ಜಗತ್ತಿನ ಶ್ರೀಮಂತರು ‘ತೆರಿಗೆ ಸ್ವರ್ಗ’ ಎನ್ನಿ​ಸಿ​ಕೊಂಡ ದೇಶಗಳಲ್ಲಿ ಹೇಗೆಲ್ಲಾ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ ಉಲ್ಲೇಖ ಮಾಡಿದ್ದ ಪಂಡೋರಾ ಪೇಪ​ರ್ಸ್ ಪಂಡೋರಾ ಪೇಪ​ರ್‍ಸ್ನಲ್ಲಿ ಇದೀಗ ಇಬ್ಬರು ಕನ್ನಡಿಗರ ಹೆಸರು ಬೆಳಕಿಗೆ 

ನವದೆಹಲಿ (ಅ.08): ಭಾರತೀಯರು (Indians) ಸೇರಿದಂತೆ ಜಗತ್ತಿನ ಶ್ರೀಮಂತರು ‘ತೆರಿಗೆ ಸ್ವರ್ಗ’ ಎನ್ನಿ​ಸಿ​ಕೊಂಡಿರು​ವ ದೇಶಗಳಲ್ಲಿ ಹೇಗೆಲ್ಲಾ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ ಉಲ್ಲೇಖ ಮಾಡಿದ್ದ ಪಂಡೋರಾ ಪೇಪ​ರ್‍ಸ್ನಲ್ಲಿ (Pandora papers) ಇದೀಗ ಇಬ್ಬರು ಕನ್ನಡಿಗರ ಹೆಸರು ಬೆಳಕಿಗೆ ಬಂದಿದೆ.

ಬೆಂಗಳೂರು ನಗರದ ಮಾಜಿ ಪೊಲೀಸ್‌ ಆಯು​ಕ್ತ ಜ್ಯೋತಿ ಪ್ರಕಾಶ್‌ ಮಿರ್ಜಿ (Jyothi Prakash Mirji) ಅವರ ಪುತ್ರ ಚಿರಂತನ್‌ ಮಿರ್ಜಿ (Chiranthan Mirji) ಹಾಗೂ ಬಿ.ಆರ್‌.ಶೆಟ್ಟಿ (BR Shetty)ಅವರು ತೆರಿಗೆ ಸ್ವರ್ಗ ದೇಶಗಳಲ್ಲಿ ಕಂಪನಿ ತೆರೆದು ಅಕ್ರಮವಾಗಿ ಹೂಡಿಕೆ ಮಾಡಿದ್ದಾರೆ ಎಂದು ಪಂಡೋರಾ ಪೇಪ​ರ್ಸ್‌​ನಲ್ಲಿ ಹೇಳ​ಲಾ​ಗಿದೆ ಎಂದು ದಿಲ್ಲಿ ಮೂಲದ ಆಂಗ್ಲ ದೈನಿ​ಕ​ವೊಂದು ವರದಿ ಮಾಡಿ​ದೆ.

ಚಿರಂತನ್‌ ಮಿರ್ಜಿ:

