ಕರ್ಮ ಬೆನ್ನು ಬಿಡಲ್ಲ; ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ ಹೀಗ್ಯಾಕೆ ಹೇಳಿದ್ರು?
ಜೆರೋಧ ಸಿಇಒ ನಿತಿನ್ ಕಾಮತ್ ತಾನು ಮೊಬೈಲ್ ಫೋನ್ ಅನ್ನು ಏಕೆ ಸೈಲೆಂಟ್ ಮೋಡ್ ನಲ್ಲಿಟ್ಟಿರುತ್ತೇನೆ ಎಂಬ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕರ್ಮ ಬೆನ್ನು ಬಿಡಲ್ಲ ಎಂದು ಬರೆದುಕೊಂಡಿದ್ದಾರೆ. ಕಾಮತ್ ಹೀಗೆ ಹೇಳೋಕೂ ಒಂದು ಕಾರಣವಿದೆ, ಏನದು?
ಬೆಂಗಳೂರು (ಮೇ 11): ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ 'ಎಕ್ಸ್' ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಹಿಂದಿನ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದು, ಅದಕ್ಕೆ 'ಕರ್ಮ ತನ್ನನ್ನು ಹಿಂಬಾಲಿಸುತ್ತಿದೆ' ಎಂಬ ಶೀರ್ಷಿಕೆ ನೀಡಿದ್ದಾರೆ. 'ಯಾವುದನ್ನು ನೀವು ಮಾಡಿರುತ್ತೀರೋ ಅದು ಮತ್ತೆ ಹಿಂತಿರುಗುತ್ತದೆ' ಎಂದು ಬರೆದಿರುವ ಕಾಮತ್, ಟೆಲಿ ಮಾರ್ಕೆಟಿಂಗ್ ಕರೆಗಳ ಕಾರಣಕ್ಕೆ ಫೋನ್ ಅನ್ನು ಸೈಲೆಂಟ್ ನಲ್ಲಿಟ್ಟಿರೋದಾಗಿ ತಿಳಿಸಿದ್ದಾರೆ. ಅಂದಹಾಗೇ ನಿತಿನ್ ಕಾಮತ್ ಮೊದಲು ಕಾಲ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಕೂಡ ಆಗ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಮಾಡುತ್ತಿದ್ದರು. ಈಗ ಅವರಿಗೇ ಇಂಥ ಕರೆಗಳು ಬರುತ್ತಿವೆ. ಇಂಥ ಕರೆಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೊಬೈಲ್ ಫೋನ್ ಅನ್ನು ಸೈಲೆಂಟ್ ನಲ್ಲಿಟ್ಟಿರೋದಾಗಿ ಕಾಮತ್ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರು ನಾವು ಮಾಡಿದ ಕರ್ಮ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಹೇಳಿರೋದು ಕೂಡ.
'ನಾನು ನಾಲ್ಕು ವರ್ಷಗಳನ್ನು ಕಾಲ್ ಸೆಂಟರ್ ನಲ್ಲಿ ಕಳೆದಿದ್ದೇನೆ. ಅಮೆರಿಕದಲ್ಲಿನ ಜನರಿಗೆ ಅನಾಪೇಕ್ಷಿತ ಕರೆಗಳನ್ನು ಮಾಡೋದು ನನ್ನ ಕೆಲಸವಾಗಿತ್ತು. ಈಗ ನನಗೆ ಅನಿಸುತ್ತಿದೆ ಕರ್ಮ ಯಾವಾಗಲೂ ಹಿಂತಿರುಗಿ ಬರುತ್ತದೆ' ಎಂದು ಕಾಮತ್ ವ್ಯಂಗ್ಯವಾಗಿ ಹೇಳಿಕೊಂಡಿದ್ದಾರೆ. ಕಾಮತ್ ಅವರ ಈ ಪೋಸ್ಟ್ ಗೆ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಪ್ರಾಮಾಣಿಕ ತಪ್ಪೊಪ್ಪಿಗೆಯನ್ನು ಮೆಚ್ಚಿಕೊಂಡಿದ್ದಾರೆ.
ವಿಶ್ವ ಬಿಲಿಯನೇರ್ ಪಟ್ಟಿ: ಕನ್ನಡಿಗರಿಗೂ ಸ್ಥಾನ, ಅಣ್ಣನ ಆಸ್ತಿ ತಮ್ಮನಿಗಿಂತ 160 ಕೋಟಿ ಹೆಚ್ಚು!
