ಲೌಸಾನ್ನೆ/ನವದೆಹಲಿ (ಜು.11): ತೆರಿಗೆ ವಂಚಕರ ಸ್ವರ್ಗ ಎಂದೇ ಕುಖ್ಯಾತಿಗೀಡಾಗಿರುವ ಸ್ವಿಸ್‌ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರಿಗೆ ಈಗ ನಡುಕ ಆರಂಭವಾಗಿದೆ. 2018ರ ಜನವರಿಯಿಂದ ಜಾರಿಗೆ ಬಂದಿರುವ ‘ಆಟೋಮ್ಯಾಟಿಕ್‌ ಎಕ್ಸ್‌ಚೇಂಜ್‌ ಆಫ್‌ ಇನ್‌ಫಾರ್ಮೇಶನ್‌’ (ಮಾಹಿತಿಯ ಸ್ವಯಂ ವಿನಿಮಯ) ಒಪ್ಪಂದದ ಅನುಸಾರ ತನ್ನಲ್ಲಿ ಬ್ಯಾಂಕ್‌ ಖಾತೆ ಹೊಂದಿರುವ ಭಾರತೀಯರ ಮೊದಲ ಪಟ್ಟಿಯನ್ನು ಸೆ.30ರೊಳಗೆ ಸ್ವಿಜರ್ಲೆಂಡ್‌ ಭಾರತಕ್ಕೆ ಹಸ್ತಾಂತರ ಮಾಡಲಿದೆ. ಇದರಿಂದಾಗಿ ಸ್ವಿಸ್‌ ಬ್ಯಾಂಕುಗಳಲ್ಲಿ ಯಾರು ಎಷ್ಟುಕಪ್ಪು ಹಣ ಇಟ್ಟಿದ್ದಾರೆ ಎಂಬ ಅಮೂಲ್ಯ ಮಾಹಿತಿ ಕೇಂದ್ರ ಸರ್ಕಾರಕ್ಕೆ ಲಭ್ಯವಾಗಲಿದೆ.

2018ರ ಆರಂಭದಿಂದ ಈವರೆಗೆ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಖಾತೆಗಳ ಹಲವು ವಿವರಗಳನ್ನು ಭಾರತಕ್ಕೆ ಸ್ವಿಜರ್ಲೆಂಡ್‌ ಹಸ್ತಾಂತರ ಮಾಡಬೇಕಾಗಿದೆ. ಈ ವರ್ಷ 73 ದೇಶಗಳಿಗೆ ಮಾಹಿತಿ ಹಸ್ತಾಂತರ ನಡೆಯುತ್ತಿದ್ದು, ಅದರಲ್ಲಿ ಭಾರತವೂ ಒಂದಾಗಿದೆ. ಶಾಸನಸಭೆ ಹಾಗೂ ಸಂಸತ್ತಿನ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಆ ಮಾಹಿತಿಯನ್ನು ಭಾರತಕ್ಕೆ ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿರ ಅಲ್ಲದಿದ್ದರೂ ನೂರಾರು ಬ್ಯಾಂಕ್‌ ಖಾತೆಗಳು ಭಾರತಕ್ಕೆ ಮೊದಲ ಕಂತಿನಲ್ಲಿ ಹಸ್ತಾಂತರವಾಗುವ ನಿರೀಕ್ಷೆ ಇದೆ. ಈ ಪ್ರಕ್ರಿಯೆ ಭಾರತ ಹಾಗೂ ಸ್ವಿಜರ್ಲೆಂಡ್‌ ಬಾಂಧವ್ಯದಲ್ಲಿ ಮಹತ್ತರ ಮೈಲಿಗಲ್ಲು ಎಂದು ಸ್ವಿಜರ್ಲೆಂಡ್‌ನ ಹಣಕಾಸು ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಸ್ವಿಜರ್ಲೆಂಡ್‌ನಿಂದ ಸಿಗುವ ಭಾರತೀಯರ ಬ್ಯಾಂಕ್‌ ಖಾತೆ ವಿವರವನ್ನು ಆಯಾ ಭಾರತೀಯರ ತೆರಿಗೆ ರಿಟರ್ನ್‌ ಜತೆ ಕೇಂದ್ರ ಸರ್ಕಾರ ಹೋಲಿಕೆ ಮಾಡಿ ನೋಡಲಿದೆ. ತಪ್ಪು ಮಾಡಿರುವುದು ಕಂಡುಬಂದರೆ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಮಾಹಿತಿ ಹಸ್ತಾಂತರ ಏಕೆ?

ಸ್ವಿಸ್‌ ಬ್ಯಾಂಕುಗಳಲ್ಲಿ ಖಾತೆ ಹಾಗೂ ಹಣ ಹೊಂದಿರುವವರ ಮಾಹಿತಿ ಗೌಪ್ಯವಾಗಿರುತ್ತಿತ್ತು. ಆ ಮಾಹಿತಿಯನ್ನು ಪಡೆಯಲು ಭಾರತ ಹಾಗೂ ಸ್ವಿಜರ್ಲೆಂಡ್‌ ಒಪ್ಪಂದ ಮಾಡಿಕೊಂಡಿದ್ದವು. 2018ರ ನಂತರದ ಮಾಹಿತಿ ಈ ಒಪ್ಪಂದದಿಂದ ಭಾರತಕ್ಕೆ ಲಭ್ಯವಾಗಲಿದೆ. ಹಿಂದಿನ ವಿವರಗಳನ್ನು ನೀಡಲು ಸ್ವಿಜರ್ಲೆಂಡ್‌ ಒಪ್ಪಿಲ್ಲ.