ರಿಟೇಲ್ ಮತ್ತು ಮಿಡ್ ಕಾಪೊರ್‍ರೇಟ್ ಮುಂಗಡಗಳು ವರ್ಷದಿಂದ ವರ್ಷಕ್ಕೆ 6.34ರ ದರದಲ್ಲಿ ವೃದ್ಧಿ ಸಾಧಿಸಿದೆ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಮಾಹಿತಿ ನೀಡಿದ್ದಾರೆ.