* ತೆರಿಗೆ ವಂಚಕರ ತಾಣ​ಗ​ಳಾ​ದ ವಿದೇಶಿ ಟ್ರಸ್ಟ್‌ಗಳು!* ಭಾರ​ತ​ದಲ್ಲಿ ಟ್ರಸ್ಟ್‌ ಎಂದ​ರೆ ವಿಶ್ವಾ​ಸದ ಸಂಕೇ​ತ* ಆದರೆ ಕೆಲವು ವಿದೇ​ಶ​ಗ​ಳಲ್ಲಿ ವಂಚ​ಕರ ತಾಣ​ಗ​ಳಿ​ವು* ‘ಟ್ರಸ್ಟ್‌’ ವಿಶ್ವಾಸ ಕಳೆದ ಪಂಡೋರಾ ಪೇಪ​ರ್‍ಸ್

ನವದೆಹಲಿ(ಅ.10): ಭಾರತದ(India) 300 ಜನರು ಸೇರಿದಂತೆ ವಿಶ್ವದ ಸಾವಿರಾರು ಉದ್ಯಮಿಗಳು(Businessman), ಕ್ರೀಡಾಪಟುಗಳು, ರಾಜಕೀಯ ನಾಯಕರು(Political Leaders) ತೆರಿಗೆ(tax) ವಂಚನೆಯ ಉದ್ದೇಶದಿಂದ ವಿದೇಶಗಳಲ್ಲಿ ಸ್ಥಾಪಿಸಿರುವ ಟ್ರಸ್ಟ್‌ಗಳ ಕುರಿತು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಪಂಡೋರಾ ಪೇಪ​ರ್‍ಸ್ ಮೂಲಕ ಬಯಲಿಗೆಳೆದ ಬೆನ್ನಲ್ಲೇ ಇಂಥ ಟ್ರಸ್ಟ್‌ಗಳ ಕುರಿತು ಭಾರೀ ಕುತೂಹಲ ಮೂಡಿದೆ. ಈ ಹಿನ್ನೆಲೆಯಲ್ಲಿ ಇಂಥ ಟ್ರಸ್ಟ್‌ಗಳು, ಅವುಗಳನ್ನು ಸ್ಥಾಪಿಸಲು ಅವಕಾಶ ನೀಡುವ ದೇಶಗಳು, ಸ್ಥಾಪನೆ ಉದ್ದೇಶ ಕುರಿತ ಮಾಹಿತಿ ಇಲ್ಲಿದೆ.

ಟ್ರಸ್ಟ್‌ ಹಾಗೆಂದರೇನು?

ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಆತನ ಆಸ್ತಿಯನ್ನು ನಿರ್ವಹಿಸಲು ನಂಬಿಕಸ್ಥ ವ್ಯವಸ್ಥೆಯೊಂದನ್ನು ರಚಿಸುವುದನ್ನೇ ಟ್ರಸ್ಟ್‌ ಎನ್ನಬಹುದು. ಸಾಮಾನ್ಯವಾಗಿ ಆಸ್ತಿ ನಿರ್ವಹಣೆ, ಉತ್ತರದಾಯಿತ್ವಕ್ಕಾಗಿ ಇವುಗಳನ್ನು ರಚಿಸಲಾಗುತ್ತದೆ. ಈ ವ್ಯವಸ್ಥೆ ಉದ್ಯಮ, ಶ್ರೀಮಂತ ಕುಟುಂಬಗಳ ಆಸ್ತಿ ಅಂದರೆ ಹಣಕಾಸು ಹೂಡಿಕೆ, ಷೇರು, ರಿಯಲ್‌ ಎಸ್ಟೇಟ್‌ ಆಸ್ತಿ ನಿರ್ವಹಣೆಗೆ ನೆರವಾಗುತ್ತದೆ.

