ಭಾರತದಿಂದ ರಫ್ತಾಗುವ ಉಕ್ಕಿನ ಮೇಲೆ ಶೇ.25 ಮತ್ತು ಅಲ್ಯೂಮಿನಿಯಂ ಮೇಲೆ ಶೇ.10 ಸುಂಕ ವಿಧಿಸಿದ್ದ ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಭಾರತವೂ ಅಮೆರಿಕದ ಕೆಲವು ಸರಕುಗಳ ಮೇಲೆ ಸುಂಕ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.

ನವದೆಹಲಿ: ಭಾರತದಿಂದ ರಫ್ತಾಗುವ ಉಕ್ಕಿನ ಮೇಲೆ ಶೇ.25 ಮತ್ತು ಅಲ್ಯೂಮಿನಿಯಂ ಮೇಲೆ ಶೇ.10 ಸುಂಕ ವಿಧಿಸಿದ್ದ ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಭಾರತವೂ ಅಮೆರಿಕದ ಕೆಲವು ಸರಕುಗಳ ಮೇಲೆ ಸುಂಕ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಅಲ್ಲದೆ ಅಮೆರಿಕದ ಸುಂಕ ನೀತಿಯು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದಾಖಲೆ ಸಲ್ಲಿಸಿದೆ. ಡಬ್ಲ್ಯುಟಿಒಗೆ ಸಲ್ಲಿಸಿದ ದಾಖಲೆಯಲ್ಲಿ, ಟ್ರಂಪ್ ಆಡಳಿತವು ಇತರ ಭಾರತೀಯ ಸರಕುಗಳ ಮೇಲೆ ಶೇ.26 ಸುಂಕ ವಿಧಿಸುವ ಬೆದರಿಕೆ ಹಾಕಿದೆ. ಇದು ಭಾರತದ 64000 ಕೋಟಿ ರು. ಮೌಲ್ಯದ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ.

ಚಿಲ್ಲರೆ ಹಣದುಬ್ಬರ 6 ವರ್ಷಗಳಲ್ಲೇ ಕನಿಷ್ಠ 
ನವದೆಹಲಿ: ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಹಣದುಬ್ಬರವು ಶೇ.3.16ರಷ್ಟು ಇಳಿಕೆ ಕಂಡಿದೆ. ಇದು 6. ವರ್ಷಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಕಳೆದ ಮಾರ್ಚ್‌ನಲ್ಲಿ ಶೇ.3.34 ದಾಖಲಾಗಿತ್ತು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಶೇ.4.83ರಷ್ಟಿತ್ತು. ಆದರೆ ಈ ವರ್ಷದ ಏಪ್ರಿಲ್‌ನಲ್ಲಿ 2019ರ ಬಳಿಕದ ಅತ್ಯಂತ ಕನಿಷ್ಟಕ್ಕೆ ಇಳಿದಿದೆ. ಆಹಾರ ಹಣದುಬ್ಬರವೂ ಕುಸಿತ ಕಂಡಿದ್ದು, ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಆಹಾರ ಹಣದುಬ್ಬರ 91 ಬೇಸಿಸ್ ಪಾಯಿಂಟ್ ಕುಸಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂಕಿ ಅಂಶ ಹೇಳಿದೆ.

ಅಮೆರಿಕದ ಜತೆ ಚೀನಾ ಡೀಲ್: ಬೋಯಿಂಗ್ ನಿಷೇಧ ರದ್ದು ಸಂಭವ 
ಬೀಜಿಂಗ್: ಅಮೆರಿಕದೊಂದಿಗೆ ಸುಂಕ ಸಮರದಿಂದಾಗಿ ಬೋಯಿಂಗ್ ವಿಮಾನಗಳ ಖರೀದಿಯಿಂದ ಹಿಂದೆ ಸರಿದಿದ್ದ ಚೀನಾ, ಎರಡೂ ದೇಶಗಳ ನಡುವಿನ ತೆರಿಗೆ ಒಪ್ಪಂದದ ಮಾತುಕತೆ ಫಲಪ್ರದವಾದ ಬೆನ್ನಲ್ಲೇ ತನ್ನ ದೇಶದಲ್ಲಿ ಬೋಯಿಂಗ್ ವಿಮಾನಕ್ಕಿದ್ದ ನಿಷೇಧವನ್ನು ಹಿಂಪಡೆಯುವ ಸಾಧ್ಯತೆ ಇದೆ. ಚೀನಾ ಸರ್ಕಾರವು ಅಮೆರಿಕದ ಜೊತೆಗಿನ ಸುಂಕ ಒಪ್ಪಂದದ ನಂತರ ಬೋಯಿಂಗ್ ಸಂಸ್ಥೆಯಿಂದ ವಿಮಾನದ ಬಿಡಿಭಾಗಗಳನ್ನು ತೆಗೆದುಕೊಳ್ಳುವುದರ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

