ನಿಯಮ ಮೀರಿದ ವಿಮಾ ಕಂಪನಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಐಆರ್ಡಿಎಐ ಮುಂದಾಗಿದೆ. ಏಳು ಕಂಪನಿಗಳಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದೆ.
ಹಣಕಾಸು ಸೇವೆಗಳ ಇಲಾಖೆ (DFS) ಹಸ್ತಕ್ಷೇಪದ ನಂತ್ರ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಿಮಾ ಕಂಪನಿಗಳ ವಿರುದ್ಧ ಶೋಕಾಸ್ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ವರದಿ ಪ್ರಕಾರ, ಆರೋಗ್ಯ ವಿಮಾ ಕಂಪನಿಗಳು ಆರೋಗ್ಯ ಪ್ರೀಮಿಯಂಗಳನ್ನು ಅತಿಯಾಗಿ ಹೆಚ್ಚಿಸಿದೆ ಎನ್ನಲಾಗಿದ್ದು, ಇದ್ರ ವಿರುದ್ಧ ಕ್ರಮ ತೆಗೆದುಕೊಳ್ಳಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಮಾಹಿತಿ ಪ್ರಕಾರ, ಏಳು ಕಂಪನಿಗಳು ಆರೋಗ್ಯ ವಿಮೆಯ ಮಾಸ್ಟರ್ ಸುತ್ತೋಲೆಯನ್ನು ಉಲ್ಲಂಘಿಸಿವೆ. ಅನೇಕ ಕಂಪನಿಗಳು ಬಳಕೆದಾರರಿಗೆ ಸರಿಯಾದ ಮಾಹಿತಿಯನ್ನು ನೀಡಲಿಲ್ಲ, ಅನಗತ್ಯವಾಗಿ ಕ್ಲೇಮ್ ಅನ್ನು ನಿಲ್ಲಿಸಿವೆ ಮತ್ತು ಅನೇಕ ಸಂದರ್ಭಗಳಲ್ಲಿ ಕ್ಲೇಮ್ಗಳ ಪಾವತಿಯನ್ನು ವಿಳಂಬಗೊಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಕಂಪನಿಗಳ ವಿರುದ್ಧ ಕ್ರಮ : ನಿವಾ ಬುಪಾ, ಸ್ಟಾರ್ ಹೆಲ್ತ್, ಕೇರ್ ಹೆಲ್ತ್, ಮಣಿಪಾಲ್ ಸಿಗ್ನಾ, ನ್ಯೂ ಇಂಡಿಯಾ ಅಶ್ಯೂರೆನ್ಸ್, ಟಾಟಾ AIG, ICICI ಲೊಂಬಾರ್ಡ್ ಮತ್ತು HDFC ಎರ್ಗೊ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಂಪನಿಗಳು ಆರೋಗ್ಯ ವಿಮಾ ಪಾಲಿಸಿಗಳ ನಿಯಮಗಳನ್ನು ಉಲ್ಲಂಘಿಸಿದೆ ಎನ್ನಲಾಗಿದೆ.
ಜೂನ್ 26 ರಂದು ಹೊರಬಂದ ವರದಿಯ ಪ್ರಕಾರ, IRDAI ಈ ಕಂಪನಿಗಳ ವಿರುದ್ಧ ತನಿಖೆ ಪ್ರಾರಂಭಿಸಿತ್ತು. ಕೆಲವು ಕಂಪನಿಗಳು ಹೊಸ ಮಾಸ್ಟರ್ ಸುತ್ತೋಲೆಯಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ ಎಂದು ತನಿಖೆಯಲ್ಲಿ ಕಂಡುಬಂದಿದೆ. ದೂರುಗಳಲ್ಲಿ ಆರೋಗ್ಯ ಕ್ಲೈಮ್ ಪ್ರಕ್ರಿಯೆಗಳಲ್ಲಿ ನಿರ್ಲಕ್ಷ್ಯ, ಅತಿಯಾದ ಮಾಹಿತಿಗಾಗಿ ಹುಡುಕಾಟ, ಕ್ಲೈಮ್ ಪರಿಶೀಲನಾ ಸಮಿತಿಯಲ್ಲಿ ಉತ್ಪನ್ನ ನಿರ್ವಹಣಾ ಸದಸ್ಯರ ಅನುಪಸ್ಥಿತಿ ಮತ್ತು ಪೋರ್ಟಬಿಲಿಟಿ ಡೇಟಾದಲ್ಲಿನ ವಿಳಂಬ ಸೇರಿವೆ.
