Asianet Suvarna News Asianet Suvarna News

ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ

ನೀವು ಅಂಚೆ ಕಚೇರಿಯ ಯಾವುದಾದರೂ ಒಂದು ವಿಭಾಗದಲ್ಲಿ ಹಣ ಹೂಡಲು ಮುಂದಾಗಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಓದಲೇಬೇಕು.. ಭರಪೂರ ಮಾಹಿತಿ ಇಲ್ಲಿದೆ.

Indian Post Office Saving Schemes Offer Interest Rates Between 4%-8.3%

ಭಾರತೀಯ ಅಂಚೆ ಇಲಾಖೆ  9 ಉಳಿತಾಯ ಯೋಜನೆಗಳ ಪರಿಚಯ ಇಲ್ಲಿದೆ. ಶೇ. 4 ರಿಂದ ಶೇ.8.3 ರವರೆಗೆ ಬಡ್ಡಿ ದರ ನೀಡುವ ಯೋಜನೆಗಳ ಮೇಲೆ ಒಂದು ಮುನ್ನೋಟ ನೀವು ನೋಡಲೇಬೇಕು. ಉಳಿತಾಯ ಖಾತೆ, ಚಾಲ್ತಿ ಖಾತೆ, ಹಿರಿಯ ನಾಗರಿಕರ ಖಾತೆ, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯ ಸಮೃದ್ಧಿ ಯೋಜನೆ .. ಈ ರೀತಿ ಹಲವು ವಿಭಾಗಗಳಲ್ಲಿ ಯೋಜನೆಯನ್ನು ನೀಡಿದೆ. ಅವುಗಳ ಮೇಲೊಂದು ನೋಟ ಇಲ್ಲಿದೆ.

ಅಂಚೆ ಕಚೇರಿಯ ಉಳಿತಾಯ ಖಾತೆ:
ಕನಿಷ್ಠ 20 ರೂ.ಇಟ್ಟು ಖಾತೆ ತೆರಯಬಹುದು. ಈ ಖಾತೆಯನ್ನು ವರ್ಗಾವಣೆ ಸಹ ಮಾಡಿಕೊಳ್ಳಬಹುದು. ಎಟಿಎಂ ಸೌಲಭ್ಯವೂ ಇಲ್ಲಿ ಲಭ್ಯವಿದೆ. ಈ ಉಳಿತಾಯ ಖಾತೆಗೆ ಶೇ. 4 ಬಡ್ಡಿ ದರ ನೀಡಲಾಗುವುದು.

ಆರ್ ಡಿ ಖಾತೆ:
ತಿಂಗಳಿಗೆ ಕನಿಷ್ಠ 10 ರೂ. ಉಳಿತಾಯ ಮಾಡಬೇಕು. ಒಂದು ವರ್ಷದ ನಂತರ ಉಳಿತಾಯದ ಅರ್ಧದಷ್ಟು ಹಣವನ್ನು ಹಿಂದಕ್ಕೆ ಪಡೆದುಕೊಳ್ಳಬಹುದು. 5 ವರ್ಷದ ಲೆಕ್ಕದಲ್ಲಿ ುಳಿತಾಯ ನಡೆಯಲಿದ್ದು ವಾರ್ಷಿಕವಾಗಿ ಶೇ. 6.9ರಷ್ಟು ಬಡ್ಡಿ ದರ ನೀಡಲಾಗುತ್ತದೆ.

ಫಿಕ್ಸಡ್ ಡಿಪಾಸಿಟ್ ಖಾತೆ:
ಕನಿಷ್ಠ 200 ರೂ. ಇಡಬೇಕಾಗಿದ್ದು ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಲು ಅವಕಾಶವಿದ್ದು ಸೆಕ್ಷನ್ 80 ಸಿ ಅನ್ವಯ ಇಲ್ಲಿನ ಹಣ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳುತ್ತದೆ. ವರ್ಷದಿಂದ ವರ್ಷಕ್ಕೆ ಇಟ್ಟ ಹಣದ ಮೇಲಿನ ಬಡ್ಡಿ ಜಾಸ್ತಿಯಾಗಲಿದ್ದು 6.6 ,6.7, 6.9 ಮತ್ತು 7.4ರಂತೆ ಮುಂದುವರಿಯುವುದು.

ಅಂಚೆ ಕಚೇರಿ ತಿಂಗಳ ಆದಾಯ ಯೋಜನೆ:
ಪ್ರತಿ ತಿಂಗಳು 1500 ರೂ. ನಂತೆ ಹೂಡಿಕೆ ಮಾಡಬೇಕಾಗುವುದು. 4.5 ಲಕ್ಷ ರೂ. ಹೂಡಿಕೆಯ ಮಿತಿ ಇದೆ. ಜಾಯಿಂಟ್ ಖಾತೆಗೆ 9 ಲಕ್ಷ ರೂ. ನಿಗದಿ ಮಾಡಲಾಗಿದೆ. ತಿಂಗಳ ಲೆಕ್ಕದಲ್ಲಿ ಶೇ. 7.3 ಬಡ್ಡಿ ದರ ನೀಡಲಾಗುವುದು. ಬೋನಸ್ ನೀಡುವ ಅವಕಾಶ ಸಹ ಈ ಯೋಜನೆಯಲ್ಲಿದೆ.

