Asianet Suvarna News Asianet Suvarna News

ಐಟಿ ರಿಟರ್ನ್ಸ್‌ಗೆ ಹೊಸ ಪೋರ್ಟಲ್: ತೆರಿಗೆದಾರರಿಗಿಲ್ಲ ಹೊರೆ: ಈ ಎಲ್ಲಾ ಆಯ್ಕೆ ಇರುತ್ತೆ!

* ತೆರಿಗೆದಾರರ ಹೊರೆ ಕಡಿಮೆ ಮಾಡಲಿದೆ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ಪೋರ್ಟಲ್ 

* ನೂತನ ವೆಬ್‌ಸೈಟ್‌ ಕಾರ್ಯಾರಂಭಕ್ಕೆ ಕ್ಷಣಗಣನೆ, ಜೂ.7 ಕ್ಕೆ ಲೋಕಾರ್ಪಣೆ

* ಹೊಸ ಪೋರ್ಟಲ್‌ನಲ್ಲಿ ಏನೇನು ಹೊಸ ಸೌಲಭ್ಯವಿದೆ? ಇಲ್ಲಿದೆ ವಿವರ

IT dept reveals features of its new e filing portal check details pod
Author
Bangalore, First Published Jun 6, 2021, 4:38 PM IST

ನವದೆಹಲಿ (ಜೂ. 06): ಆದಾಯ ತೆರಿಗೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಇ- ಫೈಲಿಂಗ್​ ವೆಬ್​ಸೈಟ್ ಕೆಲ ಬದಲಾವಣೆಗಳೊಂದಿಗೆ ಮತ್ತೆ ಆರಂಭಗೊಳ್ಳಲಿದೆ. ಹೊಸ ವಿಳಾಸ, ಹೊಸರೂಪ, ಹೊಸ ಸೌಲಭ್ಯಗಳುಳ್ಳ ಪೋರ್ಟಲ್‌ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.  ಈ ಹೊಸ ವೆಬ್‌ಸೈಟಿನಲ್ಲಿ ಹತ್ತು ಹಲವು ವಿಶಿಷ್ಟತೆಗಳಿವೆ. ಹಾಗಾದ್ರೆ ಈ ಪೋರ್ಟಲ್‌ನಲ್ಲಿ ಹೊಸತೇನಿದೆ? ಅನ್ನೋರಿಗೆ ಈ ಸುದ್ದಿ.

"

ಸರಳ, ನೆನಪಿರುವಂತಹ ವಿಳಾಸ: 

ಹೌದು ಮೇ 31 ರಂದು ಇ-ಫೈಲಿಂಗ್‌ ಹಳೆ ವೆಬ್‌ಸೈಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ನಾಳೆ (ಜೂ. 7)ರಂದು ಹೊಸ ವೆಬ್‌ಸೈಟ್‌ಗೆ ಚಾಲನೆ ಸಿಗಲಿದೆ. ವಿಶೇಷವೆಂದರೆ, ಮಾರುದ್ದ ಇದ್ದ ಪೋರ್ಟಲ್‌ ಅಡ್ರೆಸ್‌ ಈಗ ಸಣ್ಣದಾಗಿದೆ. ಅಷ್ಟೇ ಅಲ್ಲ,  ನಾಳೆ (ಜೂ. 7) ಆರಂಭಗೊಳ್ಳಲಿರುವ ಆದಾಯ ತೆರಿಗೆಯ ಇ-ಫೈಲಿಂಗ್‌ನ ನೂತನ ವೆಬ್‌ಸೈಟ್‌ www.incometax.gov.in ನಲ್ಲಿರೋ ಸೇವೆಯಿಂದ ಬಳಕೆದಾರರ ಹೊರೆ ಬಹಳಷ್ಟು ಕಡಿಮೆಯಾಗಲಿದೆ.  

