ಐಟಿ ದೈತ್ಯ ಇನ್ಫೋಸಿಸ್‌ನ ಅಧ್ಯಕ್ಷ ಸ್ಥಾನಕ್ಕೆ ರವಿ ಕುಮಾರ್ ರಾಜೀನಾಮೆ ನೀಡಿದ್ದಾರೆ. Q2 ಗಳಿಕೆಯ ಘೋಷಣೆಗೆ ಕೆಲ ದಿನಗಳಿಗೂ ಮೊದಲು ರವಿ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ಐಟಿ ದೈತ್ಯ ಇನ್ಫೋಸಿಸ್‌ನ ಅಧ್ಯಕ್ಷ ಸ್ಥಾನಕ್ಕೆ ರವಿ ಕುಮಾರ್ ರಾಜೀನಾಮೆ ನೀಡಿದ್ದಾರೆ. Q2 ಗಳಿಕೆಯ ಘೋಷಣೆಗೆ ಕೆಲ ದಿನಗಳಿಗೂ ಮೊದಲು ರವಿ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇನ್‌ಫೋಸಿಸ್ ಸಂಸ್ಥೆ ಈ ವಿಚಾರವನ್ನು ಖಚಿತಪಡಿಸಿದೆ. ಆದರೆ Q2 ಗಳಿಕೆಯ ಘೋಷಣೆಗೆ ಕೆಲ ದಿನಗಳಿಗೂ ಮೊದಲು ಈ ರಾಜೀನಾಮೆಗೆ ಏನು ಕಾರಣ ಎಂಬುದನ್ನು ಇನ್ಫೋಸಿಸ್ ಖಚಿತಪಡಿಸಿಲ್ಲ. 

ಕಂಪನಿಗೆ ರವಿಕುಮಾರ್ ಅವರು ನೀಡಿದ ಕೊಡುಗೆಗಳಿಗಾಗಿ ಇನ್ಫೋಸಿಸ್ ನಿರ್ದೇಶಕರ ಮಂಡಳಿಯು ರವಿಕುಮಾರ್ ಅವರಿಗೆ ತಮ್ಮ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದು ಇನ್ಫೋಸಿಸ್ ಪ್ರಕಟಣೆ (regulatory filing) ಹೇಳಿದೆ. ಅಧ್ಯಕ್ಷರಾಗಿದ್ದ ಸಮಯದಲ್ಲಿ ರವಿ ಕುಮಾರ್ ಎಸ್ ಅವರು ಎಲ್ಲಾ ಉದ್ಯಮ ವಿಭಾಗಗಳಲ್ಲಿ ಇನ್ಫೋಸಿಸ್ ಗ್ಲೋಬಲ್ ಸರ್ವಿಸಸ್ ಆರ್ಗನೈಸೇಶನ್ ಅನ್ನು ಮುನ್ನಡೆಸಿದರು.

ಅವರು ಕನ್ಸಲ್ಟಿಂಗ್, ತಂತ್ರಜ್ಞಾನ, ಮೂಲ ಸೌಕರ್ಯ, ಇಂಜಿನಿಯರಿಂಗ್ ಮತ್ತು ಪ್ರೊಸೆಸ್ ವರ್ಟಿಕಲ್‌ಗಳು ಮುಂತಾದ ಸಾಲು ಸಾಲು ಸೇವೆಗಳು ಮತ್ತು ವಿಶೇಷ ಡಿಜಿಟಲ್ ಮಾರಾಟ ವ್ಯವಹಾರಗಳನ್ನು ಮುನ್ನಡೆಸಿದ್ದರು.ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ (Bhabha Atomic Research Center) ಪರಮಾಣು ವಿಜ್ಞಾನಿಯಾಗಿ (nuclear scientist) ತಮ್ಮ ವೃತ್ತಿಜೀವನವನ್ನು ಆರಂಭಿಸಿದ ರವಿ ಕುಮಾರ್ ಅವರು 2002 ರಲ್ಲಿ ಇನ್ಫೋಸಿಸ್‌ಗೆ ಸೇರಿದರು ಮತ್ತು 2016 ರಲ್ಲಿ ಅದರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.


2017 ರಲ್ಲಿ ಅವರನ್ನು ಸಂಸ್ಥೆಯ ಡೆಪ್ಯೂಟಿ ಸಿಒಒ (Deputy COO) ಎಂದು ಮರು ನೇಮಿಸಲಾಗಿತ್ತು ಮತ್ತು ಅವರೇ ಕಂಪನಿಯ ಮುಂದಿನ ಸಿಒಒ (ಸಿಒಒ ಎಂದರೆ ಸಂಸ್ಥೆಯಲ್ಲಿ ಉನ್ನತ ಶ್ರೇಣಿಯ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಒಂದಾಗಿದೆ) ಎಂದು ವ್ಯಾಪಕವಾಗಿ ಹೇಳಿಕೊಂಡು ಬರಲಾಯಿತು. ಆದರೆ ಇನ್ಫೋಸಿಸ್ ನಂತರ ಪ್ರಸ್ತುತ ಸಿಒಒ ಆಗಿದ್ದ ಯುಬಿ ಪ್ರವೀಣ್ ರಾವ್ (UB Pravin Rao) ಅವರ ನಿವೃತ್ತಿಯ ನಂತರ ಆ ಸಿಒಒ ಹುದ್ದೆಯನ್ನೇ ಮುಚ್ಚಿತ್ತು. 

ಇನ್ಫೋಸಿಸ್‌ನ 2021-22ರ ವಾರ್ಷಿಕ ವರದಿಯ ಪ್ರಕಾರ, ಸಿಇಒ ಸಲೀಲ್ ಪರೇಖ್ (Salil Parekh) ಮತ್ತು ಮಾಜಿ ಸಿಒಒ ಯುಬಿ ಪ್ರವೀಣ್ ರಾವ್ ನಂತರ ಕುಮಾರ್ ಅವರು ಕಂಪನಿಯ ಮೂರನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿರಿಯ ಅಧಿಕಾರಿಯಾಗಿದ್ದಾರೆ. ಅಕ್ಟೋಬರ್ 13 ರಂದು ತನ್ನ ಎರಡನೇ ತ್ರೈಮಾಸಿಕ ಗಳಿಕೆಯನ್ನು ಇನ್ಫೋಸಿಸ್ ಪ್ರಕಟಿಸಲಿದ್ದು, ಪ್ರಸ್ತುತ ಇನ್ಫೋಸಿಸ್‌ ಷೇರುಗಳು ಬಿಎಸ್‌ಇಯಲ್ಲಿ 2.65 ಶೇಕಡಾಕ್ಕೆ ಕಡಿಮೆಯಾಗಿ ₹ 1,423.90 ಕ್ಕೆ ಕೊನೆಗೊಂಡಿದೆ. ಅಕ್ಟೋಬರ್ 13 ರಂದು ನಡೆಯುವ ಸಭೆಯಲ್ಲಿ ಕಂಪನಿಯ ಮಂಡಳಿಯು ಷೇರು ಮರು ಖರೀದಿಯನ್ನು ಪರಿಗಣಿಸಲಿದೆ.