'ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಇಳಿಯಬೇಡಿ..' 28 ಉದ್ಯೋಗಿಗಳ ವಜಾ ಬಳಿಕ ಗೂಗಲ್ ಸಿಇಒ ಸುಂದರ್ ಪಿಚೈ ಪತ್ರ
ಗೂಗಲ್‌ನಿಂದ 28 ಉದ್ಯೋಗಿಗಳನ್ನು ವಜಾ ಮಾಡಿದ ಬೆನ್ನಲ್ಲಿಯೇ, ಕಂಪನಿಯ ಉದ್ಯೋಗಿಗಳಿಗೆ ಸಂದೇಶ ನೀಡಿರುವ ಸಿಇಒ ಸುಂದರ್ ಪಿಚೈ, ಯಾವುದೇ ಕಾರಣಕ್ಕೂ ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಇಳಿಯಬೇಡಿ ಎಂದು ಸೂಚನೆ ನೀಡಿದ್ದಾರೆ.
ನವದೆಹಲಿ (ಏ.20): ಕೆಲಸದ ಸ್ಥಳದಲ್ಲಿ ರಾಜಕೀಯ ವಿಚಾರಗಳಿಂದ ದೂರ ಇರುವಂತೆ ಟೆಕ್ ಕಂಪನಿ ಗೂಗಲ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಸುಂದರ್ ಪಿಚೈ ಕಂಪನಿಯ ಉದ್ಯೋಗಿಗಳಿಗೆ ಸೂಚಿಸಿದ್ದಾರೆ. ಗೂಗಲ್‌ನಿಂದ 28 ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಕಂಪನಿಯ ಉದ್ಯೋಗಿಗಳಿಗಾಗಿ ಬರೆದ ಬ್ಲಾಗ್ ಪೋಸ್ಟ್‌ನಲ್ಲಿ ಸಿಇಒ ಈ ವಿಷಯ ತಿಳಿಸಿದ್ದಾರೆ. ನೀವು ಕಂಪನಿಗೆ ಬಂದು ಕೆಲಸ ಮಾಡಬೇಡಿ, ಆದರೆ, ರಾಜಕೀಯ ಮಾಡಬೇಡಿ ಎನ್ನುವ ಸ್ಪಷ್ಟ ಆದೇಶವನ್ನು ಅವರು ನೀಡಿದ್ದಾರೆ. ಮಿಷನ್ ಫಸ್ಟ್ ಎನ್ನುವ ಶೀರ್ಷಿಕೆಯಲ್ಲಿ ಬರೆದಿರುವ ಪೋಸ್ಟ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದು, ಕಂಪನಿಯ ನೀತಿಗಳು ಮತ್ತು ನಿರೀಕ್ಷೆಗಳು ಅತ್ಯಂತ ಸ್ಪಷ್ಟವಾಗಿದೆ. ಕಂಪನಿಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ನಿಂಬಸ್ ಯೋಜನೆಗೆ ವಿರೋಧಿಸಿದ್ದ ಉದ್ಯೋಗಿಗಳು: ವಾಸ್ತವವಾಗಿ, ಕೆಲವು ಉದ್ಯೋಗಿಗಳು ಕಂಪನಿಯ $1.2 ಶತಕೋಟಿ ನಿಂಬಸ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ಅಮೇಜಾನ್‌ನ ಜಂಟಿ ಯೋಜನೆಯಾಗಿದೆ. ಇದರಲ್ಲಿ ಇಸ್ರೇಲ್ ಸರ್ಕಾರ ಮತ್ತು ಸೇನೆಗೆ ಕ್ಲೌಡ್ ಸೇವೆ ನೀಡುವ ವ್ಯವಸ್ಥೆ ಎನ್ನಲಾಗಿದೆ. ಯೋಜನೆಯನ್ನು ವಿರೋಧಿಸಿ ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮತ್ತು ಸನ್ನಿವೇಲ್ ನಗರಗಳಲ್ಲಿನ ಗೂಗಲ್ ಕಚೇರಿಗಳಲ್ಲಿ ಒಂದು ಗಂಟೆ ಕಾಲ ಧರಣಿ ನಡೆಸಿದ 9 ಮಂದಿ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಗೂಗಲ್ ಆವರಣದಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಇದನ್ನು ಲೈವ್‌ಸ್ಟ್ರೀಮ್ ಕೂಡ ಮಾಡಲಾಗಿತ್ತು. ಈ ಘಟನೆಯ ಬಳಿಕ ಗೂಗಲ್ ತನ್ನ 28 ಉದ್ಯೋಗಿಗಳನ್ನು ವಜಾ ಮಾಡಿತ್ತು.
ಸುಂದರ್ ಪಿಚೈ ಹೇಳಿದ್ದೇನು: ಪೋಸ್ಟ್‌ನಲ್ಲಿ ಬರೆದಿರುವ ಸುಂದರ್ ಪಿಚೈ, ' 'ಗೂಗಲ್‌ನ ಸಂಸ್ಕೃತಿ ಯಾವಾಗಲೂ ಮುಕ್ತ ಸಂವಾದವನ್ನು ಉತ್ತೇಜಿಸುತ್ತದೆ. ಇದು ಉತ್ತಮ ಉತ್ಪನ್ನಗಳನ್ನು ರಚಿಸಲು ಮತ್ತು ಉತ್ತಮ ಆಲೋಚನೆಗಳ ಮೇಲೆ ಕೆಲಸ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಎಲ್ಲಾ ನಂತರ ನಾವು ಕಚೇರಿಯಲ್ಲಿ ಕೆಲಸ ಮಾಡುತ್ತೇವೆ ಮತ್ತು ಇಲ್ಲಿ ಕೆಲವು ನೀತಿಗಳು ಮತ್ತು ನಿರೀಕ್ಷೆಗಳು ಸ್ಪಷ್ಟವಾಗಿವೆ. ನಾವು ವ್ಯಾಪಾರಕ್ಕಾಗಿ ಕೆಲಸ ಮಾಡುತ್ತೇವೆ. ಆದ್ದರಿಂದ, ಕಚೇರಿಯು ನಿಮ್ಮ ಸಹೋದ್ಯೋಗಿಗಳ ಕೆಲಸವನ್ನು ಅಡ್ಡಿಪಡಿಸುವ ಮತ್ತು ಅಸುರಕ್ಷಿತ ಭಾವನೆಯನ್ನು ಉಂಟುಮಾಡುವ ಸ್ಥಳವಲ್ಲ. ಕಂಪನಿಯನ್ನು ವೈಯಕ್ತಿಕ ವೇದಿಕೆಯನ್ನಾಗಿ ಪರಿಗಣಿಸಬೇಡಿ. ಇಲ್ಲಿನ ಕೆಲಸಕ್ಕೆ ಅಡ್ಡಿಪಡಿಸುವಂಥ ವಿಷಯಗಳು ಹಾಗೂ ರಾಜಕೀಯವನ್ನು ಚರ್ಚೆ ಮಾಡಬೇಡಿ ಎಂದು ತಿಳಿಸಿದ್ದಾರೆ. Google ಉದ್ಯೋಗಿಗಳು ತಾರ್ಕಿಕವಾಗಿರಬೇಕು. ಪ್ರಪಂಚದ ಮಾಹಿತಿಯನ್ನು ಸಂಘಟಿಸುವುದು ಮತ್ತು ವಿಶ್ವಕ್ಕೆ ವಿಶ್ವಾಸಾರ್ಹ ಮಾಹಿತಿಯ ಪೂರೈಕೆದಾರರಾಗಿ ಉಳಿಯುವುದು ನಮ್ಮ ಗುರಿಯಾಗಿದೆ ಎಂದು ಬರೆದಿದ್ದಾರೆ.
ಚುನಾವಣಾ ಪ್ರಚಾರದ ಮೇಲೆ ಎಐ ನಿಗಾ: ಗೂಗಲ್ ಜತೆ ಚುನಾವಣಾ ಆಯೋಗ ಒಪ್ಪಂದ
ಮುಂದಿನ ದಿನಗಳಲ್ಲಿ ಗೂಗಲ್ ತನ್ನ 30,000 ಉದ್ಯೋಗಿಗಳನ್ನು ವಜಾ ಮಾಡಬಹುದು. ಕಂಪನಿಯಲ್ಲಿನ ಈ ಹಿಂಬಡ್ತಿ ಜಾಹೀರಾತು-ಮಾರಾಟ ವಿಭಾಗದಲ್ಲಿ ನಡೆಯುತ್ತದೆ. ಈ ಮಾಹಿತಿಯನ್ನು ಬ್ಯುಸಿನೆಸ್ ಟುಡೇ ವರದಿ ಮಾಡಿದೆ. ಕಂಪನಿಯ ಜಾಹೀರಾತು ಮಾರಾಟದ ಮುಖ್ಯಸ್ಥ ಜಾನ್ ಡೌನಿ ಇತ್ತೀಚಿನ ಸಭೆಯಲ್ಲಿ ಗೂಗಲ್ ತನ್ನ ಜಾಹೀರಾತು ವಿಭಾಗವನ್ನು ಪುನರ್ರಚಿಸಲು ಯೋಜಿಸುತ್ತಿದೆ ಎಂದು ತಿಳಿಸಿದ್ದರು. ಇದಲ್ಲದೆ, ಕಂಪನಿಯು ಈ ವಿಭಾಗದಲ್ಲಿ AI ನ ಕಾರ್ಯಾಚರಣೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಕಡಿತಗೊಳ್ಳಬಹುದು' ಎನ್ನಲಾಗಿದೆ.
ನನಗೆ 31 ಅಲ್ಲ, ಬರೀ 28 ವರ್ಷ, ಹುಟ್ಟುಹಬ್ಬ ದಿನ ಗೂಗಲ್‌ಗೆ ಕ್ಲಾಸ್ ತೆಗೆದುಕೊಂಡ ದೀಪಿಕಾ ದಾಸ್