ಈ ಬಗ್ಗೆ ಕಂಪನಿಗಳು ಹೇಳೋದೇನು? : ವರದಿಯ ಪ್ರಕಾರ, ವಿಮಾ ಕಂಪನಿಗಳು ತಮ್ಮ ವಿರುದ್ಧ ತೆಗೆದುಕೊಳ್ಳಲಾಗುತ್ತಿರುವ ಕ್ರಮದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿವೆ. ಐಸಿಐಸಿಐ ಲೊಂಬಾರ್ಡ್ , ನಾವು ಉನ್ನತ ಮಾನದಂಡಗಳನ್ನು ಅಳವಡಿಸಿಕೊಂಡಿದ್ದೇವೆ. ಇನ್ಸ್ಪೆಕ್ಷನ್ ಪ್ರಕ್ರಿಯೆಯ ಮೂಲಕ ಹೋಗಿದ್ದೇವೆ ಎಂದು ಉತ್ತರಿಸಿದೆ. ಐಆರ್ಡಿಎಐ ಪರಿಶೀಲಿಸಲು ಸಂಪೂರ್ಣ ಹಕ್ಕನ್ನು ಹೊಂದಿದೆ ಮತ್ತು ಈ ಪ್ರಕ್ರಿಯೆಯು ಸಹಯೋಗಿಯಾಗಿದೆ, ಪ್ರತಿಕೂಲವಲ್ಲ ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಹೇಳಿದೆ. ಪ್ರಸ್ತುತ, ಐಆರ್ಡಿಎಐ ಈ ಎಲ್ಲಾ ಕಂಪನಿಗಳಿಂದ ಸ್ಪಷ್ಟೀಕರಣವನ್ನು ಪಡೆಯಲಿದೆ.
ವಿಮೆ ಹೆಸರಿಲ್ಲಿ ದೊಡ್ಡ ಬಿಲ್ ಮಾಡ್ತಿರುವ ಆಸ್ಪತ್ರೆ ವಿರುದ್ಧ ಕ್ರಮ : ಭಾರತ ಸರ್ಕಾರ ಆರೋಗ್ಯ ವಿಮಾ ಕ್ಲೇಮ್ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚುತ್ತಿರುವ ವೆಚ್ಚವನ್ನು ನಿಯಂತ್ರಿಸಲು ಸರ್ಕಾರ ದೊಡ್ಡ ಹೆಜ್ಜೆ ಇಡಲು ಯೋಜಿಸುತ್ತಿದೆ. ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಆರೋಗ್ಯ ಹಕ್ಕು ವಿನಿಮಯ ಪೋರ್ಟಲ್ ಅನ್ನು ಹಣಕಾಸು ಸಚಿವಾಲಯ ಮತ್ತು ವಿಮಾ ನಿಯಂತ್ರಕ ಸಂಸ್ಥೆ, IRDAI ಅಡಿಯಲ್ಲಿ ತರಲು ಯೋಜಿಸಿದೆ. ಸದ್ಯ ಈ ಪೋರ್ಟಲ್ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಡಿಯಲ್ಲಿ ಬರುತ್ತದೆ.
ಅನೇಕ ಖಾಸಗಿ ಆಸ್ಪತ್ರೆಗಳು ವಿಮೆ ಹೊಂದಿರುವ ರೋಗಿಗಳಿಂದ ಅತಿಯಾದ ಹಣವನ್ನು ವಿಧಿಸುತ್ತಿರುವುದು ಕಂಡುಬಂದಿದೆ. ಲಕ್ಷ ಅಥವಾ ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಹೊಂದಿರುವ ರೋಗಿಗಳಿಗೆ ಹೆಚ್ಚಿನ ಹಣವನ್ನು ವಿಧಿಸಲಾಗುತ್ತಿದೆ. ಇದು ವಿಮಾ ಕಂಪನಿಗಳ ವೆಚ್ಚದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಈ ಕಾರಣದಿಂದಾಗಿ, ಕಂಪನಿಗಳು ಪ್ರೀಮಿಯಂ ದರಗಳನ್ನು ಹೆಚ್ಚಿಸುತ್ತಿವೆ. ಇದರಿಂದ ಅನೇಕ ಜನರು ಆರೋಗ್ಯ ವಿಮೆಯನ್ನು ತೆಗೆದುಕೊಳ್ಳು ಸಾಧ್ಯವಾಗ್ತಿಲ್ಲ.
