ಕೊರೋನಾ ನಡುವೆಯೂ 2020-21ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ
- ಕೆನರಾ ಬ್ಯಾಂಕ್‌ಗೆ 2020-21ನೇ ಆರ್ಥಿಕ ವರ್ಷದಲ್ಲಿ 2,557 ಕೋಟಿ ರು.ಗಳ ನಿವ್ವಳ ಲಾಭ
- ಬ್ಯಾಂಕ್‌ನ ಕಾರ್ಯಾಚರಣೆಯ ಲಾಭಾಂಶ 20,009 ಕೋಟಿ ರು.ಗಳಿಗೆ ತಲುಪಿದೆ
- 2020-21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 1,010 ಕೋಟಿ ರು. ಲಾಭ
ಬೆಂಗಳೂರು (ಮೇ.19): ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ 2020-21ನೇ ಆರ್ಥಿಕ ವರ್ಷದಲ್ಲಿ 2,557 ಕೋಟಿ ರು.ಗಳ ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್‌ನ ಕಾರ್ಯಾಚರಣೆಯ ಲಾಭಾಂಶ 20,009 ಕೋಟಿ ರು.ಗಳಿಗೆ ತಲುಪಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಮಂಗಳವಾರ ವರ್ಚುಯಲ್ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್.ವಿ.ಪ್ರಭಾಕರ್, ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯದಲ್ಲಿ ಶೇ.18.57, ಬಡ್ಡಿಯೇತರ ಆದಾಯದಲ್ಲಿ ಶೇ.40.75ರಷ್ಟುಬೆಳವಣಿಗೆಯಾಗಿದೆ ಎಂದು ವಿವರಿಸಿದರು.
ಕೋವಿಡ್ ಇದ್ರೂ ರೈತರಿಗೆ ಬ್ಯಾಂಕ್ ಸಾಲ ನೋಟಿಸ್! ..
ಅಲ್ಲದೆ, ದೇಶೀಯ ಒಟ್ಟು ವ್ಯವಹಾರದಲ್ಲಿ ಶೇ.8.57, ಕೃಷಿ ಸಾಲಗಳು ಮತ್ತು ಇತರೆ ಕೃಷಿ ಚಟುವಟಿಕೆಗಳ ಸಾಲಗಳಲ್ಲಿ ಶೇ.17.44, ಚಿಲ್ಲರೆ ವ್ಯವಹಾರದಲ್ಲಿ ಶೇ.12.14, ಗೃಹಸಾಲಗಳಲ್ಲಿ ಶೇ.15.11, ಚಾಲ್ತಿ ಮತ್ತು ಉಳಿತಾಯ ಠೇವಣಿಗಳಲ್ಲಿ ಶೇ.13.95ರಷ್ಟುಬೆಳವಣಿಗೆಯಾಗಿದೆ ಎಂದು ಅವರು ವಿವರಿಸಿದರು.
ನಾಲ್ಕನೇ ತ್ರೈಮಾಸಿಕ: 2020-21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 1,010 ಕೋಟಿ ರು. ಲಾಭ ಗಳಿಸಿದ್ದು, 2019-2020ರ ಆರ್ಥಿಕ ವರ್ಷಕ್ಕೆ (6,567 ಕೋಟಿ) ಹೋಲಿಕೆ ಮಾಡಿದಲ್ಲಿ ಶೇ.45.11ರಷ್ಟುಹೆಚ್ಚಳವಾಗಿದೆ. ಕಾರ್ಯಾಚರಣೆ ಲಾಭದಲ್ಲಿ ಶೇ.136.40ರಷ್ಟು, ನಿವ್ವಳ ಬಡ್ಡಿ ಆದಾಯದಲ್ಲಿ ಶೇ.9.87 ಮತ್ತು ಬಡ್ಡಿಯೇತರ ಆದಾಯದಲ್ಲಿ ಶೇ.72.08ರಷ್ಟುಬೆಳವಣಿಗೆಯಾಗಿದೆ ಎಂದು ಅವರು ವಿವರಿಸಿದರು.