*2.5ಲಕ್ಷ ರೂ. ಮೀರಿದ ಇಪಿಎಫ್ ವಾರ್ಷಿಕ ಕೊಡುಗೆ ಬಡ್ಡಿ ಮೇಲೆ ತೆರಿಗೆ*ಆಧಾರ್ ಗೆ ಲಿಂಕ್ ಆಗದ ಪ್ಯಾನ್ ಕಾರ್ಡ್ ನಿಷ್ಕ್ರಿಯ*ತೆರಿಗೆ ವ್ಯಾಪ್ತಿಗೆ ಕ್ರಿಪ್ಟೋ ವಹಿವಾಟು*ಅತ್ಯಗತ್ಯ 800 ಔಷಧಗಳ ಬೆಲೆ ಹೆಚ್ಚಳ

ನವದೆಹಲಿ (ಮಾ.29): 2021-22ನೇ ಹಣಕಾಸು ವರ್ಷ (Financial Year) ಮಾ.31ಕ್ಕೆ ಮುಕ್ತಾಯವಾಗಲಿದೆ. ಏಪ್ರಿಲ್ 1ರಿಂದ ಪ್ರಾರಂಭವಾಗೋ ಹೊಸ ಹಣಕಾಸಿನ ಸಾಲಿನಲ್ಲಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳಾಗಲಿದ್ದು, ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಏಪ್ರಿಲ್ 1ರಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇಲ್ಲಿದೆ ಮಾಹಿತಿ.

1.ಇಪಿಎಫ್ ಬಡ್ಡಿ ಮೇಲೆ ತೆರಿಗೆ
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆದಾಯ ತೆರಿಗೆ (25ನೇ ತಿದ್ದುಪಡಿ) ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಿದೆ. ಇದರ ಅನ್ವಯ ಇಪಿಎಫ್ (EPF) ಖಾತೆಯಲ್ಲಿ ವಾರ್ಷಿಕ 2.5ಲಕ್ಷ ರೂ. ತನಕದ ಕೊಡುಗೆ ಮೇಲೆ ಯಾವುದೇ ತೆರಿಗೆ (Tax) ವಿಧಿಸಲಾಗೋದಿಲ್ಲ. ಒಂದು ವೇಳೆ ಇಪಿಎಫ್ (EPF) ಖಾತೆಗೆ ವಾರ್ಷಿಕ 2.5ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆ ನೀಡಿದ್ರೆ ಅದರ ಬಡ್ಡಿ (Interest) ಮೇಲೆ ತೆರಿಗೆ ವಿಧಿಸಲಾಗುತ್ತದೆ. 

ಡ್ರೋನ್ ಉದ್ಯಮ ವಹಿವಾಟು 60 ಕೋಟಿಯಿಂದ 900 ಕೋಟಿಗೆ : ವಿ ಕೆ ಸಿಂಗ್

2.ಅಂಚೆ ಕಚೇರಿ ಹೂಡಿಕೆ ನಿಯಮಗಳಲ್ಲಿ ಬದಲಾವಣೆ
ಅಂಚೆ ಕಚೇರಿ (Post office) ಮಾಸಿಕ ಆದಾಯ ಯೋಜನೆ (MIS),ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಅಥವಾ ಅಂಚೆ ಕಚೇರಿ ಅವಧಿ ಠೇವಣಿಗಳಲ್ಲಿ (TD)ಹೂಡಿಕೆಗೆ (Investment) ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಿದೆ. ಈ ಯೋಜನೆಗಳ ಮೇಲಿನ ಬಡ್ಡಿ(Interest) ಮೊತ್ತವು ಏಪ್ರಿಲ್ 1ರಿಂದ ನಗದು ರೂಪದಲ್ಲಿ ಸಿಗೋದಿಲ್ಲ. ಈ ಬಡ್ಡಿ ಹಣ ಪಡೆಯುವುದಕ್ಕಾಗಿಯೇ ನೀವು ಪ್ರತ್ಯೇಕ ಖಾತೆ ತೆರೆಯಬೇಕಿದೆ. ಅನೇಕ ಗ್ರಾಹಕರು ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗಳನ್ನು ಅವರ ಎಂಐಎಸ್ (MIS), ಎಸ್ ಸಿಎಸ್ಎಸ್ (SCSS), ಟಿಡಿ (TD) ಜೊತೆ ಜೋಡಣೆ ಮಾಡಿಲ್ಲ. ಇಂಥ ಪ್ರಕರಣಗಳಲ್ಲಿ ಬಡ್ಡಿ ಹಣವನ್ನು ಪಾವತಿಸಲಾಗೋದಿಲ್ಲ ಎಂದು ಅಂಚೆ ಇಲಾಖೆ ಮಾಹಿತಿ ನೀಡಿದೆ.

