*ಅಮೆಜಾನ್ ಡಾಟ್ ಕಾಮ್ ಇಂಕ್ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಕುಸಿದ ಷೇರು ಮೌಲ್ಯ*ತ್ರೈಮಾಸಿಕ ನಷ್ಟ ಹಾಗೂ ನಿಧಾನಗತಿಯ ಮಾರಾಟದ ಬಗ್ಗೆ ವರದಿಯಲ್ಲಿ ಉಲ್ಲೇಖ*ಶುಕ್ರವಾರ ಒಂದೇ ದಿನ 54 ಬಿಲಿಯನ್ ಗಿಂತಲೂ ಹೆಚ್ಚಿನ ಸಂಪತ್ತು ಕಳೆದುಕೊಂಡ ವಿಶ್ವದ 500 ಶ್ರೀಮಂತರು
ನ್ಯೂಯಾರ್ಕ್ (ಏ.30): ವಿಶ್ವದ ಎರಡನೇ ಅತೀದೊಡ್ಡ ಶ್ರೀಮಂತ ಜೆಫ್ ಬೆಜೋಸ್ (Jeff Bezos) ಅವರ 20.5 ಬಿಲಿಯನ್ ಡಾಲರ್ (1.56 ಲಕ್ಷ ಕೋಟಿ ರೂ.) ಸಂಪತ್ತು ಕೆಲವೇ ಗಂಟೆಗಳಲ್ಲಿ ಕರಗಿ ಹೋಗಿದೆ. ಈ ಮೂಲಕ ಅಮೆಜಾನ್ ಸಂಸ್ಥಾಪಕರಿಗೆ ಶುಕ್ರವಾರ (ಏ.30) ದೊಡ್ಡ ಆಘಾತವಾಗಿದೆ. ಅಮೆಜಾನ್ ಡಾಟ್ ಕಾಮ್ ಇಂಕ್ ( Amazon.com Inc) ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಈ ನಷ್ಟ ಸಂಭವಿಸಿದೆ.
ಅಮೆಜಾನ್ ಡಾಟ್ ಕಾಮ್ ಇಂಕ್ ವರದಿಯಲ್ಲಿ ತ್ರೈಮಾಸಿಕ ನಷ್ಟ ಹಾಗೂ 2001ರ ಬಳಿಕದ ಅತ್ಯಂತ ನಿಧಾನಗತಿಯ ಮಾರಾಟ ಬೆಳವಣಿಗೆಯನ್ನು ಉಲ್ಲೇಖಿಸಲಾಗಿತ್ತು. ಇದು ಹೂಡಿಕೆದಾರರಿಗೆ ನಿರಾಸೆ ಮೂಡಿಸಿದೆ. ಪರಿಣಾಮ ಜನಪ್ರಿಯ ಇ-ಕಾಮರ್ಸ್ ಕಂಪೆನಿಯ ಷೇರುಗಳು ಶುಕ್ರವಾರ ಶೇ.14ರಷ್ಟು ಇಳಿಕೆ ದಾಖಲಿಸಿವೆ. ಇನ್ನೊಂದೆಡೆ ಬೆಜೋಸ್ ನಿವ್ವಳ ಆಸ್ತಿ ಮೌಲ್ಯ 148.4 ಬಿಲಿಯನ್ ಅಮೆರಿಕನ್ ಡಾಲರ್ ಗೆ ಕುಸಿಯಿತು ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ತಿಳಿಸಿದೆ. ಈ ವರ್ಷ ಬೆಜೋಸ್ ಆಸ್ತಿ 210 ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಹೆಚ್ಚಾಗುವ ಮೂಲಕ ಗರಿಷ್ಠ ಮಟ್ಟ ತಲುಪಿತ್ತು. ಆದರೆ, ಇದೇ ವರ್ಷ ಅತ್ಯಂತ ತಳಮಟ್ಟಕ್ಕೂ ತಲುಪಿರೋದು ವಿಪರ್ಯಾಸ.
