ಟ್ರಂಪ್ ವ್ಯಾಪಾರ ಬೆದರಿಕೆ: ಮೋದಿ ಸರ್ಕಾರದ ಉತ್ತರ ಇದು!
ಭಾರತದೊಂದಿಗೆ ಪರೋಕ್ಷ ವಾಣಿಜ್ಯ ಸಮರಕ್ಕೆ ಮುಂದಾದ ಟ್ರಂಪ್| ಭಾರತದೊಂದಿಗಿನ ಆದ್ಯತೆಯ ಮೇರೆಯ ವಹಿವಾಟನ್ನು ಮರು ಪರಿಶೀಲನೆ| ಡೋನಾಲ್ಡ್ ಟ್ರಂಪ್ ಬೆದರಿಕೆಗೆ ಕ್ಯಾರೆ ಎನ್ನದ ಮೋದಿ ಸರ್ಕಾರ| ಆದ್ಯತೆಯ ವ್ಯಾಪಾರ ರದ್ದು ಮಾಡುವುದರಿಂದ ಭಾರತದ ಮೇಲೆ ಪರಿಣಾಮ ಬೀರದು| ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧವನ್ ಭರವಸೆ|
ನವದೆಹಲಿ(ಮಾ.05): ಭಾರತದೊಂದಿಗಿನ ಆದ್ಯತೆಯ ವ್ಯಾಪಾರ ನೀತಿಯನ್ನು ಮರುಪರಿಶೀಲನೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ತೆರಿಗೆ ರಹಿತ ಅಥವಾ ತೆರಿಗೆ ವಿನಾಯ್ತಿ ವ್ಯಾಪಾರಕ್ಕೆ ಭಾರತ ಸಹಕರಿಸುತ್ತಿಲ್ಲವಾದ್ದರಿಂದ, ಈ ಮೊದಲಿನ ಆದ್ಯತೆಯ ವ್ಯಾಪಾರ ನೀತಿಯನ್ನು ಕೈ ಬಿಡಲು ಚಿಂತನೆ ನಡೆಸಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಆದರೆ ಟ್ರಂಪ್ ಬೆದರಿಕೆಗೆ ಪ್ರತ್ಯುತ್ತರ ನೀಡಿರುವ ಭಾರತ, ಆದ್ಯತೆಯ ವ್ಯಾಪಾರ ರದ್ದುಗೊಂಡರೂ ಏನೂ ಪರಿಣಾಮ ಬೀರದು ಎಂದು ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧವನ್, ಭಾರತ ಈಗಾಗಲೇ ಅಮೆರಿಕದೊಂದಿಗ 5.6 ಬಿಲಿಯನ್ ಯುಎಸ್ ಡಾಲರ್‌ನಷ್ಟು ಸುಂಕ ರಹಿತ ರಫ್ತು ವ್ಯಾಪಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಅಮೆರಿಕ ಆದ್ಯತೆಯ ವ್ಯಾಪರ ರದ್ದುಗೊಳಿಸಿದರೂ ಸುಂಕ ರಹಿತ ರಫ್ತು ವ್ಯಾಪಾರಕ್ಕೆ ಯಾವದೇ ಧಕ್ಕೆ ಇಲ್ಲ ಎಂಬುದು ಭಾರತದ ವಾದವಾಗಿದೆ. ಅಲ್ಲದೇ ಟ್ರಂಪ್ ನಿರ್ಧಾರದಿಂದ ಕೇವಲ 190 ಮಿಲಿಯನ್ ಯುಎಸ್ ಡಾಲರ್ ಮೊತ್ತದ ವ್ಯಾಪಾರಕ್ಕೆ ಮಾತ್ರ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.