Asianet Suvarna News Asianet Suvarna News

ಯಾರಿವರು ನಿಕೇಶ್‌ ಅರೋರಾ? ಗೂಗಲ್‌ ಸಿಇಒ ಸುಂದರ್‌ ಪಿಚೈಗಿಂತ ಹೆಚ್ಚಿನ ವೇತನ ಪಡೆಯೋ ಭಾರತೀಯ ಮೂಲದ ಸಿಇಒ

ಅಮೆರಿಕದಲ್ಲಿ ಗರಿಷ್ಠ ವೇತನ ಪಡೆಯುವ ಸಿಇಒಗಳ ಪೈಕಿ ಭಾರತೀಯ ಮೂಲದ ನಿಕೇಶ್‌ ಅರೋರಾ 2ನೇ ಸ್ಥಾನಕ್ಕೇರಿದ್ದಾರೆ. ಗೂಗಲ್‌ ಸಿಇಒ ಸುಂದರ್‌ ಪಿಚೈ ಹಾಗೂ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರಿಗಿಂತ ಹೆಚ್ಚಿನ ವೇತನವನ್ನು ಇವರು ಪಡೆಯುತ್ತಿದ್ದಾರೆ,
 

Indian Born Nikesh Arora of palo Alto Networks Second Highest Paid CEO In The US san
Author
First Published May 28, 2024, 4:22 PM IST

ಮುಂಬೈ (ಮೇ.28): ಸೈಬರ್‌ಸೆಕ್ಯುರಿಟಿಯ ವಿಶ್ವದ ಅತ್ಯಂತ ಪ್ರಧಾನ ಕಂಪನಿ ಪಾಲೋ ಆಲ್ಟೋ ನೆಟ್‌ವರ್ಕ್ಸ್‌ನ ಭಾರತೀಯ ಮೂಲದ ಸಿಇಒ ನಿಕೇಶ್‌ ಅರೋರಾ, ವಿಶ್ವದಲ್ಲಿಯೇ ಗರಿಷ್ಠ ವೇತನ ಪಡೆಯುತ್ತಿರುವ 2ನೇ ಸಿಇಒ ಎನಿಸಿಕೊಂಡಿದ್ದಾರೆ. ವಾಲ್‌ ಸ್ಟ್ರೀಟ್‌ ಜರ್ನಲ್‌ 2023 ಪ್ರಕಟಿಸಿರುವ ಅಮೆರಿಕದಲ್ಲಿ ಗರಿಷ್ಠ ವೇತನ ಪಡೆಯುವ ಸಿಇಒಗಳ ಲಿಸ್ಟ್‌ಅನ್ನು ಪ್ರಕಟಿಸಿದ್ದು, ನಿಕೇಶ್‌ ಅರೋರಾ ಎರಡನೇ ಸ್ಥಾನಕ್ಕೇರಿದ್ದಾರೆ. ನಿಕೇಶ್‌ ಅರೋರಾ ಅವರಿಗೆ ಕಂಪನಿ ನೀಡಲಿರುವ ಪರಿಹಾರ ಅಥವಾ ವೇತನ 151.43 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ 1260 ಕೋಟಿ ರೂಪಾಯಿ. 56 ವರ್ಷದ ನಿಕೇಶ್‌ ಅರೋರಾ ಅವರ ವೇತನ, ಟೆಕ್‌ ದೈತ್ಯರಾದ ಮೆಟಾದ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಹಾಗೂ ಗೂಗಲ್‌ನ ಸಿಇಒ ಸುಂದರ್‌ ಪಿಚೈ ಅವರಿಗಿಂತಲೂ ಹೆಚ್ಚಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ 1968ರ ಫೆಬ್ರವರಿ 9 ರಂದು ಜನಿಸಿದ ನಿಕೋಶ್ ಅರೋರಾ ಅವರ ತಂದೆ ಭಾರತೀಯ ಏರ್‌ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ. ವಾರಣಾಸಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿಬಿಎಚ್‌ಯು) ಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ನಿಕೇಶ್‌ ಅರೋರಾ ಅದಕ್ಕೂ ಮುನ್ನ ಸುಬ್ರತೋ ಪಾರ್ಕ್‌ನ ಏರ್‌ಪೋರ್ಸ್‌ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ವಿಪ್ರೋದಲ್ಲಿ ಕೆಲಕಾಲ ಕೆಲಸ ಮಾಡಿದ್ದ ನಿಕೇಶ್‌ ಅರೋರಾ, ಬಳಿಕ ಅಮೆರಿಕದ ಬೋಸ್ಟನ್‌ನಲ್ಲಿರುವ ಮ್ಯಾಸಚೂಸೆಟ್ಸ್‌ನಲ್ಲಿರುವ ನಾರ್ತ್‌ ಈಸ್ಟರ್ನ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎಎ ಪದವಿ ಅಭ್ಯಾಸ ಮಾಡಲು ತೆರಳಿದ್ದರು. 1992 ರಲ್ಲಿ ಅವರು ಫಿಡೆಲಿಟಿ ಇನ್ವೆಸ್ಟ್‌ಮೆಂಟ್‌ಗೆ ಸೇರಿದ ಬಳಿಕ ಅವರ ಉದ್ಯೋಗದ ಪ್ರಯಾಣ ಆರಂಭವಾಯಿತು. ಅಲ್ಲಿ ಅವರು ಹಣಕಾಸು ಮತ್ತು ತಂತ್ರಜ್ಞಾನ ನಿರ್ವಹಣೆಯಲ್ಲಿ ಪಾತ್ರಗಳನ್ನು ವಹಿಸಿಕೊಂಡಿದ್ದರು. ಕೊನೆಗೆ ಇದೇ ಕಂಪನಿಗೆ ಉಪಾಧ್ಯಕ್ಷರಾಗುವ ಹಂತಕ್ಕೂ ಇವರು ಹೋಗಿದ್ದರು.  2000 ರಲ್ಲಿ, ಅವರು ಡ್ಯೂಷೆ ಟೆಲಿಕಾಮ್‌ನ ಅಂಗಸಂಸ್ಥೆಯಾದ ಟಿ-ಮೋಷನ್ ಅನ್ನು ಸ್ಥಾಪಿಸಿದರು, ಇದು ನಂತರ ಟಿ-ಮೊಬೈಲ್‌ನ ಪ್ರಮುಖ ಸೇವೆಗಳ ಭಾಗವಾಯಿತು. ಅವರು ಡಾಯ್ಚ ಟೆಲಿಕಾಮ್ AG ಯ T-ಮೊಬೈಲ್ ಇಂಟರ್ನ್ಯಾಷನಲ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು.

2004ರಲ್ಲಿ ನಿಕೇಶ್‌ ಅರೋರಾ ಗೂಗಲ್‌ಗೆ ಸೇರಿದ್ದರು.  ಇಲ್ಲಿ ಯುರೋಪ್ ಕಾರ್ಯಾಚರಣೆಗಳ ಉಪಾಧ್ಯಕ್ಷರು, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಅಧ್ಯಕ್ಷರು ಮತ್ತು ಅಂತಿಮವಾಗಿ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ವ್ಯಾಪಾರ ಅಧಿಕಾರಿಯಂತಹ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು. ಅವರು ಸುಮಾರು 10 ವರ್ಷಗಳ ಕಾಲ Google ನಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ನಿಕೇಶ್‌ ಅರೋರಾ ಇನ್ವೆಸ್ಟ್‌ಮೆಂಟ್‌ ಕಂಪನಿ ಸಾಫ್ಟ್‌ಬ್ಯಾಂಕ್‌ ಕಾರ್ಪೋರೇಷನ್‌ ಪರವಾಗಿ 2014ರಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಅವರು ಸಾಫ್ಟ್‌ಬ್ಯಾಂಕ್ ಇಂಟರ್ನೆಟ್ ಮತ್ತು ಮೀಡಿಯಾ ಇಂಕ್‌ನ ಗ್ರೂಪ್‌ನ ಉಪಾಧ್ಯಕ್ಷ ಮತ್ತು ಸಿಇಒ ಹುದ್ದೆಗೆ ಏರಿದ್ದರು.

ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರ ಐಕಾನಿಕ್‌ IIT ಫೋಟೋ ವೈರಲ್‌, ಪಕ್ಕದಲ್ಲಿರುವ ಯುವತಿ ಕೂಡ ಫೇಮಸ್‌!

ಈ ಹಂತದಲ್ಲಿ ಅವರು ಸಾಫ್ಟ್‌ಬ್ಯಾಂಕ್‌ನ ಸಿಇಒ, ಮಸಯೋಶಿ ಸನ್‌ ಅವರ ಉತ್ತರಾಧಿಕಾರಿಯಾಗುತ್ತಾರೆ ಎನ್ನುವ ನಿರೀಕ್ಷೆಗಳಿದ್ದವು.  ಎರಡು ವರ್ಷಗಳಲ್ಲಿ ಅವರು 208 ಮಿಲಿಯನ್‌ ಯುಎಸ್‌ ಡಾಲರ್‌ ಪರಿಹಾರ ಪಡೆದುಕೊಂಡಿದ್ದರು. ಈ ಹಂತದಲ್ಲಿ ಅವರು 2016ರ ಜೂನ್‌ನಲ್ಲಿ ಸಾಫ್ಟ್‌ಬ್ಯಾಂಕ್‌ನಲ್ಲಿ ಎಲ್ಲಾ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದ ಅವರು, 2018ರಲ್ಲಿ ಪಾಲೊ ಆಲ್ಟೊ ನೆಟ್‌ವರ್ಕ್‌ ಸೇರಿಕೊಂಡಿದ್ದರು. ಪ್ರಸ್ತುತ ಅವರು ಈ ಕಂಪನಿಯ ಸಿಇಒ ಹಾಗೂ ಅಧ್ಯಕ್ಷರಾಗಿದ್ದಾರೆ. 2015ರಲ್ಲಿ ಇಟಿ ಕಾರ್ಪೋರೇಟ್‌ ಎಕ್ಸಲೆನ್ಸ್‌ ಅವಾರ್ಡ್ಸ್‌ನಲ್ಲಿ ಗ್ಲೋಬಲ್‌ ಇಂಡಿಯನ್‌ ಪ್ರಶಸ್ತಿಗೂ ನಿಕೇಶ್‌ ಅರೋರಾ ಭಾಜನರಾಗಿದ್ದರು.

'ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಇಳಿಯಬೇಡಿ..' 28 ಉದ್ಯೋಗಿಗಳ ವಜಾ ಬಳಿಕ ಗೂಗಲ್‌ ಸಿಇಒ ಸುಂದರ್‌ ಪಿಚೈ ಪತ್ರ

Latest Videos
Follow Us:
Download App:
  • android
  • ios