ನೇರ ಪಾವತಿ- ತ್ವರಿತ ರಿಫಂಡ್:

ಈ ಸಂಬಂಧ ಆದಾಯ ತೆರಿಗೆ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿ ನೂತನ ವೆಬ್‌ಸೈಟಿನಲ್ಲಿರೋ ಬದಲಾವಣೆ ಬಗ್ಗೆ ಮಾಹಿತಿ ನೀಡಿದೆ. ಇದರ ಅನ್ವಯ ಇನ್ಮುಂದೆ ಈ ಪೋರ್ಟಲ್‌ನಲ್ಲಿ ನೇರವಾಗಿ ಆದಾಯ ತೆರಿಗೆ ಪಾವತಿಸಬಹುದು. ಇಲ್ಲೇ ತೆರಿಗೆ ಸಂಬಂಧಿತ ಎಲ್ಲಾ ಮಾಹಿತಿಯೂ ಸಿಗಲಿದೆ. ಅವೆಲ್ಲಕ್ಕೂ ಮಿಗಿಲಾಗಿ ಕೂಡಲೇ ರಿಫಂಡ್‌ ಕೂಡಾ ಸಿಗಲಿದೆ!

ಹೊಸ ಐಟಿ ರಿಟರ್ನ್ಸ್‌ಗೆ ನೂತನ ವೆಬ್‌ಸೈಟ್‌ : ಜೂ.7ರಂದು ಬಿಡುಗಡೆ

ಸರಳ ಫೈಲಿಂಗ್ ಪ್ರಕ್ರಿಯೆ: 

ಆದಾಯ ತೆರಿಗೆ ಪಾವತಿಗೆ ಹೊಸ ಕ್ರಮ ಪರಿಚಯಿಸಲಾಗಿದ್ದು, ಇದರಲ್ಲಿ ಅರ್ಜಿ ಫಿಲ್ ಮಾಡುವ ಅಗತ್ಯವಿಲ್ಲ, ಕೇವಲ ಪ್ರಶ್ನೆಗಳಿಗೆ ಉತ್ತರಿಸಿದ್ರೆ ಆಯ್ತು. ಉತ್ತರ ಕೊಟ್ಟಂತೆಯೇ ರಿಟರ್ನ್ ಕೂಡಾ ಫೈಲ್ ಆಗುತ್ತದೆ. ಅರ್ಜಿ ಫಿಲ್ ಮಾಡುವಾಗ ಸಮಸ್ಯೆ ಎದುರಿಸುವವರ ಹೊರೆ ಈ ಹೊಸ ಪ್ರಕ್ರಿಯೆ ಇಳಿಸಿದೆ. 

ಪಾವತಿಗೆ ಮತ್ತಷ್ಟು ಆಯ್ಕೆಗಳು: 

ಹೊಸ ಐಟಿಆರ್ ವೆಬ್​ಸೈಟ್ ತೆರಿಗೆ ಸಂದಾಯ ಮಾಡಲು ಆನ್​ಲೈನ್ ಪಾವತಿ ವ್ಯವಸ್ಥೆ ಹೊಂದಿದೆ. ನೆಟ್​ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಆರ್​ಟಿಜಿಎಸ್​ ಅಥವಾ ಎನ್​ಇಎಫ್​ಟಿ ಹೀಗೆ ತೆರಿಗೆದಾರರ ಯಾವುದೇ ಖಾತೆಯಿಂದ ಮತ್ತು ಯಾವುದೇ ಬ್ಯಾಂಕ್​ನಿಂದ ತೆರಿಗೆ ಪಾವತಿಸಬಹುದು. ಹಿಂದಿನ ವ್ಯವಸ್ಥೆಯಲ್ಲಿ ಯುಪಿಐ, ಕ್ರೆಡಿಟ್ ಕಾರ್ಡ್ ಮಾತ್ರ ಇತ್ತು.

