*ಫೆಡೆಕ್ಸ್ ಅಧ್ಯಕ್ಷ ಹಾಗೂ ಸಿಇಒ  ಸ್ಥಾನದಿಂದ ಕೆಳಗಿಳಿದ ಸಂಸ್ಥಾಪಕ ಸ್ಮಿತ್ ಫೆಡೆಕ್ಸ್*1991ರಲ್ಲಿ ಫೆಡೆಕ್ಸ್ ಗೆ ಸೇರ್ಪಡೆಗೊಂಡ ರಾಜ್ ಸುಬ್ರಹ್ಮಣ್ಯಂ*ರಾಜ್ ಸುಬ್ರಹ್ಮಣ್ಯಂ ಬಾಂಬೆ ಐಐಟಿ ಹಳೇ ವಿದ್ಯಾರ್ಥಿ

ನ್ಯೂಯಾರ್ಕ್ (ಮಾ.29): ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಪೂರೈಕೆ ಸಂಸ್ಥೆ ಫೆಡೆಕ್ಸ್ (FedEx) ನೂತನ ಅಧ್ಯಕ್ಷ (Chairman) ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ( CEO)ಭಾರತೀಯ ಸಂಜಾತ ರಾಜ್ ಸುಬ್ರಹ್ಮಣ್ಯಂ (Raj Subramaniam) ನೇಮಕಗೊಂಡಿದ್ದಾರೆ.

ಪ್ರಸ್ತುತ ಫ್ರೆಡೆರಿಕ್ ಡಬ್ಲ್ಯು ಸ್ಮಿತ್ ಫೆಡೆಕ್ಸ್ (Frederick W. Smith) ಅಧ್ಯಕ್ಷ ಹಾಗೂ ಸಿಇಒ ಆಗಿದ್ದು, ಜೂನ್ 1ರಂದು ಈ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಹೀಗಾಗಿ ಸ್ಮಿತ್ ಸ್ಥಾನಕ್ಕೆ ರಾಜ್ ಸುಬ್ರಹ್ಮಣ್ಯಂ ನೇಮಕಗೊಂಡಿದ್ದಾರೆ. ಸ್ಮಿತ್ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.'ಮುಂದೇನು ಎಂದು ಯೋಚಿಸಿದಾಗ ಉತ್ತಮ ನಾಯಕತ್ವದ ಸಾಮರ್ಥ್ಯ ಹೊಂದಿರೋ ರಾಜ್ ಸುಬ್ರಹ್ಮಣ್ಯಂ ಫೆಡೆಕ್ಸ್ ಅನ್ನು ಅತ್ಯಂತ ಯಶಸ್ವಿ ಭವಿಷ್ಯಕ್ಕೆ ಕೊಂಡೊಯ್ಯುತ್ತಾರೆ ಎಂಬ ಸಂತೃಪ್ತಿಯ ಭಾವನೆ ನನಗಿದೆ' ಎಂದು ಸ್ಮಿತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ತಮ್ಮ ಹೊಸ ಪಾತ್ರದ ಬಗ್ಗೆ ತಿಳಿಸಿದ ಸ್ಮಿತ್, ಸುಸ್ಥಿರ, ನಾವೀನ್ಯ ಹಾಗೂ ಸಾರ್ವಜನಿಕ ನೀತಿ ಸೇರಿದಂತೆ ಮಂಡಳಿಯ ಆಡಳಿತ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಎದುರು ನೋಡುತ್ತಿರೋದಾಗಿ ಹೇಳಿದ್ದಾರೆ. ಸ್ಮಿತ್ 1971ರಲ್ಲಿ ಫೆಡೆಕ್ಸ್ ಸ್ಥಾಪಿಸಿದ್ದರು.

UAE Trade Deal:ಮೇನಲ್ಲಿ FTA ಅನುಷ್ಠಾನ; ಲೋಹ, ಖರ್ಜೂರ,ಕಚ್ಚಾ ತೈಲದ ಮೇಲಿನ ಆಮದು ಸುಂಕ ತಗ್ಗಿಸಲಿದೆ ಭಾರತ

'ಫ್ರೆಡ್ ಒಬ್ಬ ದಾರ್ಶನಿಕ ನಾಯಕ ಮತ್ತು ಉದ್ಯಮ ಜಗತ್ತಿನ ದಂತಕಥೆ. ಅವರು ವಿಶ್ವದ ಶ್ರೇಷ್ಠ ಮತ್ತು ಅತ್ಯಂತ ಮೆಚ್ಚುಗೆ ಪಡೆದ ಕಂಪೆನಿಗಳಲ್ಲಿ ಒಂದನ್ನು ಸ್ಥಾಪಿಸಿದರು. ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಮತ್ತು ಅವರು ಕಟ್ಟಿದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದು ನನ್ನ ಗೌರವ ಮತ್ತು ಅದೃಷ್ಟ ಎಂದು ಭಾವಿಸುತ್ತೇನೆ' ಎಂದು ಸುಬ್ರಮಣ್ಯಂ ಫೆಡೆಕ್ಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೆಡೆಕ್ಸ ಸಂಸ್ಥೆ ಜಗತ್ತಿನಾದ್ಯಂತ 6,00,000 ಉದ್ಯೋಗಿಗಳನ್ನು ಹೊಂದಿದೆ. ರಾಜ್ ಸುಬ್ರಹ್ಮಣ್ಯಂ 2020ರಲ್ಲಿ ಫೆಡೆಕ್ಸ್ ನಿರ್ದೇಶಕರ ಮಂಡಳಿಗೆ ಆಯ್ಕೆಯಾಗಿದ್ದರು ಹಾಗೂ ಅವರು ಮಂಡಳಿಯಲ್ಲಿ ಈ ಸ್ಥಾನವನ್ನು ನಿರ್ವಹಿಸಲಿದ್ದಾರೆ ಎಂದು ಕಂಪೆನಿ ತಿಳಿಸಿದೆ. ಫೆಡೆಕ್ಸ್ ಕಾರ್ಪೋರೇಷನ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾತ್ರ ನಿರ್ವಹಿಸೋ ಮುನ್ನ ಸುಬ್ರಹ್ಮಣ್ಯಂ ಫೆಡೆಕ್ಸ್ ಎಕ್ಸ್ ಪ್ರೆಸ್ ಅಧ್ಯಕ್ಷ ಹಾಗೂ ಸಿಇಒ ಆಗಿದ್ದರು. ಇದು ಜಗತ್ತಿನ ಅತೀದೊಡ್ಡ ಎಕ್ಸ್ ಪ್ರೆಸ್ ಸಾರಿಗೆ ಸಂಸ್ಥೆಯಾಗಿದೆ. ಸುಬ್ರಹ್ಮಣ್ಯಂ ಫೆಡೆಕ್ಸ್ ಕಾರ್ಪೋರೇಷನ್ ಉಪಾಧ್ಯಕ್ಷ ಹಾಗೂ ಮುಖ್ಯ ಮಾರ್ಕೆಟಿಂಗ್ ಹಾಗೂ ಸಂವಹನ ಅಧಿಕಾರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕಾರ್ಪೋರೇಟ್ ನೀತಿಗಳನ್ನು ಅಭಿವೃದ್ಧಿಪಡಿಸೋ ಜವಾಬ್ದಾರಿ ಹೊಂದಿದ್ದರು. ಸುಬ್ರಹ್ಮಣ್ಯಂ 1991ರಲ್ಲಿ ಫೆಡೆಕ್ಸ್ ಗೆ ಸೇರ್ಪಡೆಗೊಂಡ ಬಳಿಕ ಕೆನಡಾದಲ್ಲಿ ಫೆಡೆಕ್ಸ್ ಎಕ್ಸ್ ಪ್ರೆಸ್ ಅಧ್ಯಕ್ಷರಾಗಿ ಹಾಗೂ ಏಷ್ಯಾ ಮತ್ತು ಅಮೆರಿಕದಲ್ಲಿ ಅನೇಕ ನಿರ್ವಹಣೆ ಹಾಗೂ ಮಾರ್ಕೆಟಿಂಗ್ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 

54 ವರ್ಷದ ಸುಬ್ರಹ್ಮಣ್ಯಂ ಮೂಲತಃ ತಿರುವನಂತಪುರದವರಾಗಿದ್ದು, ಐಐಟಿ ಬಾಂಬೆಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆ ಬಳಿಕ ಕೆಮಿಕಲ್ ಇಂಜಿನಿಯರಿಂಗ್ ನಲ್ಲೇ ಸೈರಕ್ಯೂಸ್ ವಿಶ್ವವಿದ್ಯಾಲಯದಿಂದ 1989ರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಸ್ಟಿನ್ ಟೆಕ್ಸಸ್ ವಿಶ್ವವಿದ್ಯಾಲಯದಿಂದ ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ನಲ್ಲಿ ಎಂಬಿಎ ಪದವಿ ಕೂಡ ಪಡೆದಿದ್ದಾರೆ. 

Changes In Rules: ಏಪ್ರಿಲ್ 1ರಿಂದ ಈ 7 ನಿಯಮಗಳಲ್ಲಿ ಬದಲಾವಣೆ; ಮಾಹಿತಿ ಇಲ್ಲದಿದ್ರೆ ಜೇಬಿಗೆ ಬರೆ ಗ್ಯಾರಂಟಿ!

ವಿದೇಶಿ ಮೂಲದ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳಿಗೆ ಭಾರತೀಯ ಮೂಲದವರು ಸಿಇಒಗಳಾಗುತ್ತಿರುವುದು ಈಗ ಟ್ರೆಂಡ್‌ ಆಗಿದೆ. ಕೆಲವು ತಿಂಗಳ ಹಿಂದೆ ಪರಾಗ್‌ ಅಗರ್ವಾಲ್‌ ಟ್ವಿಟ್ಟರ್‌ನ ಸಿಇಒ ಆಗಿ ನೇಮಕಗೊಂಡಿದ್ದರು. ಗೂಗಲ್‌ ಸಿಇಒ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಡೆಲ್ಲಾ ಅಮೆರಿಕ ಮೂಲದ ದೈತ್ಯ ಸಂಸ್ಥೆಗಳ ಉನ್ನತ ಹುದ್ದೆಗಳಿಗೇರಿದ ಇತರ ಭಾರತೀಯ ಸಂಜಾತರಾಗಿದ್ದಾರೆ.