ಹಿರಿಯ ನಾಗರಿಕರ ಖಾತೆ:
60 ವರ್ಷ ಮೇಲ್ಪಟ್ಟ ಅಥವಾ 55 ವರ್ಷದ ನಂತರ ನಿವೃತ್ತಿ ಪಡೆದುಕೊಂಡವರು ಈ ಯೋಜನೆಯ ಪಾಲುದಾರರಾಗಬಹುದು. 1 ಸಾವಿರ ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಅದನ್ನು ಮುಂದುವರಿಸಬೇಕಿದೆ. 15 ಲಕ್ಷ ರೂ. ಗಿಂತ ಅಧಿಕ ಹಣ ಇಡುವಂತಿಲ್ಲ. 5 ವರ್ಷದ ಅವಧಿಯನ್ನು ಪರಿಗಣಿಸಲಾಗುತ್ತದೆ. ಹಿರಿಯ ನಾಗರಿಕರ ಉಳಿತಾಯಕ್ಕೆ ಶೇ. 8.3 ರಷ್ಟು ಬಡ್ಡಿ ದರ ನೀಡಲಾಗುತ್ತದೆ. 

15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್:
ಇಲ್ಲಿ ಕನಿಷ್ಠ 500ರೂ. ಹೂಡಿಕೆ ಮಾಡಬೇಕಾಗುತ್ತದೆ. ವರ್ಷಕ್ಕೆ 1.5 ಲಕ್ಷ ರೂ. ಮಿತಿ ನಿಗದಿಪಡಿಸಲಾಗಿದೆ. 12 ಕಂತುಗಳಲ್ಲಿ ಹಣ ತುಂಬಲು ಅವಕಾಶವಿದೆ. ತೆರಿಗೆ ವಿನಾಯಿತಿಯೂ ದೊರೆಯಲಿದ್ದು ಖಾತೆ ತೆರೆದು 7 ವರ್ಷದ ನಂತರ ಪ್ರತಿ ವರ್ಷ ಹಣ ಡ್ರಾ ಮಾಡಲು ಅವಕಾಶವಿದೆ. ವಾರ್ಷಿಕವಾಗಿ ಈ ಖಾತೆಗೆ ಶೇ. 7.6 ಬಡ್ಡಿ ನೀಡಲಾಗುತ್ತದೆ.

ರಾಷ್ಟ್ರೀಯ ಉಳಿತಾಯ ಪತ್ರ:
ಕನಿಷ್ಠ 100 ರೂ ಹೂಡಿಕೆ ಮಾಡಬೇಕಿದ್ದು  ಈ ಖಾತೆಗೆ ಮಿತಿ ಇಲ್ಲ. ತೆರಿಗೆ ವಿನಾಯಿತಿಯೂ ದೊರೆಯಲಿದ್ದು ಮೊದಲ ವರ್ಷ ಹೂಡಿದ 100 ರೂ. 5ನೇ ವರ್ಷಕ್ಕೆ 144 ರೂ. ಆಗುತ್ತದೆ. ವಾರ್ಷಿಕವಾಗಿ ಶೇ. 7.6 ಬಡ್ಡಿ ದರ ನೀಡಲಾಗುತ್ತದೆ.

ಕಿಸಾನ್ ವಿಕಾಸ್ ಪತ್ರ:
ಕನಿಷ್ಠ 1000 ರೂ. ಹೂಡಿಕೆ ಮಾಡಬೇಕು. ಹೂಡಿಕೆಗೆ ಮಿತಿ ಇಲ್ಲ. ಈ ಪತ್ರವನ್ನು ವರ್ಗಾವಣೆ ಸಹ ಮಾಡಿಕೊಳ್ಳಬಹುದು. ಪತ್ರ ಪಡೆದು 2.5 ವರ್ಷದ ನಂತರ ಹಣ ಹಿಂದಕ್ಕೆ ಪಡೆದುಕೊಳ್ಳಬಹುದು. 118 ತಿಂಗಳು ಅಂದರೆ 9 ವರ್ಷಕ್ಕೆ ಹೂಡಿದ ಹಣ ದ್ವಿಗುಣವಾಗುತ್ತದೆ. ಇದಕ್ಕೆ ಶೇ. 7.3 ಬಡ್ಡಿ ದರ ನೀಡಲಾಗುತ್ತದೆ.

ಸುಕನ್ಯ ಸಮೃದ್ಧಿ ಯೋಜನೆ:
ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯುವ ಖಾತೆಗೆ 1000 ರೂ. ಕನಿಷ್ಠ ಹೂಡಿಕೆ ಇದೆ. 1.5 ಲಕ್ಷ ರೂ ಗರಿಷ್ಠ ಹೂಡಿಕೆ ಅವಕಾಶ ಇದೆ. ಪ್ರತಿ ತಿಂಗಳು ತುಂಬುವ ಹಣದಲ್ಲಿಯೂ  ಏರಿಕೆ ಮಾಡಿಕೊಳ್ಳಬಹುದು. ಹೆಣ್ಣು ಮಗಳಿಗೆ 18 ವರ್ಷ ತುಂಬಿದ ನಂತರ ಹಣ ಡ್ರಾ ಮಾಡಬಹುದು. ಆಕೆಯ 21 ವರ್ಷಕ್ಕೆ ಖಾತೆ ತನ್ನಿಂದ ತಾನೆ ಕ್ಲೋಸ್ ಆಗುತ್ತದೆ. ಈ ಖಾತೆಗೆ ಅಂಚೆ ಇಲಾಖೆ ಶೇ. 8.1 ಬಡ್ಡಿ ದರ ನೀಡುತ್ತಿದೆ.

Follow Us:
Download App:
  • android
  • ios