2011ರಲ್ಲಿ ಜ್ಯೋತಿ ಪ್ರಕಾಶ್‌ ಮಿರ್ಜಿ ಅವರು ಬೆಂಗಳೂರು ಪೊಲೀಸ್‌ ಆಯುಕ್ತರಾಗಿ ನೇಮಕವಾಗುವ 2 ತಿಂಗಳ ಮುಂಚೆ ಅಂದರೆ 2011ರ ಮೇ 2ರಂದು ಅವರ ಪುತ್ರ ಚಿರಂತನ್‌ ಮಿರ್ಜಿ ಅವರು ಸೀಷೆ​ಲ್ಸ್‌​ನಲ್ಲಿ (Seychelles) ಕಂಪನಿ ಸ್ಥಾಪಿಸಿದ್ದರು. ಆದರೆ ಆ ವೇಳೆಗೆ ಭಾರತೀಯ ಪ್ರಜೆಗಳು ವಿದೇಶದಲ್ಲಿ ಹೂಡಿಕೆ ಮಾಡುವುದು ಮತ್ತು ಉದ್ಯಮ ಸ್ಥಾಪಿಸುವುದಕ್ಕೆ ಆರ್‌ಬಿಐನ (RBI) ನಿರ್ಬಂಧವಿತ್ತು. ಆದಾಗ್ಯೂ, ಮಿರ್ಜಿ ಅವರು ಮೇಶ್‌ ಜ್ಯೋತ್‌ ಗ್ಲೋಬಲ್‌ ಲಿ. ಎಂಬ ಕಂಪನಿ ಸ್ಥಾಪಿಸಿದ್ದರು. ಅದು ವಿವಿಧ ಸರಕುಗಳ ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆಯಾಗಿತ್ತು. ಅಲ್ಲದೆ ಅಂತಾರಾಷ್ಟ್ರೀಯ ವ್ಯಾಪಾರಿಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಕಂಪನಿಯಲ್ಲಿ ಚಿರಂತನ್‌ ಮಿರ್ಜಿ ಅವರು ಏಕಮಾತ್ರ ಷೇರುದಾರ ಮತ್ತು ನಿರ್ದೇಶಕರಾಗಿದ್ದರು.

ತೆರಿಗೆ ವಂಚಕರ ತಾಣ​ಗ​ಳಾ​ದ ಈ ವಿದೇಶಿ ಟ್ರಸ್ಟ್‌ಗಳು!

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಚಿರಂತನ್‌ ಮಿರ್ಜಿ, ‘2011ರಲ್ಲಿ ಆಗಷ್ಟೇ ಪದವೀಧರನಾಗಿದ್ದ ನಾನು ಚೀನಾದಿಂದ ಪೀಠೋಪಕರಣಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುವ ಉದ್ದೇಶದಿಂದ ಈ ಕಂಪನಿ ತೆರೆದಿದ್ದೆ. ಆದರೆ ಈ ಕಂಪನಿಯಿಂದ ಯಾವುದೇ ಉದ್ಯಮ ವ್ಯವಹಾರ ನಡೆಸಿಲ್ಲ. ಅಲ್ಲದೆ ಈ ಕಂಪನಿ ಹೆಸರಿನಲ್ಲಿ ಯಾವುದೇ ಬ್ಯಾಂಕ್‌ ಖಾತೆಯನ್ನೂ ತೆರೆದಿಲ್ಲ ಮತ್ತು ಹಣವನ್ನೂ ಠೇವಣಿ ಮಾಡಿಲ್ಲ’ ಎಂದು ಹೇಳಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿ​ದೆ.

ಬಿ.ಆರ್‌ ಶೆಟ್ಟಿ: ಒಂದು ಕಾಲದಲ್ಲಿ ವಿಶ್ವದ ಶ್ರೀಮಂತ ಉದ್ಯಮಿ ಎಂಬ ಖ್ಯಾತಿಗೆ ಭಾಜ​ನ​ರಾ​ಗಿ​ದ್ದ​ರರೂ ಇದೀಗ ಬ್ಯಾಂಕ್‌ ಸಾಲಗಳ ಸುಳಿಗೆ ಸಿಲುಕಿ ಹೈರಾಣಾಗಿರುವ ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್‌ ಶೆಟ್ಟಿಅವರು ಸಹ ‘ತೆ​ರಿಗೆ ಸ್ವರ್ಗ’ ದೇಶ​ಗ​ಳಾ​ದ ಜೆರ್ಸಿ ಹಾಗೂ ಬ್ರಿಟಿಷ್‌ (British) ವರ್ಜಿನ್‌ ಐಲೆಂಡ್‌ಗಳಲ್ಲಿ ಕಂಪನಿ ಸ್ಥಾಪಿಸಿದ್ದಾರೆ ಎಂದು ಪಂಡೋರಾ ಪೇಪರ್ಸ್‌ ಹೇಳು​ತ್ತ​ವೆ.