3.ಜಿಎಸ್ ಟಿ ನಿಯಮಗಳಲ್ಲಿ ಬದಲಾವಣೆ
ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (CBDT) ಸರಕುಗಳು ಹಾಗೂ ಸೇವೆಗಳ ತೆರಿಗೆ (GST) ಅಡಿಯಲ್ಲಿ ಇ-ಚಲನ್ ಗಳನ್ನು (electronic challans) ವಿತರಿಸೋದಕ್ಕೆ ಸಂಬಂಧಿಸಿದ ವಹಿವಾಟಿನ ಮಿತಿಯನ್ನು ಈ ಹಿಂದಿನ ನಿಗದಿತ ಮಿತಿ 50 ಕೋಟಿ ರೂ.ನಿಂದ 20 ಕೋಟಿ ರೂ.ಗೆ ಇಳಿಕೆ ಮಾಡಿದೆ.

4.ಪ್ಯಾನ್ -ಆಧಾರ್ ಲಿಂಕ್
ಮಾ.31ರೊಳಗೆ ನೀವು ನಿಮ್ಮ ಪ್ಯಾನ್ (PAN) ಸಂಖ್ಯೆಯನ್ನು ಆಧಾರ್ (Aadhaar) ಜೊತೆ ಲಿಂಕ್ (link) ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಅಲ್ಲದೆ, ಇದಕ್ಕಾಗಿ ನಿಮಗೆ ದಂಡ (Fine) ಕೂಡ ವಿಧಿಸಲಾಗುತ್ತದೆ. ದಂಡ ವಿಧಿಸಲು ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 234 ಎಚ್ ಬಳಸಲಾಗುತ್ತದೆ. ಸರ್ಕಾರ ಈ ತನಕ ದಂಡದ ಮೊತ್ತ ಘೋಷಣೆ ಮಾಡದಿದ್ರೂ ಕೊನೆಯ ದಿನಾಂಕದ ಬಳಿಕ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಲು ವಿಧಿಸೋ ಗರಿಷ್ಠ ಶುಲ್ಕ 1,000ರೂ.ಗಿಂತ ಹೆಚ್ಚಿರೋದಿಲ್ಲ.

5.ತೆರಿಗೆ ವ್ಯಾಪ್ತಿಗೆ ಕ್ರಿಪ್ಟೋಕರೆನ್ಸಿ 
ಕ್ರಿಪ್ಟೋಕರೆನ್ಸಿ (Cryptocurrency),ಎನ್ ಎಫ್ ಟಿ ಎಸ್ ( NFTs) ಸೇರಿದಂತೆ ಎಲ್ಲ ಮಾದರಿಯ ವರ್ಚುವಲ್ ಡಿಜಿಟಲ್ ಆಸ್ತಿಗಳ (VDA) ಮೇಲೆ ಏಪ್ರಿಲ್ 1ರಿಂದ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ಪ್ರತಿ ಬಾರಿ ಕ್ರಿಪ್ಟೋ ಕರೆನ್ಸಿಗಳನ್ನು ಮಾರಾಟ ಮಾಡಿದಾಗ ಶೇ.1ರಷ್ಟು ಟಿಡಿಎಸ್ (TDS) ಕಡಿತ ಮಾಡಲಾಗುತ್ತದೆ. ಈ ಸಾಲಿನ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಘೋಷಣೆ ಮಾಡಿದ್ದರು.

UAE Trade Deal:ಮೇನಲ್ಲಿ FTA ಅನುಷ್ಠಾನ; ಲೋಹ, ಖರ್ಜೂರ,ಕಚ್ಚಾ ತೈಲದ ಮೇಲಿನ ಆಮದು ಸುಂಕ ತಗ್ಗಿಸಲಿದೆ ಭಾರತ

6.ಮನೆ ಖರೀದಿ ದುಬಾರಿ
ಮೊದಲ ಬಾರಿಗೆ ಮನೆ ಖರೀದಿಸೋರಿಗೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆ 80EEA ಅಡಿಯಲ್ಲಿ ತೆರಿಗೆ ವಿನಾಯ್ತಿ ಪ್ರಯೋಜನವನ್ನು ನಿಲ್ಲಿಸಲಿದೆ. ಹೀಗಾಗಿ ಏಪ್ರಿಲ್ 1ರ ಬಳಿಕ ಮನೆ ಖರೀದಿ ದುಬಾರಿಯಾಗಲಿದೆ.

7.800 ಔಷಧಗಳ ಬೆಲೆ ಹೆಚ್ಚಳ
ನೋವುನಿವಾರಕಗಳು, ಸೋಂಕುನಿವಾರಕಗಳು, ವೈರಸ್ ಪ್ರತಿರೋಧಕ ಸೇರಿದಂತೆ 800ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಏಪ್ರಿಲ್ 1ರಿಂದ ಶೇ.10ಕ್ಕೂ ಅಧಿಕ ಹೆಚ್ಚಳವಾಗಲಿದೆ. ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ (NPPA) ಇತ್ತೀಚೆಗಷ್ಟೇ ಈ ಬಗ್ಗೆ ಮಾಹಿತಿ ನೀಡಿದೆ.