ಟ್ರಸ್ಟ್‌ನಲ್ಲಿದೆ 3 ವಿಭಾಗ

1. ಸೆಟ್ಲರ್‌: ಟ್ರಸ್ಟ್‌ ರಚಿಸಿದ ವ್ಯಕ್ತಿ

2. ಟ್ರಸ್ಟಿ: ವ್ಯಕ್ತಿ ಅಥವಾ ಸಂಸ್ಥೆಯ ಲಾಭಕ್ಕಾಗಿ ಟ್ರಸ್ಟ್‌ ನಿರ್ವಹಿಸಲು ಸೆಟ್ಲರ್‌ನಿಂದ ನೇಮಿತ ವ್ಯಕ್ತಿ

3. ಬೆನಿಫೀಷಿಯರಿ: ಟ್ರಸ್ಟ್‌ನ ಆಸ್ತಿ​ಯ ಫಲಾನುಭವಿ

ಭಾರತ ಅಥವಾ ವಿದೇಶದಲ್ಲಿ ಟ್ರಸ್ಟ್‌ ಸ್ಥಾಪಿಸುವುದು ಅಕ್ರಮವೇ?

ದ ಇಂಡಿಯನ್‌ ಟ್ರಸ್ಟ್‌ ಆ್ಯಕ್ಟ್ 1882, ಟ್ರಸ್ಟ್‌ ಪರಿಕಲ್ಪನೆಗೆ ಮಾನ್ಯತೆ ನೀಡುತ್ತದೆ. ಆದರೆ ಭಾರತೀಯ ಕಾನೂನು, ಟ್ರಸ್ಟ್‌ ಅನ್ನು ಕಾನೂನಾತ್ಮಕ ವ್ಯಕ್ತಿ/ಸಂಸ್ಥೆ ಎಂದು ಪರಿಗಣಿಸುವುದಿಲ್ಲ. ಬದಲಾಗಿ ಫಲಾನುಭವಿಗಳ ಲಾಭಕ್ಕಾಗಿ ರಚನೆಯಾದ ಟ್ರಸ್ಟ್‌ ನಿರ್ವಹಣೆಯು ಟ್ರಸ್ಟಿಯ ಹೊಣೆಗಾರಿಕೆ ಎಂದು ಪರಿಗಣಿಸುತ್ತದೆ.

ಅಕ್ರಮ ಅಲ್ಲ ಎಂದ ಮೇಲೆ ತನಿಖೆಯ ಉದ್ದೇಶವೇನು?

ಕಾನೂನು ಬದ್ಧ ಉದ್ದೇಶಕ್ಕಾಗಿಯೂ ಟ್ರಸ್ಟ್‌ ಸ್ಥಾಪಿಸಬಹುದು. ಹೀಗೆ ಸ್ಥಾಪನೆಯಾದರೆ ಅದು ಅಕ್ರಮವಾಗದು. ಆದರೆ ಪಂಡೋರಾ ಪೇಪ​ರ್‍ಸ್ ಬಯಲಿಗೆಳೆದಿರುವ ಪ್ರಕರಣಗಳಲ್ಲಿ ಟ್ರಸ್ಟ್‌ಗಳನ್ನು ಅಕ್ರಮ ಆಸ್ತಿ ಬಚ್ಚಿಡುವ ತಾಣಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ತೆರಿಗೆ ವಂಚಿಸುವ, ಕಾನೂನು ಜಾರಿ ಸಂಸ್ಥೆಗಳಿಂದ ಆಸ್ತಿ ಮುಚ್ಚಿಡುವ, ಸಾಲಗಾರರಿಂದ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳುವ, ಕ್ರಿಮಿನಲ್‌ ಚಟುವಟಿಕೆಗೆ ಬಳಸಿಕೊಳ್ಳುವ ಯತ್ನ ಮಾಡಲಾಗಿದೆ.

ವಿದೇಶಗಳಲ್ಲೇ ಏಕೆ ಟ್ರಸ್ಟ್‌ ಸ್ಥಾಪನೆ?

ಟ್ರಸ್ಟ್‌ಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಕೆಲವು ದೇಶಗಳು, ತೆರಿಗೆ ವಂಚನೆಗೆ ನೆರವಾಗುವ ಜೊತೆಗೆ, ವಿದೇಶೀಯರು ಹೀಗೆ ಇಟ್ಟಅಕ್ರಮ ಆಸ್ತಿ ಕುರಿತು ಗರಿಷ್ಠ ಗೌಪ್ಯತೆಯ ಭರವಸೆ ನೀಡುತ್ತವೆ. ಹೀಗಾಗಿ ಉದ್ಯಮಿಗಳು, ಕ್ರೀಡಾಪಟುಗಳು, ಕ್ರಿಮಿನಲ್‌ಗಳು, ರಾಜಕಾರಣಿಗಳು ಇಂಥ ದೇಶಗಳಲ್ಲಿ ಟ್ರಸ್ಟ್‌ ರಚಿಸಿ ಅಲ್ಲಿ ತಮ್ಮ ಅಕ್ರಮ ಆಸ್ತಿಯನ್ನು ಇಡುತ್ತಾರೆ. ಇಲ್ಲಿ ಟ್ರಸ್ಟಿಹೆಸರು ಮಾತ್ರವೇ ಎಲ್ಲರಿಗೂ ಕಾಣುವ ಕಾರಣ, ಯಾರಿಗೂ ಅದರ ಫಲಾನುಭವಿಗಳ ಹೆಸರು ಗೊತ್ತಾಗದು. ಜೊತೆಗೆ 1985ರಲ್ಲಿ ಭಾರತ ಸರ್ಕಾರ ರದ್ದು ಮಾಡಿದ್ದ ಎಸ್ಟೇಟ್‌ ಸುಂಕ (ಮೃತ ವ್ಯಕ್ತಿಯ ಆಸ್ತಿಯನ್ನು ಅವರ ವಾರಸುದಾರರಿಗೆ ಹಸ್ತಾಂತರಿಸುವ ಮುನ್ನ ಪಾವತಿ ಮಾಡಬೇಕಾದ ತೆರಿಗೆ) ಮರು ಜಾರಿಯ ವದಂತಿ ಇದೆ. ಹೀಗಾಗಿ ಅಂಥ ಕಾಯ್ದೆಗೂ ಜಾರಿಗೂ ಮುನ್ನ ಅಂಥ ಆಸ್ತಿಯನ್ನು ಟ್ರಸ್ಟ್‌ಗಳಿಗೆ ವರ್ಗಾಯಿಸಿ ತೆರಿಗೆ ಹಣ ಉಳಿಸುವುದು.

ಮುಖ್ಯ ಉದ್ದೇಶಗಳು

1. ತೆರಿಗೆ ವಂಚನೆ ಮಾಡುವುದು

2. ಅಕ್ರಮ ಆಸ್ತಿ ಸಂಗ್ರಹ

3. ಆಸ್ತಿಯ ಕುರಿತು ರಹಸ್ಯ ಕಾಪಾಡುವುದು.

4. ಎಸ್ಟೇಟ್‌ ಸುಂಕ ತಪ್ಪಿಸುವುದು.

ಪನಾಮಾ ಪೇಪ​ರ್ಸ್‌, ಪಂಡೋರಾ ಪೇಪರ್ಸ್‌ಗೂ ಏನು ವ್ಯತ್ಯಾಸ?

ಪನಾಮಾ ಪೇಪ​ರ್‍ಸ್, ವ್ಯಕ್ತಿಗಳು ಮತ್ತು ಕಾರ್ಪೊರೆಟ್‌ಗಳು ತೆರಿಗೆ ವಂಚನೆಗೆ ನೆರವಾಗುವ ದೇಶಗಳಲ್ಲಿ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಅಲ್ಲಿ ಹೂಡಿಕೆ ಮಾಡಿದ್ದನ್ನು ಪತ್ತೆ ಹೆಚ್ಚಿತ್ತು. ಆದರೆ ಪಂಡೋರಾ ಪೇಪ​ರ್‍ಸ್, ಉದ್ಯಮ ಸಂಸ್ಥೆಗಳು ವಿದೇಶಿ ಟ್ರಸ್ಟ್‌ ಸ್ಥಾಪನೆಯನ್ನು ಹೇಗೆ ನ್ಯೂ ನಾರ್ಮಲ್‌ ಮಾಡಿಕೊಂಡಿವೆ. ಈ ಮೂಲಕ ತೆರಿಗೆ ವಂಚನೆ ಮಾಡುತ್ತಿವೆ ಎಂಬುದನ್ನು ಬಯಲಿಗೆಳೆದಿದೆ.

ಟ್ರಸ್ಟ್‌ ರಚನೆಗೆ ಅವಕಾಶ ಕಲ್ಪಿಸುವ ದೇಶಗಳು

ಸಮೋವಾ, ಬೆಲಿಝಿ, ಪನಾಮಾ, ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌, ಸಿಂಗಾಪುರ, ನ್ಯೂಜಿಲೆಂಡ್‌, ಸೌತ್‌ ಡಕೋಟಾ