ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಭಾರತೀಯ ವಿದ್ಯಾರ್ಥಿಗೆ ಅಮೆರಿಕನ್ ಏರ್‌ಲೈನ್ಸ್ ನಿಷೇಧ
ಸಹ ಪ್ರಯಾಣಿಕರ ಸುರಕ್ಷತೆಗೆ ತೊಂದರೆಯಾದ ನಂತರ, ಅಂತಿಮವಾಗಿ 15G ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಲಾಗಿದೆ ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ.
ನವದೆಹಲಿ (ಮಾರ್ಚ್ 5, 2023): ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಗ್ಗೆ ಮತ್ತೊಂದು ಆರೋಪ ಕೇಳಿಬಂದಿದೆ. ಅದೂ, ಭಾರತೀಯರೇ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನ್ಯೂಯಾರ್ಕ್‌ನಿಂದ ನವದೆಹಲಿಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಭಾರತೀಯ ಪ್ರಯಾಣಿಕನೊಬ್ಬ ಶನಿವಾರ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ಈ ಆರೋಪಿಯನ್ನು 21 ವರ್ಷದ ಆರ್ಯ ವೋಹ್ರಾ ಎಂದು ಗುರುತಿಸಲಾಗಿದೆ. ಇವನು ಯುಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ವಿಮಾನಯಾನ ಸಂಸ್ಥೆಯು ಇವನನ್ನು ತಮ್ಮ ಕಂಪನಿಯ ವಿಮಾನ ಹತ್ತದಂತೆ ನಿಷೇಧಿಸಿದೆ.
ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (John F Kennedy International Airport) ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ( Indira Gandhi International Airport) AA292 ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನ ಕಾರಣದಿಂದಾಗಿ ಸ್ಥಳೀಯ ಕಾನೂನು ಜಾರಿಕಾರರು ಮಾಹಿತಿ ಪಡೆದಿದ್ದಾರೆ. ಶನಿವಾರ ರಾತ್ರಿ 9:50ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಅಮೆರಿಕನ್ ಏರ್‌ಲೈನ್ಸ್ (American Airlines) ಮಾಹಿತಿ ನೀಡಿದೆ.
ಇದನ್ನು ಓದಿ: ನಾವು ಸ್ಪಷ್ಟವಾಗಿ ಕೆಲವು ಪಾಠ ಕಲಿಯಬೇಕು: ಸಿಬ್ಬಂದಿಗೆ ಏರ್ ಇಂಡಿಯಾ ಸಿಇಒ ಕ್ಲಾಸ್..!
ಅಲ್ಲದೆ, ಭವಿಷ್ಯದಲ್ಲಿ ಆ ಪ್ರಯಾಣಿಕನನ್ನು (Passenger) ವಿಮಾನದಲ್ಲಿ (Flight) ಅನುಮತಿಸುವುದಿಲ್ಲ ಎಂದೂ ವಿಮಾನಯಾನ ಸಂಸ್ಥೆ ಹೇಳಿದೆ. "ವಿಮಾನ ಆಗಮನದ ನಂತರ, ಪ್ರಯಾಣಿಕನು ಹೆಚ್ಚು ಅಮಲೇರಿದ ಮತ್ತು ವಿಮಾನದಲ್ಲಿ ಸಿಬ್ಬಂದಿ ಸೂಚನೆಗಳಿಗೆ ಬದ್ಧವಾಗಿರಲಿಲ್ಲ ಎಂದು ಪರ್ಸರ್ ಮಾಹಿತಿ ನೀಡಿದರು. ಅವನು ಆಪರೇಟಿಂಗ್ ಸಿಬ್ಬಂದಿಯೊಂದಿಗೆ ಪದೇ ಪದೇ ವಾದಿಸುತ್ತಿದ್ದನು, ಕುಳಿತುಕೊಳ್ಳಲು ಸಿದ್ಧನಿರಲಿಲ್ಲ ಮತ್ತು ಸಿಬ್ಬಂದಿ ಹಾಗೂ ವಿಮಾನದ ಸುರಕ್ಷತೆಗೆ ನಿರಂತರವಾಗಿ ಅಪಾಯವನ್ನುಂಟುಮಾಡಿದ್ದ. ಸಹ ಪ್ರಯಾಣಿಕರ ಸುರಕ್ಷತೆಗೆ ತೊಂದರೆಯಾದ ನಂತರ, ಅಂತಿಮವಾಗಿ 15G ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಲಾಗಿದೆ" ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ವಿಮಾನದಲ್ಲಿದ್ದ ಅಶಿಸ್ತಿನ ಪ್ರಯಾಣಿಕನ ಬಗ್ಗೆ ಅಮೆರಿಕನ್ ಏರ್‌ಲೈನ್ಸ್ ಪೈಲಟ್ ಲ್ಯಾಂಡಿಂಗ್‌ಗೂ ಮೊದಲು ದೆಹಲಿ ಎಟಿಸಿಯನ್ನು ಸಂಪರ್ಕಿಸಿ ಭದ್ರತೆ ಕೋರಿದರು. ಅಲ್ಲದೆ, ಅಗತ್ಯ ಕ್ರಮಕ್ಕಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ತಿಳಿಸಲಾಗಿದೆ. "ವಿಮಾನದ ಲ್ಯಾಂಡಿಂಗ್ ನಂತರ, ಸಿಐಎಸ್ಎಫ್ ಸಿಬ್ಬಂದಿ ಅವನನ್ನು ವಿಮಾನದಿಂದ ಹೊರಗೆ ಕರೆದೊಯ್ದರು ಮತ್ತು ಪ್ರಯಾಣಿಕ ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ" ಎಂದೂ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: Air India ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್: ಜೈಲುಪಾಲಾದ ಶಂಕರ್ ಮಿಶ್ರಾ
ವಿಮಾನ ನಿಲ್ದಾಣ ಪೊಲೀಸರು ಪ್ರಯಾಣಿಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. "ಅಮೆರಿಕನ್ ಏರ್‌ಲೈನ್ಸ್‌ನಿಂದ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆಯ ಬಗ್ಗೆ ನಾವು ದೂರು ಸ್ವೀಕರಿಸಿದ್ದೇವೆ, ಯುಎಸ್‌ಎ ವಿದ್ಯಾರ್ಥಿ ಮತ್ತು ದೆಹಲಿಯ ಡಿಫೆನ್ಸ್ ಕಾಲೋನಿ ನಿವಾಸಿ ಆರ್ಯ ವೋಹ್ರಾ ಎಂಬ ವ್ಯಕ್ತಿಯ ವಿರುದ್ಧ ನಾವು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ" ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ವಾಯುಯಾನ ನಿಯಂತ್ರಕವು ವಿಮಾನಯಾನ ಕಂಪನಿಯಿಂದ ವಿವರವಾದ ವರದಿಯನ್ನು ಕೇಳಿದೆ. ಸಂಬಂಧಿತ ವಿಮಾನಯಾನ ಸಂಸ್ಥೆಯಿಂದ ನಾವು ವರದಿಯನ್ನು ಸ್ವೀಕರಿಸಿದ್ದೇವೆ. ಅವರು ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಮತ್ತು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಜನರಲ್ (DGCA) ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!
ಕಳೆದ ನವೆಂಬರ್‌ನಲ್ಲಿ, ಶಂಕರ್ ಮಿಶ್ರಾ ಎಂಬ ಉದ್ಯಮಿ ಏರ್ ಇಂಡಿಯಾ ನ್ಯೂಯಾರ್ಕ್-ನವದೆಹಲಿ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮದ್ಯದ ಅಮಲಿನಲ್ಲಿ 70 ವರ್ಷದ ಮಹಿಳೆ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಘಟನೆಯು ಏರ್‌ಲೈನ್‌ನಿಂದ ಅಧಿಕಾರಿಗಳಿಗೆ ವರದಿಯಾಗದ ಕಾರಣ ಭಾರಿ ಕೋಲಾಹಲ ಉಂಟುಮಾಡಿತ್ತು. ನಂತರ ದೆಹಲಿ ಪೊಲೀಸರು ಶಂಕರ್ ಮಿಶ್ರಾ ಅವರನ್ನು ಬಂಧಿಸಿದ್ದರು.