ಷೇರು ವಹಿವಾಟು, ಷೇರುಗಳ ಮೇಲೆ ಹೂಡಿಕೆ ಮಾಡಿರುವ ಮಂದಿ ಇಲ್ಲಿ ಗಮನಿಸಿ. ಸೋಮವಾರದಿಂದ ಷೇರು ವಹಿವಾಟಿನ ಸಮಯ ಬದಲಾಗುತ್ತಿದೆ. ಯಾವೆಲ್ಲಾ ಸಮಯದಲ್ಲಿ ಷೇರು ವಹಿವಾಟು ನಡೆಸಲು ಸಾಧ್ಯ, ಭಾರತದ ಷೇರು ಮಾರುಕಟ್ಟೆ ಹೊಸ ಸಮಯದ ವಿವರ ಇಲ್ಲಿದೆ.
ಮುಂಬೈ (ಆ.02) ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ಹಲವರು ತಮ್ಮ ಕೈಲಾದಷ್ಟು ಹೂಡಿಕೆ ಮಾಡಿ ಟ್ರೇಡಿಂಗ್ ಮಾಡುತ್ತಿದ್ದಾರೆ. ಷೇರು ವಹಿವಾಟು ನಡೆಸುವ ಹೂಡಿಕೆದಾರರು ಹಾಗೂ ಟ್ರೇಡರ್ಸ್ ಸೋಮವಾರದಿಂದ (ಆಗಸ್ಟ್ 3) ಭಾರತದ ಷೇರು ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಮಂಡಳಿ (SEBI) ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಹೊಸ ನೀತಿ ಪ್ರಕಾರ ಭಾರತದ ಷೇರು ಮಾರುಕಟ್ಟೆ ಟ್ರೇಡಿಂಗ್ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗುತ್ತಿದೆ. ಹೊಸ ನಿಯಮಾವಳಿ ಸೋಮವಾರದಿಂದ ಜಾರಿಗೆ ಬರುತ್ತಿದೆ.
ಷೇರು ಮಾರುಕಟ್ಟೆ ಟ್ರೇಡಿಂಗ್ ಸಮಯ ಬದಲಾವಣೆ
ಭಾರತೀಯ ಸ್ಟಾಕ್ ಮಾರ್ಕೆಟ್‌ನ ಕ್ಲೋಸಿಂಗ್ ಟೈಮಿಂಗ್ಸ್ ಹಾಗೂ ಕ್ಲೋಸಿಂಗ್ ಬೆಲೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. NSE ಹಾಗೂ BSEನ ಎಲ್ಲಾ ವಹಿವಾಟುಗಳು ಸದ್ಯ 3.30ಕ್ಕೆ ಕ್ಲೋಸ್ ಆಗಲಿದೆ. ದಿನದ ಎಲ್ಲಾ ವಹಿವಾಟುಗಳು ಮಧ್ಯಾಹ್ನದ ಬಳಿಕ 3.30ರ ವೇಳೆಗೆ ಮುಕ್ತಾಯಗೊಳ್ಳುತ್ತಿತ್ತು. ಆದರೆ ಹೊಸ ಬದಲಾವಣೆ ಪ್ರಕಾರ ಪ್ರತ್ಯೇಕ ಕ್ಲೋಸಿಂಗ್ ಸಮಯ ನಿಗದಿಪಡಿಸಲಾಗಿದೆ.
ಯಾವೆಲ್ಲಾ ವಿಭಾಗದ ಸಮಯ ಬದಲಾವಣೆ
ಸಾಮಾನ್ಯ ಕ್ಯಾಶ್ ಮಾರ್ಕೆಟ್ ಶೇರುಗಳ ವಹಿವಾಟು ಮುಂಚಿನಂತೆಯೇ ಮಧ್ಯಾಹ್ನ 3:30 ರವರೆಗೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಎಫ್‌ಆಂಡ್‌ಒ ಹೊಂದಿರುವ ಶೇರುಗಳ ನಿರಂತರ ವಹಿವಾಟು ಮಧ್ಯಾಹ್ನ 3:15 ಕ್ಕೆ ಅಂತ್ಯಗೊಳ್ಳಲಿದೆ. ನಂತರ 3:15 ರಿಂದ 3:35 ರವರೆಗೆ ಕ್ಲೋಸಿಂಗ್ ಆಕ್ಷನ್ ಸೆಷನ್ (CAS) ನಡೆಯಲಿದೆ. ಇಂಡೆಕ್ಸ್ ಮತ್ತು ಸ್ಟಾಕ್ ಎಫ್‌ಆಂಡ್‌ಒ (Equity Derivatives Segment) ಫ್ಯೂಚರ್ಸ್ ಆಂಡ್ ಆಪ್ಷನ್ಸ್ (F&O) ವಿಭಾಗದ ವಹಿವಾಟಿನ ಸಮಯವನ್ನು 10 ನಿಮಿಷ ಹೆಚ್ಚಿಸಲಾಗಿದೆ. ಈ ವಹಿವಾಟು ಮಧ್ಯಾಹ್ನ 3:40 ರವರೆಗೆ ಮುಂದುವರಿಯಲಿದೆ. ಪೋಸ್ಟ್-ಕ್ಲೋಸ್ ಸೆಷನ್ (Post-Close Session) ಮಧ್ಯಾಹ್ನ 3:50 ರಿಂದ 4:00 ರವರೆಗೆ ಇರಲಿದೆ.
- ಮಧ್ಯಾಹ್ನ 3:15 – 3:20ಸಾಮಾನ್ಯ ವಹಿವಾಟಿನಿಂದ ಸಿಎಎಸ್ (CAS) ಸೆಷನ್‌ಗೆ ಬದಲಾವಣೆ ಮತ್ತು ಉಲ್ಲೇಖಿತ ಬೆಲೆ (Reference Price) ಲೆಕ್ಕಾಚಾರ.
- ಮಧ್ಯಾಹ್ನ 3:20 – 3:25ಸಿಎಎಸ್ ಆರ್ಡರ್ ಎಂಟ್ರಿ-1: ಮಾರ್ಕೆಟ್ ಮತ್ತು ಲಿಮಿಟ್ ಆರ್ಡರ್‌ಗಳನ್ನು ಸಲ್ಲಿಸಲು ಅವಕಾಶ.
- ಮಧ್ಯಾಹ್ನ 3:25 – 3:30ಸಿಎಎಸ್ ಆರ್ಡರ್ ಎಂಟ್ರಿ-2: ಲಿಮಿಟ್ ಆರ್ಡರ್‌ಗಳನ್ನು ಮಾತ್ರ ಸಲ್ಲಿಸಬಹುದು; ಮಾರ್ಕೆಟ್ ಆರ್ಡರ್‌ಗಳನ್ನು ಬದಲಾಯಿಸಲು ಅಥವಾ ರದ್ದುಗೊಳಿಸಲು ಅವಕಾಶವಿರುವುದಿಲ್ಲ.
- ಮಧ್ಯಾಹ್ನ 3:28 – 3:30ಆರ್ಡರ್ ಸ್ವೀಕಾರದ ಯಾದೃಚ್ಛಿಕ (Random) ಮುಕ್ತಾಯ.
- ಮಧ್ಯಾಹ್ನ 3:30 – 3:35ಆರ್ಡರ್‌ಗಳ ಮ್ಯಾಚಿಂಗ್ ಮತ್ತು ಹರಾಜಿನ ಮೂಲಕ ಅಂತಿಮ ಕ್ಲೋಸಿಂಗ್ ಪ್ರೈಸ್ ನಿರ್ಧಾರ
ಈ ಹಿಂದೆ ದಿನದ ಕೊನೆಯ 30 ನಿಮಿಷಗಳಲ್ಲಿ ನಡೆದ ವಹಿವಾಟುಗಳ 'ವಾಲ್ಯೂಮ್ ವೈಟೆಡ್ ಆವರೇಜ್ ಪ್ರೈಸ್' (VWAP) ಆಧಾರದ ಮೇಲೆ ಶೇರ್‌ನ ಅಂತಿಮ ಬೆಲೆಯನ್ನು ನಿಗದಿಪಡಿಸಲಾಗುತ್ತಿತ್ತು. ಆದರೆ ಸಿಎಎಸ್ (CAS) ಜಾರಿಯ ನಂತರ, ಖರೀದಿದಾರರು ಮತ್ತು ಮಾರಾಟಗಾರರ ಎಲ್ಲಾ ಆರ್ಡರ್‌ಗಳನ್ನು ಒಂದೇ ಪೂಲ್‌ನಲ್ಲಿ ಸಂಗ್ರಹಿಸಿ, ಹರಾಜು ಪ್ರಕ್ರಿಯೆಯ (Auction) ಮೂಲಕ ಸಮತೋಲಿತ ಅಂತಿಮ ಕ್ಲೋಸಿಂಗ್ ಬೆಲೆಯನ್ನು ಕಂಡುಹಿಡಿಯಲಾಗುತ್ತದೆ. ಇದಲ್ಲದೆ, ಡೆರಿವೇಟಿವ್ಸ್ ವಿಭಾಗಕ್ಕೆ ವಿಡಬ್ಲ್ಯೂಎಪಿ (VWAP) ಲೆಕ್ಕಾಚಾರ ಮಾಡುವ ಸಮಯದ ಕಿಟಕಿಯನ್ನು ಮಧ್ಯಾಹ್ನ 3:10 ರಿಂದ 3:40 ರವರೆಗೆ ಪರಿಷ್ಕರಿಸಲಾಗಿದೆ.