ಭಾರತದ ಎಲಾನ್ ಮಸ್ಕ್ ಯಾರು? ಇಲ್ಲಿದೆ ನೋಡಿ ಸ್ನ್ಯಾಪ್ ಡೀಲ್ ಸಿಇಒ ಕುನಾಲ್ ಬಹ್ಲ್ ನೀಡಿರುವ ಉತ್ತರ
ಟೆಕ್ನಾಲಜಿ ಷೇರುಗಳಿಗೆ ಈ ತಿಂಗಳು ವರ್ಷಗಳಲ್ಲೇ ಅತ್ಯಂತ ಕೆಟ್ಟ ಸಮಯವಾಗಿ ಪರಿಣಾಮಿಸಿದೆ. ಶುಕ್ರವಾರ ಒಂದೇ ದಿನ ವಿಶ್ವದ 500 ಶ್ರೀಮಂತರು ಒಟ್ಟು 54 ಬಿಲಿಯನ್ ಗಿಂತಲೂ ಹೆಚ್ಚಿನ ಸಂಪತ್ತನ್ನು ಕಳೆದುಕೊಂಡಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಹೇಳಿದೆ. ಮಾರುಕಟ್ಟೆ ಸೂಚ್ಯಂಕಗಳಾದ ಎಸ್ ಆಂಡ್ ಪಿ 500 ಸೂಚ್ಯಂಕ ಶೇ.3.6ರಷ್ಟು ಇಳಿಕೆ ಕಂಡಿದೆ. ಇನ್ನು ನಾಸ್ದಾಕ್ (Nasdaq) 100 ಸೂಚ್ಯಂಕ ಶೇ.4.5ರಷ್ಟು ಇಳಿಕೆ ಕಂಡಿದೆ. 2008ರ ಬಳಿಕ 2022ರ ಏಪ್ರಿಲ್ ಅತ್ಯಂತ ಕೆಟ್ಟ ತಿಂಗಳಾಗಿ ಗುರುತಿಸಿಕೊಂಡಿದೆ.
ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತನಾಗಿದ್ದು, ಅವರ ನಂತರದ ಸ್ಥಾನದಲ್ಲಿ58 ವರ್ಷದ ಬೆಜೋಸ್ ಗುರುತಿಸಿಕೊಂಡಿದ್ದರು. ಆದ್ರೆ 2022ರಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದ ವಿಶ್ವದ ಮೂರನೇ ಉದ್ಯಮಿ ಇವರಾಗಿದ್ದಾರೆ. 2022ರ ಜನವರಿ ಬಳಿಕ ಬೆಜೋಸ್ ನಿವ್ವಳ ಆಸ್ತಿಯಲ್ಲಿ ಅಂದಾಜು 44 ಬಿಲಿಯನ್ (4,400 ಕೋಟಿ) ಅಮೆರಿಕನ್ ಡಾಲರ್ ಇಳಿಕೆಯಾಗಿದೆ. ಕಾರ್ಮಿಕ ವೆಚ್ಚ ಅಮೆಜಾನ್ ಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಜೊತೆಗೆ ಕೊರೋನಾ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ನಡೆದ ನೇಮಕಾತಿ ಕೂಡ ಕಂಪೆನಿಯ ವೆಚ್ಚ ಹೆಚ್ಚಿಸಿದೆ. ಇನ್ನು ಜಗತ್ತಿನಾದ್ಯಂತ ಹೆಚ್ಚುತ್ತಿರುವ ಹಣದುಬ್ಬರ ಕೂಡ ಮಾರಾಟಕ್ಕೆ ಹೊಡೆತ ನೀಡಿದೆ. ಮಾರ್ಚ್ 31ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ಅಮೆಜಾನ್ ಗೆ 3.8 ಬಿಲಿಯನ್ ಡಾಲರ್ ನಿವ್ವಳ ನಷ್ಟವಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ 8.1 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ಗಳಿಸಿತ್ತು.
ಜುಕರ್ ಬರ್ಗ್ ಆದಾಯದಲ್ಲೂ ಕುಸಿತ
ಕೇವಲ 9 ತಿಂಗಳ ಹಿಂದೆ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ (Mark Zuckerberg) ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. 2021ರ ಜುಲೈ ವೇಳೆಗೆ ಅವರ ಸಂಪತ್ತು 1.42 ಲಕ್ಷ ಕೋಟಿ ಆಗಿತ್ತು. ಆದರೆ, ಕಂಪನಿಯ ಕೆಟ್ಟ ಫಲಿತಾಂಶ, ಟಿಕ್ ಟಾಕ್ ಹಾಗೂ ಆಪಲ್ ನಿಂದ ಎದುರಾಗಿರುವ ಸವಾಲು, ಫೇಸ್ ಬುಕ್ ಬಳಕೆದಾರರಲ್ಲಿಇಳಿಕೆ ಇವೆಲ್ಲವುಗಳಿಂದನಜುಕರ್ ಬರ್ಗ್ ಅವರ ಆದಾಯ ಅರ್ಧಕ್ಕರ್ಧ ಎಂದರೆ 73 ಸಾವಿರ ಕೋಟಿಗೆ ಇಳಿದಿದೆ. ಆ ಮೂಲಕ ಶ್ರೀಮಂತರ ಪಟ್ಟಿಯಲ್ಲಿ ಅವರು 14ನೇ ಸ್ಥಾನಕ್ಕೆ ಕುಸಿದಿದ್ದಾರೆ.