10 ವರ್ಷದ ಬಳಿಕ ಗೂಗಲ್ ಲೋಗೋಗೆ ಹೊಸ ಲುಕ್ 
ಕ್ಯಾಲಿಫೋರ್ನಿಯಾ: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಗೂಗಲ್ ದಶಕದ ಬಳಿಕ ತನ್ನ ಲೋಗೋ 'ಜಿ'ಗೆ ಹೊಸ ರೂಪ ನೀಡಿದೆ. ಹೊಸ ಲೋಗೋದಲ್ಲಿ ಗೂಗಲ್ ತನ್ನ ಬ್ರಾಂಡ್‌ನ ಗುರುತಾಗಿರುವ ನೀಲಿ, ಕೆಂಪು, ಹಸಿರು ಮತ್ತು ಹಳದಿ ಎಂಬ 4 ಬಣ್ಣಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಆದರೆ ವಿನ್ಯಾಸದಲ್ಲಿ ಕೊಂಚ ವ್ಯತ್ಯಾಸ ಮಾಡಿದ್ದು, ಬಣ್ಣಗಳನ್ನು ಹೆಚ್ಚು ತೀಕ್ಷ್ಯ ಹಾಗೂ ಮೆರಗು ಬರುವಂತೆ ಮಾಡಿದೆ. ಮೊದಲು ಬಣ್ಣಗಳನ್ನು ಬ್ಲಾಕ್ ಶೈಲಿಯಲ್ಲಿ (ಚೌಕಾಕಾರ) ಕಾಣಲಾಗುತ್ತಿತ್ತು. ಈಗ ಅದೇ ಬಣ್ಣಗಳನ್ನು ಗ್ರೇಡಿಯಂಟ್‌ನಲ್ಲಿ ಅಂದರೆ ಗಾಢ ಛಾಯೆಯ ರೀತಿಯಲ್ಲಿ ಪರಿವರ್ತಿಸಲಾಗಿದೆ.

ಕಾರ್ಗಿಲ್ ರೀತಿ ಪಹಲ್ಲಾಂ ಪರಿಶೀಲನಾ ಸಮಿತಿ ರಚಿಸುವರೇ: ಕಾಂಗ್ರೆಸ್ ಪ್ರಶ್ನೆ
ನವದೆಹಲಿ: ಕಾರ್ಗಿಲ್ ಯುದ್ಧ ಮುಗಿದ ತಕ್ಷಣವೇ ಅಂದಿನ ವಾಜಪೇಯಿ ಸರ್ಕಾರ ದಾಳಿಗೆ ಕಾರಣವಾದ ಅಂಶಗಳ ಬಗ್ಗೆ ಪರಿಶೀಲಿಸಲು ಪರಿಶೀಲನಾ ಸಮಿತಿ ರಚಿಸಿದಂತೆ ಈಗ ಪಹಲ್ಲಾಂ ದಾಳಿ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಪರಿಶೀಲನಾ ಸಮಿತಿ ರಚಿಸುವುದೇ ಎಂದು ಕಾಂಗ್ರೆಸ್ . ಮಂಗಳವಾರ ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಜೈರಾಮ್ ರಮೇಶ್, 'ಕಾರ್ಗಿಲ್ ಯುದ್ಧ ಅಂತ್ಯವಾದ 3 ದಿನಕ್ಕೇ ಅಂದಿನ ಪ್ರಧಾನಿ ವಾಜಪೇಯಿ ಕಾರ್ಗಿಲ್ ಪರಿಶೀಲನಾ ಸಮಿತಿ ರಚಿಸಿದ್ದರು. ಈಗ ಮೋದಿ ಅದೇ ರೀತಿ ಮಾಡುವರೇ ಎಂದು ಪ್ರಶ್ನಿಸಿದ್ದಾರೆ.

ಸಾಮ್ಯ ಎಪಿಕ್ ಸಂಖ್ಯೆ ಇತ್ಯರ್ಥ: ಆಯೋಗ 
ನವದೆಹಲಿ: ಸಾಮ್ಯ ಮತಚೀಟಿ ಸಂಖ್ಯೆ ಸಮಸ್ಯೆ ಪರಿಹರಿಸಲಾಗಿದ್ದು, ಅಂತಹವ ರಿಗೆ ಹೊಸ ಸಂಖ್ಯೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 'ಕ್ಷೇತ್ರ ಮಟ್ಟದ ಪರಿಶೀಲನೆ ವೇಳೆ, 4 ಮತಗಟ್ಟೆಗಳ ಪೈಕಿ ಒಂದರಲ್ಲಿ ಸಾಮ್ಯ ಸಂಖ್ಯೆ ಇರುವ ಚೀಟಿಗಳು ಕಂಡುಬಂದಿವೆ. ಅವರೆಲ್ಲ ವಿವಿಧ ವಿಧಾನಸಭಾ ಕ್ಷೇತ್ರಗಳು ಮತ್ತು ಮತಗಟ್ಟೆಗಳ ಮತದಾರರು ಎಂದು ತಿಳಿದು ಬಂದಿದೆ. ಅಂತಹವರು ಬೇರೆ ಮತಗಟ್ಟೆಗಳಲ್ಲಿ ಮತ ಚಲಾಯಿಸುವುದು ಸಾಧ್ಯವಿಲ್ಲ. ಹೀಗಾಗಿ, ಈ ಸಮಸ್ಯೆಯು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿರಲಾರದು' ಎಂದು ಆಯೋಗ ಹೇಳಿದೆ. ಸಾಮ್ಯ ಮತ ಚೀಟಿಗಳ ಬಗ್ಗೆ ಟಿಎಂಸಿ ಆಯೋಗಕ್ಕೆ ದೂರು ಸಲ್ಲಿಸಿತ್ತು.