ನವದೆಹಲಿ(ಜು.24): ಭಾರತ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಪೈಕಿ ಇರಾನ್ 2ನೇ ದೇಶವಾಗಿ ಹೊರಹೊಮ್ಮಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾಡಿಕೊಳ್ಳಲಾದ ಪೆಟ್ರೋಲಿಯಂ ಆಮದಿನ ಕುರಿತ ಅಂಕಿ ಅಂಶಗಳ ಪ್ರಕಾರ, ಸೌದಿ ಅರೇಬಿಯಾಗಿಂತಲೂ ಇರಾನ್‌ನಿಂದ ಭಾರತ ಹೆಚ್ಚಿನ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. 

ಈ ಮೂಲಕ ಸೌದಿ ಅರೇಬಿಯಾವನ್ನು ಹಿಂದಿಕ್ಕಿದ ಇರಾನ್‌, ಭಾರತದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ. 2010-11ರ ವರೆಗೂ ಇರಾನ್‌ ಭಾರತದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿತ್ತು. ಆದರೆ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಮೇಲೆ ಅಮೆರಿಕ ನಿರ್ಬಂಧ ಹೇರಿದ ನಂತರದ ದಿನಗಳಲ್ಲಿ ಏಳನೇ ಸ್ಥಾನಕ್ಕೆ ಇರಾನ್‌ ಕುಸಿದಿತ್ತು. 

ಇದೀಗ ಏಳು ವರ್ಷಗಳ ಬಳಿಕ ದೇಶದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರನಾಗಿ ಇರಾನ್‌ ಹೊರ ಹೊಮ್ಮಿದೆ. 2015ರಲ್ಲಿ ಇರಾನ್‌ ಮೇಲಿನ ಅಮೆರಿಕನ್‌ ನಿರ್ಬಂಧ ತೆರವುಗೊಳಿಸಿದ ಬಳಿಕ ತೈಲದ ಆಮದನ್ನು ಕ್ರಮೇಣ ಹೆಚ್ಚಿಸಲಾಗಿತ್ತು. ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. 

ಈ ವರದಿ ಪ್ರಕಾರ 2018ರ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಮಾಡಿಕೊಳ್ಳಲಾದ ತೈಲ ಆಮದಿನ ಅಂಕಿಅಂಶಗಳ ಪ್ರಕಾರ, ಇರಾಕ್‌ ನಿಂದ 7.2 ದಶಲಕ್ಷ ಮೆಟ್ರಿಕ್ ಟನ್‌, ಇರಾನ್‌ನಿಂದ 5.6 ದಶಲಕ್ಷ ಮೆಟ್ರಿಕ್‌ ಟನ್‌ ಹಾಗು ಸೌದಿ ಅರೇಬಿಯಾದಿಂದ 5.2 ದಶಲಕ್ಷ ಮೆಟ್ರಿಕ್‌ ಟನ್‌ ನಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ.