2026ರ ವೇಳೆಗೆ 500 ರೂಪಾಯಿ ನೋಟುಗಳು ಬ್ಯಾನ್ ಆಗುತ್ತವೆ ಎಂಬ ವೈರಲ್ ವೀಡಿಯೊದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. 

ನವದೆಹಲಿ: 2026ರ ವೇಳೆಗೆ 500 ರೂಪಾಯಿ ನೋಟುಗಳು ಬ್ಯಾನ್ ಆಗುತ್ತವೆ ಎಂದು ಯೂಟ್ಯೂಬ್‌ನಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಈ ವೀಡಿಯೋಈಗ ಸಾಕಷ್ಟು ವೈರಲ್ ಆಗಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. 500 ರೂಪಾಯಿ ನೋಟುಗಳು ಬ್ಯಾನ್‌ ಆಗುತ್ತವೆ ಎಂದು ಜನ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಈಗ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಚಾರ ಸುಳ್ಳು ಎಂದು ಹೇಳಿದೆ. ಇದು ಸಂಪೂರ್ಣ ಸುಳ್ಳು ವರದಿಯಾಗಿದ್ದು, ಭಾರತದ ರಿಸರ್ವ್ ಬ್ಯಾಂಕ್ ಮುಂದೆ ಅಂತಹ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸರ್ಕಾರವೂ ಸ್ಪಷ್ಟನೆ ನೀಡಿದೆ.

ಜೂನ್ 2 ರಂದು 'ಕ್ಯಾಪಿಟಲ್ ಟಿವಿ' ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮುಂದಿನ ವರ್ಷದ ಮಾರ್ಚ್ ನಿಂದ 500 ರೂಪಾಯಿಯ ನೋಟುಗಳು ಹಂತಹಂತವಾಗಿ ರದ್ದಾಗಲಿವೆ ಎಂದು ಹೇಳಲಾಗಿದೆ. ಸುಮಾರು 12 ನಿಮಿಷಗಳ ಈ ವೀಡಿಯೊವನ್ನು ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, 500 ರೂ. ನೋಟುಗಳನ್ನು ಸ್ಥಗಿತಗೊಳಿಸಲಾಗಿಲ್ಲ ಮತ್ತು ಅವು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಉಳಿಯಲಿವೆ ಎಂದು ಹೇಳಿದೆ. ಈ ಬಗ್ಗೆ ಭಾರತ ಸರ್ಕಾರದ ಅಧಿಕೃತ ಸತ್ಯ-ಪರಿಶೀಲನಾ ಸಂಸ್ಥೆ(fact-checking agency)ಯಾಗಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ)ನ ಸತ್ಯ ಪರಿಶೀಲನಾ ವಿಭಾಗವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಪೋಸ್ಟ್‌ ಮಾಡಿದೆ. ನಾಗರಿಕರು ಈ ತಪ್ಪು ಮಾಹಿತಿಗೆ ಬಲಿಯಾಗಬಾರದು ಎಂದು ಅದು ಜನರಿಗೆ ಸಲಹೆ ನೀಡಿದೆ. ಯಾವುದೇ ಸುದ್ದಿಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದ ಬಂದ ಸುದ್ದಿಗಳನ್ನು ಪರಿಶೀಲಿಸಿ ಎಂದು ಪಿಐಬಿ ಹೇಳಿದೆ.

2016ರಲ್ಲಿ ರದ್ದಾಗಿದ್ದ ಹಳೆ 500ರ ನೋಟು

2016 ರ ನವಂಬರ್‌ 8ರಂದು ನೋಟು ರದ್ದತಿಯ ನಂತರ ಹಳೆಯ 500 ರೂ ನೋಟುಗಳನ್ನು ಬ್ಯಾನ್‌ ಮಾಡಿ ಹೊಸದಾದ 500 ರೂ. ನೋಟನನು ಚಲಾವಣೆಗೆ ತರಲಾಯ್ತು. ಪ್ರಸ್ತುತ ಚಲಾವಣೆಯಲ್ಲಿರುವ 500 ರೂ ನೋಟಿನ ಗಾತ್ರ 66mm x 150mm ಆಗಿದೆ. ನೋಟುಗಳ ಬಣ್ಣವು ಹಸಿರು ಬೂದು ಬಣ್ಣದ್ದಾಗಿದ್ದು ಅದರಲ್ಲಿ ಭಾರತೀಯ ಪರಂಪರಿಕ ತಾಣವಾದ ಕೆಂಪು ಕೋಟೆ ಥೀಮ್ ಹೊಂದಿದೆ. ಹಾಗೆಯೇ ಇತರ ಭಾರತೀಯ ರೂಪಾಯಿ ನೋಟುಗಳಂತೆ, ಈ 500 ರೂಪಾಯಿಯ ನೋಟುಗಳಲ್ಲಿ ನೋಟಿನ ಮೌಲ್ಯವನ್ನು ಭಾರತದ 17 ಭಾಷೆಗಳಾದ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದುವಿನಲ್ಲಿ ಬರೆಯಲಾಗಿದೆ.

ದೇಶದಲ್ಲಿ ಭ್ರಷ್ಟಾಚಾರವನ್ನು ತಡೆದು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ನಕಲಿ ನೋಟುಗಳ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8, 2016 ರಂದು ಈ ಹಿಂದಿದ್ದ 500 ರೂ. ನೋಟುಗಳನ್ನು ರದ್ದುಗೊಳಿಸಿದರು. ಎರಡು ದಿನಗಳ ನಂತರ ಹೊಸ 500ರ ನೋಟುಗಳನ್ನು ಪರಿಚಯಿಸಲಾಯಿತು. ಈ ನೋಟು ರದ್ದತಿಯ ಸಮಯದಲ್ಲೇ ಆರ್‌ಬಿಐ ಹೊಸ 2,000 ರೂ. ಕರೆನ್ಸಿ ನೋಟನ್ನು ಪರಿಚಯಿಸಿತು. ಆದರೆ, ಮೇ 2023 ರಲ್ಲಿ ಈ ನೋಟುಗಳನ್ನು ನಿಧಾನವಾಗಿ ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಯಿತು, ಆದರೆ ಅವುಗಳನ್ನು ಬ್ಯಾನ್ ಮಾಡಿಲ್ಲ, ಅವು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಉಳಿದಿವೆ.