ಕೋಲ್ಕತ್ತಾ(ಜು.27): ಭಾರತದ ಜಿಡಿಪಿ ದರ ಗಮನಾರ್ಹ ಅಭಿವೃದ್ಧಿ ಸಾಧಿಸಿರುವುದು ನಿಜವಾದರೂ ವಿಶ್ವ 'ಹ್ಯಾಪಿನೆಸ್ ರ‍್ಯಾಂಕಿಂಗ್ ನಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಕೋಲ್ಕತಾದಲ್ಲಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣಬ್, ಜಾಗತಿಕ  ಸಂತುಷ್ಟ ಅಥವಾ ಸಂತೋಷ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 133ನೇ ಸ್ಥಾನ ಲಭಿಸಿದೆ ಎಂದು ಖೇದ ವ್ಯಕ್ತಪಡಿಸಿದರು. ಜಿಡಿಪಿ ಅಭಿವೃದ್ಧಿ ದರ ಸಮಾಧಾನಕರವಾಗಿದ್ದರೂ, ಜನರಲ್ಲಿ ಸಂತುಷ್ಟ ಭಾವನೆ ತರುವಲ್ಲಿ ನಾವು ಎಡವಿದ್ದೇವೆ ಎಂದು ಪ್ರಣಬ್ ಅಭಿಪ್ರಾಯಪಟ್ಟರು.

ದೇಶದ ಒಟ್ಟಾರೆ ಜೀವಿತ ವೆಚ್ಚದ ಸರಾಸರಿ ಏರಿಕೆಯಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ 3.4ರಷ್ಟಿದ್ದ ಒಟ್ಟಾರೆ ಸರಾಸರಿ ವೆಚ್ಚದ ಪ್ರಮಾಣ 68ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಂಠಿತವಾಗಿರುವುದು ಗಂಭೀರ ವಿಷಯ ಎಂದು ಪ್ರಣಬ್ ಎಚ್ಚರಿಕೆ ನೀಡಿದರು.

ಈ ಕಳಪೆ ಮಟ್ಟದ ಸೂಚ್ಯಂಕ ಅಭಿವೃದ್ಧಿ ಕುರಿತು ಸರ್ಕಾರಗಳ ಕಾರ್ಯವೈಖರಿ ಮತ್ತು ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ. ಸರ್ಕಾರ ಆರ್ಥಿಕ ಅಭಿವೃದ್ಧಿಯ ಜೊತೆ ಜೊತೆಗೆ ಸಾಮಾಜಿಕ ಅಭಿವೃದ್ಧಿ ಮತ್ತು ಜನರ ಮಾನಸಿಕ ಯೋಗಕ್ಷೇಮದ ಕುರಿತೂ ಗಮನ ಹರಿಸಬೇಕು. ಕೈಗಾರಿಕೋಧ್ಯಮ ಅಭಿವೃದ್ಧಿ ಕೂಡ ಮುಖ್ಯ ಎಂದು ಮಾಜಿ ರಾಷ್ಟ್ರಪತಿ ಸಲಹೆ ನೀಡಿದ್ದಾರೆ.