ಒಬ್ಬ ಬಳಕೆದಾರರು 'ನೀವು ತುಂಬಾ ಸರಳ ವ್ಯಕ್ತಿತ್ವದವರು. ನಿಮಗೆ ಹಿಂದಿನದ್ದೆಲ್ಲ ನೆನಪಿಸದೆಯಲ್ಲ ನಿತಿನ್. ಕೆಲವೇ ಕೆಲವು ಜನರಿಗೆ ಸಾರ್ವಜನಿಕವಾಗಿ ಇಂಥ ವಿಚಾರಗಳನ್ನು ಹೇಳಿಕೊಂಡು, ತಪ್ಪೊಪ್ಪಿಕೊಳ್ಳುವ ಗುಣ ಇದೆ' ಎಂದು ಹೇಳಿದ್ದಾರೆ. ಇನ್ನೂ ಕೆಲವರು ಟೆಲಿ ಮಾರ್ಕೆಟಿಂಗ್ ಕರೆಗಳಿಂದ ತಪ್ಪಿಸಿಕೊಳ್ಳಲು ನಿತಿನ್ ಕಾಮತ್ ತಮ್ಮ ಫೋನ್ ಸೆಟ್ಟಿಂಗ್ಸ್ ನಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಇನ್ನೊಬ್ಬ ಬಳಕೆದಾರರು 'ಒಂದು ವೇಳೆ ನಿಮಗೆ ಯಾವ ಸಮಯದಲ್ಲಿ ಇಂಥ ಕರೆಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ ಎಂಬುದು ತಿಳಿದಿದ್ದರೆ ಆ ಸಮಯದಲ್ಲಿ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ಆಗ ಕೆಲವೇ ದಿನಗಳಲ್ಲಿ ಇಂಥ ಕರೆಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗುತ್ತದೆ' ಎಂದು ಇನ್ನೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ. 'ನಾನು ಹಾಗೇ ಮಾಡುತ್ತೇನೆ. ಆದರೆ, ನಿಮ್ಮ ಪ್ರಾಮಾಣಿಕತೆಗೆ ಹಾಟ್ಸ್ ಆಫ್. ನನ್ನ ಅಭಿಪ್ರಾಯದಲ್ಲಿ ಸೈಲೆಂಟ್ ಫೋನ್ ಸಂಕಷ್ಟದ ಸಮಯದಲ್ಲಿ ಒಂದು ವರದಾನ. ನಾನು ಅದನ್ನು ಅನುಭವಿಸುತ್ತಿದ್ದೇನೆ' ಎಂದು ಇನ್ನೊಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಜೆರೋಧ ಸಿಇಒ ನೀಡಿದ ಟಿಪ್ಸ್ ಹೀಗಿದೆ..
ಫೆಬ್ರವರಿಯಲ್ಲಿ ಅನುಭವಿಸಿದ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ನಿತಿನ್ ಕಾಮತ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. 'ಎಕ್ಸ್' ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದ ಕಾಮತ್ 'ಮೈಲ್ಡ್ ಸ್ಟ್ರೋಕ್' ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. 'ಸುಮಾರು ಆರು ವಾರಗಳ ಹಿಂದೆ ನನಗೆ ಸಣ್ಣ ಪ್ರಮಾಣದಲ್ಲಿ ಸ್ಟ್ರೋಕ್ ಆಗಿತ್ತು. ಇದಕ್ಕೆ ತಂದೆಯ ಅಗಲಿಕೆಯ ನೋವು, ಕಡಿಮೆ ನಿದ್ರೆ, ಬಳಲಿಕೆ, ನಿರ್ಜಲೀಕರಣ ಹಾಗೂ ಕೆಲಸದೊತ್ತಡದಲ್ಲಿ ಯಾವುದೋ ಒಂದು ಕಾರಣವಾಗಿರಬಹುದು' ಎಂದು ಎಕ್ಸ್ ಪೋಸ್ಟ್ ನಲ್ಲಿ ಕಾಮತ್ ತಿಳಿಸಿದ್ದಾರೆ. ಸ್ಟ್ರೋಕ್ ಬಳಿಕ ನಿತಿನ್ ಕಾಮತ್ ಮರಳಿ ಸಹಜ ಸ್ಥಿತಿಗೆ ಬಂದಿದ್ದಾರೆ.
ನಿತಿನ್ ಕಾಮತ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ವೈಯಕ್ತಿಕ ವಿಚಾರಗಳ ಜೊತೆಗೆ ಹೂಡಿಕೆ, ತೆರಿಗೆ, ನಿವೃತ್ತಿ ಜೀವನದ ಉಳಿತಾಯಕ್ಕೆ ಸಂಬಂಧಿಸಿ ಅನೇಕ ಟಿಪ್ಸ್ ನೀಡುತ್ತ ಇರುತ್ತಾರೆ.