ಡೆಹ್ರಾಡೂನ್‌ನಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ವಿಲೇಜ್ ಅಕೌಂಟೆಂಟ್ 500 ರೂಪಾಯಿಯ ನಾಲ್ಕು ನೋಟುಗಳನ್ನು ನುಂಗಿದ ಘಟನೆ ನಡೆದಿದೆ.
ಡೆಹ್ರಾಡೂನ್: ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ವಿಲೇಜ್ ಅಕೌಂಟೆಂಟ್ ಒಬ್ಬರು ತಾವು ಪಡೆದ ಲಂಚದ ಹಣದಲ್ಲಿ 500 ರೂಪಾಯಿ 4 ನೋಟುಗಳನ್ನು ನುಂಗಿದ ಘಟನೆ ನಡೆದಿದೆ. ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಈ ಘಟನೆ ನಡೆದಿದೆ. ವಿಲೇಜ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಗುಲಾಮ್ ಹೈದರ್ ಎಂಬುವವರೇ ಹೀಗೆ ನೋಟು ನುಂಗಿ ಸುದ್ದಿಯಾದವರು. ಇವರು ಡೆಹ್ರಾಡೂನ್‌ನ ಕಲ್ಸಿ ಪ್ರದೇಶದಲ್ಲಿ ಪಟ್ವಾರಿ ಅಂದರೆ ವಿಲೇಜ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಇವರು ಸೋಮವಾರ ಸ್ಥಳೀಯ ನಿವಾಸಿಯೊಬ್ಬರಿಗೆ ನಿವಾಸದ ಪ್ರಮಾಣ ಪತ್ರ ನೀಡುವುದಕ್ಕೆ ಅವರಿಂದ 2 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ. ಅದನ್ನು ಪಡೆಯುತ್ತಿದ್ದ ವೇಳೆ ರಾಜ್ಯ ವಿಚಕ್ಷಣ ದಳದ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕೈಯಲ್ಲಿದ್ದ 500 ರೂಪಾಯಿಯ 4 ನೋಟುಗಳನ್ನು ಗುಲಾಮ್ ಹೈದರ್ ಬಾಯಿಗೆ ಹಾಕಿ ನುಂಗಿ ಬಿಟ್ಟಿದ್ದಾರೆ ಈ ಮೂಲಕ ಸಾಕ್ಷ್ಯ ನಾಶ ಮಾಡಲು ಮುಂದಾದರು ಎಂದು ವರದಿಯಾಗಿದೆ.
ವ್ಯಕ್ತಿಯೊಬ್ಬರು ತನ್ನ ಇಬ್ಬರು ಸಂಬಂಧಿಕರಿಗೆ ನಿವಾಸ ಪ್ರಮಾಣ ಪತ್ರಗಳನ್ನು ನೀಡಲು ಪಟ್ವಾರಿ ಗುಲಾಮ್ ಹೈದರ್, 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು ಎಂದು ವಿಚಕ್ಷಣ ದಳದ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ವಿಲೇಜ್ ಅಕೌಂಟೆಂಟ್ ಗುಲಾಂ ಹೈದರ್ ಅವರನ್ನು ಬಲೆಗೆ ಕೆಡವಲು ಯೋಜನೆ ರೂಪಿಸಲಾಯ್ತು.
ಅದರಂತೆ ದೂರುದಾರರ ಸಂಬಂಧಿ, ಸೋಮವಾರ ಲಂಚದ ಹಣದೊಂದಿಗೆ ಕಲ್ಸಿಯ ತಹಸೀಲ್ದಾರ್ ಕಚೇರಿಗೆ ಹೋಗಿ ಹೈದರ್ ಅವರಿಗೆ ಲಂಚದ ಹಣ ನೀಡಿದ್ದಾರೆ. ಅದನ್ನು ಅವರು ಸ್ವೀಕರಿಸುವ ವೇಳೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ. ಆದರೆ ಸಾಕ್ಷ್ಯ ನಾಶ ಮಾಡುವ ಯತ್ನದಲ್ಲಿ ಹೈದರ್ ಆ ನೋಟುಗಳನ್ನು ನುಂಗಿದ್ದಾರೆ ಎಂದು ರಾಜ್ಯ ಜಾಗೃತ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಾದ ನಂತರ ಹೈದರ್ ಅವರನ್ನು ಬಂಧಿಸಲಾಗಿದೆ ಎಂದು ರಾಜ್ಯ ವಿಜಿಲೆನ್ಸ್ ಇಲಾಖೆಯ ನಿರ್ದೇಶಕ ವಿ ಮುರುಗೇಶನ್ ಹೇಳಿದ್ದಾರೆ.
