ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ಪ್ರೀಮಿಯಂನಲ್ಲಿ ವಾರ್ಷಿಕ ಗರಿಷ್ಠ 10% ಏರಿಕೆಗೆ IRDAI ಮಿತಿ ವಿಧಿಸಿದೆ. ಈ ಕ್ರಮವು ಹಿರಿಯ ನಾಗರಿಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ವಿಮಾದಾರರು ಈ ಬದಲಾವಣೆಗಳನ್ನು ಜಾರಿಗೊಳಿಸುವುದನ್ನು IRDAI ಮೇಲ್ವಿಚಾರಣೆ ಮಾಡುತ್ತದೆ.
ಬೆಂಗಳೂರು (ಜ.30): ದೇಶದಲ್ಲಿನ ಹಿರಿಯ ಜೀವಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ದೊಡ್ಡ ರಿಲೀಫ್ ನೀಡಿದೆ. ತಕ್ಷಣದಿಂದ ಜಾರಿಯಾಗುವಂತೆ ದೇಶದ ಎಲ್ಲಾ ಹೆಲ್ತ್ ಇನ್ಶುರೆನ್ಸ್ ಕಂಪನಿಗಳು ಹಿರಿಯ ವ್ಯಕ್ತಿಗಳಿಗೆ ನೀಡುವ ಹೆಲ್ತ್ ಇನ್ಶುರೆನ್ಸ್‌ನಲ್ಲಿ ವಾರ್ಷಿಕವಾಗಿ ಗರಿಷ್ಠ ಶೇ. 10ರಷ್ಟು ಮಾತ್ರವೇ ಪ್ರೀಮಿಯಂ ಏರಿಕೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ಹಣವನ್ನು ಏರಿಕೆ ಮಾಡುವಂತಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚುತ್ತಿರುವ ಆರೋಗ್ಯ ವಿಮಾ ಕಂತುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ನಾಗರೀಕರು ತಮ್ಮ ವಯಸ್ಸು ಮತ್ತು ಆರೋಗ್ಯ ಅಗತ್ಯಗಳ ನಡುವೆ ಹೆಲ್ತ್ ಇನ್ಶುರೆನ್ಸ್ ಪ್ರೀಮಿಯಂಗಳಲ್ಲಿ ವರ್ಷದಿಂದ ವರ್ಷಕ್ಕೆ ತೀವ್ರ ಏರಿಕೆ ಸಮಸ್ಯೆ ಎದುರಿಸುತ್ತಿದ್ದರು. ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನ್ಲಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಆರ್‌ಡಿಎಐ ತಿಳಿಸಿದೆ.
ಸೀಮಿತ ಆದಾಯದ ಮೂಲಗಳನ್ನು ಹೊಂದಿರುವ ಹಿರಿಯ ನಾಗರಿಕರಿಗೆ ವಿಶೇಷವಾಗಿ ಸವಾಲಾಗಿರುವ ತೀವ್ರ ಪ್ರೀಮಿಯಂ ಹೆಚ್ಚಳದ ಕುರಿತಾದ ಕಳವಳಗಳನ್ನು ಈ ಆದೇಶವವು ಅನುಸರಿಸಿದೆ. IRDAI ನಿರ್ದೇಶನದ ಪ್ರಕಾರ, ವಿಮಾದಾರರು ಶೇಕಡಾ 10 ರಷ್ಟು ಮಿತಿಯನ್ನು ಹೆಚ್ಚಿಸಲು ಪ್ರಸ್ತಾಪಿಸಿದರೆ ಅಥವಾ ಹಿರಿಯ ನಾಗರಿಕರಿಗೆ ಯಾವುದೇ ಆರೋಗ್ಯ ವಿಮಾ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳಲು ಬಯಸಿದರೆ ಪ್ರಾಧಿಕಾರದೊಂದಿಗೆ ಈ ಬಗ್ಗೆ ಸಮಾಲೋಚನೆ ಮಾಡಬೇಕು ಎಂದು ತಿಳಿಸಿದೆ. ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ವಿಮಾ ರಕ್ಷಣೆ ಇಲ್ಲದೆ ಹೋಗಬಹುದಾದ ಹಠಾತ್ ಬದಲಾವಣೆಗಳನ್ನು ತಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.
2023-24ನೇ ಆರ್ಥಿಕ ವರ್ಷದಲ್ಲಿ 15,100 ಕೋಟಿ ರು. ವಿಮಾ ಕ್ಲೇಂ ತಿರಸ್ಕಾರ!
ಇದರೊಂದಿಗೆ, ವಿಮಾದಾರರು ಹಿರಿಯ ನಾಗರಿಕರ ಪ್ರಯೋಜನಕ್ಕಾಗಿ ತೆಗೆದುಕೊಳ್ಳುವ ಕ್ರಮಗಳನ್ನು ಪ್ರಚಾರ ಮಾಡಬೇಕಾಗುತ್ತದೆ, ಲಭ್ಯವಿರುವ ರಕ್ಷಣೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಯೋಜನೆಯಡಿಯಲ್ಲಿರುವ ವಿಧಾನದಂತೆ, ಆಸ್ಪತ್ರೆಗಳ ಪಟ್ಟಿಯನ್ನು ಪ್ರಮಾಣೀಕರಿಸುವುದು ಮತ್ತು ವೆಚ್ಚಗಳನ್ನು ನಿಯಂತ್ರಿಸಲು ಪ್ಯಾಕೇಜ್ ದರಗಳನ್ನು ಮಾತುಕತೆ ನಡೆಸುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಅದು ಹೇಳಿದೆ.
65 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಆರೋಗ್ಯ ವಿಮೆ, ಹೊಸ ನಿಯಮ ಜಾರಿ!
ಹಿರಿಯ ನಾಗರಿಕರ ಆರೋಗ್ಯ ವಿಮಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಈ ಹೊಸ ಮಾರ್ಗಸೂಚಿಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸುವ ಮೂಲಕ, ಐಆರ್‌ಡಿಎಐ ವಿಮಾ ಮಾರುಕಟ್ಟೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಿದೆ.