ಸ್ಟೇಟ್‌ಮೆಂಟ್‌ ಕಿರಿಕಿರಿ ಇಲ್ಲ!:

ಇಷ್ಟೇ ಅಲ್ಲದೇ ರಿಟರ್ನ್ ಫೈಲ್ ಮಾಡುವಾಗ ಫಿಲ್ ಮಾಡಬೇಕಾದ ಮಾಹಿತಿಯೂ ಕಡಿಮೆಯಾಗಲಿದೆ. ಹೌದು ಈವರೆಗೆ ಪ್ರತಿಯೊಂದೂ ಬ್ಯಾಂಕ್‌ ಅಕೌಂಟ್‌ನ ಸ್ಟೇಟ್ಮೆಂಟ್‌ ಚೆಕ್ ಮಾಡಬೇಕಿತ್ತು. ಆದರೀಗ ಈ ಹೊಸ ಪೋರ್ಟಲ್ ತಾನೇ ಖುದ್ದು ನಿಮ್ಮ ಬ್ಯಾಂಕ್ ಡೀಟೇಲ್ಸ್ Fetch ಮಾಡಿಕೊಳ್ಳಲಿದೆ. ಅಪ್ರೂವ್ ಮಾಡೋದೊಂದೇ ನಿಮ್ಮ ಕೆಲಸ. 

ಶೇರು ವ್ಯವಹಾರದ ಮಾಹಿತಿ:

ಇನ್ನು ಶೇರು ಖರೀದಿಸುವಾಗ ನಿಮಗೆ ಸಿಗುವ ಡಿವಿಡೆಂಡ್ ಇನ್‌ಕಂ ಮಾಹಿತಿಯೂ ಇಲ್ಲಿ ಮೊದಲೇ ನಮೂದಾಗಿರುತ್ತದೆ. ಶೇರು ಮಾರುವುದರಿಂದ ನಿಮಗಾಗುವ ಲಾಭ ಹಾಗೂ ನಷ್ಟವೂ ಇಲ್ಲಿ ತಿಳಿಯಲಿದೆ. ಐಟಿ ವಿಭಾಗ ತೆರಿಗೆದಾರರ ಮಾಹಿತಿ ಅನೇಕ ಬಗೆಯಲ್ಲಿ ಸಂಗ್ರಹಿಸುತ್ತಿತ್ತು. ಆದರೀಗ ಈ ಎಲ್ಲಾ ಮಾಹಿತಿ ಪೋರ್ಟಲ್‌ನಲ್ಲೇ ಲಭ್ಯವಾಗಲಿದೆ. ಟ್ಯಾಕ್ಸ್‌ ಡಿಡಕ್ಷನ್ ಇನ್ವೆಸ್ಟ್‌ಮೆಂಟ್‌ಗಳಾದ ಇನ್ಶೂರೆನ್ಸ್, ಪಿಪಿಎಫ್‌ನಂತಹ ಮಾಹಿತಿ ಅಲ್ಲಿರುತ್ತದೆ. 

ಮಾಹಿತಿ- ಮಾರ್ಗದರ್ಶನ:

ಕಳೆದ ಮೂರ್ನಾಲ್ಕು ವರ್ಷಗಳಿಂದಲೇ ಇದಕ್ಕಾಗಿ ಐಟಿ ಇಲಾಖೆ ತಯಾರಿ ಆರಂಭಿಸಿತ್ತು. ಇದರ ಅನ್ವಯವೇ ಈ ಹೊಸ ಪೋರ್ಟಲ್‌ನಲ್ಲಿ ಬದಲಾವಣೆಗಳನ್ನು ತರಲಾಗಿದೆ. ಹೀಗಾಗಿ ಈ ಹೊಸ ಪೋರ್ಟಲ್ ಬಳಕೆಯೂ ಬಹಳ ಸುಲಭ. ಯಾಕಂದ್ರೆ ಈ ಪೋರ್ಟಲ್ ಓಪನ್ ಮಾಡುತ್ತಿದ್ದಂತೆಯೇ ಮೊದಲ ಪುಟದಲ್ಲೇ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್ ಮಾಡೋದು ಹೇಗೆ? ತೆರಿಗೆ ಪಾವತಿ ಹೇಗೆ ಎಂಬ ವಿಚಾರವಾಗಿ ಬೇಕಾದ ಎಲ್ಲಾ ಮಾಹಿತಿ ಸಿಗಲಿದೆ. 

ಮೊಬೈಲ್ ಇದ್ರೆ ಸಾಕು!

ಇವೆಲ್ಲಕ್ಕೂ ಹೆಚ್ಚಾಗಿ ನಿರಾಳಗೊಳಿಸುವ ಮತ್ತೊಂದು ವಿಚಾರ ಅಂದ್ರೆ ಐಟಿ ರಿಟರ್ನ್ಸ್ ಫೈಲ್ ಮಾಡಲು ಕಂಪ್ಯೂಟರ್, ಲ್ಯಾಪ್‌ಟಾಪ್ ಬೇಕಂತಿಲ್ಲ. ಇದಕ್ಕಾಗಿ ಅಧಿಕೃತ ಮೊಬೈಲ್ ಆಪ್‌ ಕೂಡಾ ಬಿಡುಗಡೆಗೊಳಿಸಲಾಗಿದೆ. ಇಲ್ಲಿ ಕೂಡಾ ಪೋರ್ಟಲ್‌ನಲ್ಲಿ ಸಿಗುವ ಎಲ್ಲಾ ಸೇವೆಗಳು ಇರಲಿವೆ. ಜೊತೆಗೆ ಏನಾದರೂ ಗೊಂದಲವಾದರೆ ಮಾಹಿತಿ ಪಡೆಯಲು FAQ ಆಯ್ಕೆಯೂ ನೀಡಲಾಗಿದೆ. ಈ ಹಿಂದೆ ವಿಭಿನ್ನ ಪೋರ್ಟಲ್‌ನಲ್ಲಿ ಸಿಗುತ್ತಿದ್ದ ಸೇವೆಗಳು ಇನ್ಮುಂದೆ ಒಂದೇ ಸೈಟ್‌ನಲ್ಲಿ ಸಿಗಲಿದೆ ಎಂಬುವುದು ಮತ್ತೊಂದು ಖುಷಿಯ ವಿಚಾರ. 

ಐಟಿಆರ್‌ ಸಲ್ಲಿಕೆ ಗಡುವು ವಿಸ್ತರಣೆ:

ಇನ್ನು ಕೊರೋನಾದಿಂದಾಗಿ ಸರ್ಕಾರ ಐಟಿ ರಿಟರ್ನ್ಸ್ ಪಾವತಿಸುವ ಅವಧಿಯನ್ನೂ ಜುಲೈ 31 ರಿಂದ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿದೆ. ಆಡಿಟ್‌ ದಿನಾಂಕವನ್ನೂ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 30ಕ್ಕೆ ವಿಸ್ತರಿಸಿದೆ. ಕಂಪನಿಗಳ ತಲೆಬಿಸಿ ಕೊಂಚ ಇಳಿಸಿರುವ ಸರ್ಕಾರ ಫಾರ್ಮ್ 16 ವಿತರಿಸುವ ಸಮಯವನ್ನು ಜೂನ್ 15 ರಿಂದ ಜುಲೈ 15ಕ್ಕೆ ವಿಸ್ತರಿಸಿದೆ. ಹಾಗಾದ್ರೆ ಮತ್ತೇಕೆ ತಡ? ಇನ್‌ಕಂ ಟ್ಯಾಕ್ಸ್‌ನ ಹೊಸ ವೆಬ್‌ಸೈಟಿಗೆ ಭೇಟಿ ಕೊಟ್ಟು ಆರಾಮಾಗಿ ಐಟಿ ರಿಟರ್ನ್ಸ್ ಸಲ್ಲಿಸಿ.
 

Follow Us:
Download App:
  • android
  • ios