ಶೆಟ್ಟಿಅವರು 2013ರಲ್ಲಿ ಬ್ರಿಟನ್‌ನಲ್ಲಿ ಕೇಂದ್ರ ಕಚೇರಿ ಇರುವ ಟ್ರಾವೆಲೆಕ್ಸ್‌ ಹೋಲ್ಡಿಂಗ್ಸ್‌ ಲಿ. ಎಂಬ ಕಂಪನಿಯನ್ನು ಹೊಂದಿದ್ದು, ಸ್ವಿಜರ್ಲೆಂಡ್‌, ಪನಾಮಾ, ಬ್ರೆಜಿಲ್‌, ಚೀನಾ ಮತ್ತು ಜಪಾನ್‌ ಸೇರಿದಂತೆ ಇತರೆಡೆ ಒಟ್ಟಾರೆ 81 ಕಂಪನಿಗಳ ಮಾಲಿಕತ್ವವನ್ನು ಹೊಂದಿದೆ ಎನ್ನಲಾಗಿದೆ.

‘ಪಂಡೋರಾ’ದ​ಲ್ಲಿ ಮತ್ತೆ 4 ಜನ ಗಣ್ಯರ ಹೆಸ​ರು: ಅಕ್ರಮ ಬಯಲು!

ಸುಮಾರು 38 ಲಕ್ಷ ರು. ಬಂಡವಾಳದೊಂದಿಗೆ ಆರಂಭಿಸಲಾದ ಟ್ರಾವೆಲೆಕ್ಸ್‌ ಕಂಪನಿಗೆ ಶೆಟ್ಟಿಅವರು ನಿರ್ದೇಶಕರಾಗಿದ್ದಾರೆ. ಅಲ್ಲದೆ ಈ ಕಂಪನಿಯ ಷೇರುಗಳನ್ನು ತಮ್ಮದೇ ಒಡೆತನದ ಬಿವಿಐ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಟ್ರಾವೆಲೆಕ್ಸ್‌ನಲ್ಲಿ ಅವರ ಕುಟುಂಬ ಸದಸ್ಯರಾದ ಪತ್ನಿ, ಪುತ್ರ, ಸೋದರ ಅವರು ಸಹ ಹೂಡಿಕೆ ಮಾಡಿದ್ದು, ಷೇರುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟಿಅವರ ಸೋದರ ಅಳಿಯ ಶಿಶಿರ್‌ ಶೆಟ್ಟಿ, ‘ಈ ವಿಷಯವು ಕೋರ್ಟ್‌​ನ​ಲ್ಲಿ​ರುವ ಕಾರ​ಣ ಪ್ರತಿಕ್ರಿಯಿಸುವುದು ಅಸಮಂಜವಾಗುತ್ತದೆ’ ಎಂದಿ​ದ್ದಾ​ರೆ ಎಂದು ಆಂಗ್ಲ ದೈನಿಕ ಹೇಳಿ​ದೆ.

ವರದಿಯಲ್ಲಿ ಏನಿದೆ?

- 2011ರಲ್ಲಿ ಜ್ಯೋತಿ ಪ್ರಕಾಶ್‌ ಮಿರ್ಜಿ ಪುತ್ರ ಚಿರಂತನ್‌ನಿಂದ ಸೀಷೆಲ್ಸ್‌ನಲ್ಲಿ ಕಂಪನಿ

- ಆರ್‌​ಬಿಐ ನಿರ್ಬಂಧ ಇದ್ದರೂ ಕಂಪನಿ ಸ್ಥಾಪ​ನೆ, ಅಂ.ರಾ. ಹಣಕಾಸು ವ್ಯವಹಾರ

- ಬಿ.ಆರ್‌.ಶೆಟ್ಟಿಯಿಂದ 2013ರಲ್ಲಿ ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನಲ್ಲಿ ಕಂಪನಿ ಸ್ಥಾಪನೆ

- ಇತರೆ ‘ತೆರಿಗೆ ಸ್ವರ್ಗ’ ದೇಶಗಳಲ್ಲೂ ಹಣ ಹೂಡಿಕೆ, ಕುಟುಂಬಸ್ಥರೂ ಷೇರುದಾರರು