ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಜೆರೋಧ ಸಿಇಒ ನೀಡಿದ ಟಿಪ್ಸ್ ಹೀಗಿದೆ..
ಅಡ್ವಾನ್ಸ್ ತೆರಿಗೆ ಪಾವತಿಗೆ ಮಾರ್ಚ್ 15 ಅಂತಿಮ ಗಡುವು. ಹೀಗಿರುವಾಗ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸೋದು ಎಷ್ಟು ಮುಖ್ಯ ಎಂಬ ಬಗ್ಗೆ ಜೆರೋಧ ಸಿಇಒ ನಿತಿನ್ ಕಾಮತ್ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಬೆಂಗಳೂರು (ಮಾ.13): ಈ ಹಣಕಾಸು ಸಾಲಿನ ಮುಂಗಡ ತೆರಿಗೆ ಅಥವಾ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಲು ಮಾ.15 ಅಂತಿಮ ಗಡುವು. ಅಡ್ವಾನ್ಸ್ ಟ್ಯಾಕ್ಸ್ ಅನ್ನು ತೆರಿಗೆದಾರರು ನಾಲ್ಕು ಕಂತುಗಳಲ್ಲಿ ಪಾವತಿಸಬೇಕು. ಜೂನ್, ಸೆಪ್ಟೆಂಬರ್, ಡಿಸೆಂಬರ್ ಹಾಗೂ ಮಾರ್ಚ್ ತಿಂಗಳಲ್ಲಿ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು. ಹೀಗಾಗಿ ಈ ಹಣಕಾಸು ಸಾಲಿನಲ್ಲಿ ಅಡ್ವಾನ್ಸ್ ತೆರಿಗೆಯ ನಾಲ್ಕನೇ ಕಂತನ್ನು ಪಾವತಿಸಲು ಶುಕ್ರವಾರ (ಮಾ.15) ಅಂತಿಮ ಗಡುವು. ಟಿಡಿಎಸ್ ಕಡಿತಗೊಳಿಸಿದ ಬಳಿಕ ಯಾವುದೇ ಒಬ್ಬ ತೆರಿಗೆದಾರನ ಅಂದಾಜು ವಾರ್ಷಿಕ ತೆರಿಗೆ ಮೊತ್ತ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅವರು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು. ಇದು ಷೇರು ಮಾರುಕಟ್ಟೆಯಲ್ಲಿ ಸಕ್ರಿಯ ಹೂಡಿಕೆದಾರರಾಗಿರೋರಿಗೆ ಕೂಡ ಅನ್ವಯಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ನಲ್ಲಿ ತೊಡಗಿರೋರು ಅಡ್ವಾನ್ಸ್ ಟ್ಯಾಕ್ಸ್ ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಜೆರೋಧ ಸಂಸ್ಥಾಪಕ ಹಾಗೂ ಸಿಇಒ ನಿತಿನ್ ಕಾಮತ್ 'ಎಕ್ಸ್ ' ಪೋಸ್ಟ್ ನಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಕಾಮತ್ ಏನ್ ಹೇಳಿದ್ದಾರೆ?
'ಷೇರು ಮಾರುಕಟ್ಟೆಯ ಸಕ್ರಿಯ ಸದಸ್ಯರು ತಮ್ಮ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಕೆ ಮಾಡೋದು ಅತ್ಯಂತ ಪ್ರಮುಖ ಕಾರ್ಯಗಳಲ್ಲೊಂದು. ಆದರೆ, ಬಹುತೇಕ ಟ್ರೇಡರ್ ಗಳು ಇದನ್ನು ನಿರ್ಲಕ್ಷಿಸುತ್ತಾರೆ ಹಾಗೂ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯುತ್ತಾರೆ. ಅಡ್ವಾನ್ಸ್ ತೆರಿಗೆಗಳ ಸಲ್ಲಿಕೆಗೆ ಮಾ.15 ಅಂತಿಮ ಗಡುವು. ಅನೇಕ ತೆರಿಗೆದಾರರು ಇದು ನಮಗೆ ಅನ್ವಯಿಸುತ್ತದಾ ಎಂದು ಯೋಚಿಸುತ್ತಾರೆ. ಒಂದು ವೇಳೆ ಬಂಡವಾಳ ಗಳಿಕೆ (capital gains) ರೂಪದಲ್ಲಿ ನಿಮ್ಮ ವಾರ್ಷಿಕ ತೆರಿಗೆ ಮೊತ್ತ 10 ಸಾವಿರ ರೂ. ಇದ್ದರೆ, ಆಗ ನೀವು ಅಡ್ವಾನ್ಸ್ ತೆರಿಗೆಗಳನ್ನು ಪಾವತಿಸಬೇಕು. ಎಫ್ ಆಂಡ್ ಒ ಹಾಗೂ ಇಂಟ್ರಾಡೇಯಿಂದ ಗಳಿಸಿದ ಲಾಭವನ್ನು ಉದ್ಯಮ ಆದಾಯ ಎಂದು ಪರಿಗಣಿಸಿದರೆ, ಇಡೀ ಹಣಕಾಸು ಸಾಲಿನ ಅದರ ಲಾಭಾಂಶವನ್ನು ಅಂದಾಜಿಸಬೇಕು ಹಾಗೂ ನಾಲ್ಕು ಕಂತುಗಳಲ್ಲಿ ಅಡ್ವಾನ್ಸ್ ತೆರಿಗೆ ಪಾವತಿಸಬೇಕು' ಎಂದು ಕಾಮತ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಕಾಮತ್ ಅಡ್ವಾನ್ಸ್ ತೆರಿಗೆ ಲೆಕ್ಕ ಹಾಕೋದು ಹೇಗೆ ಎಂಬ ವಿಡಿಯೋ ಕೂಡ ಷೇರ್ ಮಾಡಿದ್ದಾರೆ.
ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಲು ವೇಳಾಪಟ್ಟಿ
ಜೂನ್ 15: ನಿಮ್ಮ ಒಟ್ಟು ಅಂದಾಜು ತೆರಿಗೆಯ ಕನಿಷ್ಠ ಶೇ.15ರಷ್ಟನ್ನು ಪಾವತಿಸಬೇಕು.
ಸೆಪ್ಟೆಂಬರ್ 15: ಅಂದಾಜಿಸಿರುವ ತೆರಿಗೆಯ ಶೇ.45ರಷ್ಟನ್ನು ಪಾವತಿಸಬೇಕು.
ಡಿಸೆಂಬರ್ 15: ಅಂದಾಜಿಸಿರುವ ತೆರಿಗೆಯಶೇ.75ರಷ್ಟನ್ನು ಪಾವತಿಸಬೇಕು.
ಮಾರ್ಚ್ 15: ನೀವು ಉಳಿದಿರುವ ಬ್ಯಾಲೆನ್ಸ್ ನಲ್ಲಿ ಶೇ.100ರಷ್ಟನ್ನು ಪಾವತಿಸಬೇಕು.
ಒಂದು ವೇಳೆ ನಿಮ್ಮ ಆದಾಯ ನಿರೀಕ್ಷೆ ಈ ವರ್ಷ ಬದಲಾಗಿದ್ದರೆ, ನೀವು ಪಾವತಿಸುವ ಮೊತ್ತವನ್ನು ಹೊಂದಾಣಿಕೆ ಮಾಡಿ. ಇದನ್ನು ಆದಾಯ ತೆರಿಗೆ ಇಲಾಖೆಯ ಆನ್ ಲೈನ್ ತೆರಿಗೆ ಪಾವತಿ ವೆಬ್ ಸೈಟ್ ನಲ್ಲಿ ಮಾಡಬಹುದು.
ಒಂದು ವೇಳೆ ತೆರಿಗೆದಾರ ಅಡ್ವಾನ್ಸ್ ತೆರಿಗೆ ಮೊತ್ತವನ್ನು ನಿರ್ದಿಷ್ಟ ಅಂತಿಮ ಗಡುವಿನೊಳಗೆ ಕಂತುಗಳಲ್ಲಿ ಪಾವತಿಸಲು ವಿಫಲನಾದ್ರೆ, ಆತ ಅಥವಾ ಆಕೆ ಪೆನಲ್ ಬಡ್ಡಿ ಪಾವತಿಸಬೇಕು. ಸೆಕ್ಷನ್ 234C ಅಡಿಯಲ್ಲಿ ಮೂರು ತಿಂಗಳ ಕಾಲ ಶೇ.1ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
Advance Tax:ಯಾರು ಪಾವತಿಸಬೇಕು? ಅಂತಿಮ ಗಡುವು ಯಾವಾಗ? ಇಲ್ಲಿದೆ ಮಾಹಿತಿ
ಭಾರತದಲ್ಲಿ ವೇತನ ಪಡೆಯುವ ಉದ್ಯೋಗಿಗಳು, ಫ್ರೀಲ್ಯಾನ್ಸರ್ ಅಥವಾ ಉದ್ಯಮಿಗಳ ವಾರ್ಷಿಕ ತೆರಿಗೆ ಮೊತ್ತ 10 ಸಾವಿರ ರೂ. ಅಥವಾ ಅದಕ್ಕಿಂತಹೆಚ್ಚಿದ್ದರೆ ಅವರು ತೆರಿಗೆಯನ್ನು ಮುಂಚಿತವಾಗಿ (ಅಡ್ವಾನ್ಸ್) ಪಾವತಿಸಲು ಅರ್ಹತೆ ಹೊಂದಿದ್ದಾರೆ. ಇನ್ನು 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಉದ್ಯಮ ಹೊಂದಿರದ ಹಿರಿಯ ನಾಗರಿಕರು ಅಡ್ವಾನ್ಸ್ ತೆರಿಗೆಯಿಂದ ವಿನಾಯ್ತಿ ಪಡೆದಿದ್ದಾರೆ.