ವಾಷಿಂಗ್ಟನ್(ಮಾ.05): ಅಧ್ಯಕ್ಷೀಯ ಚುನಾವಣೆಗೂ ಮುನ್ನ 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಅಂತಾ ಮೋದಿ ಘೋಷ ವಾಕ್ಯ ಕಾಪಿ ಮಾಡಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದೊಂದಿಗೆ ಉತ್ತಮ ಸಂಬಂಧದ ವಾಗ್ದಾನ ನೀಡಿದ್ದರು.

ಆದರೆ ಅಧಿಕಾರಕ್ಕೇರಿದ ಬಳಿಕ ಇದು ಹೀಗೆ, ಅದು ಹಾಗೆ ಅಂತಾ ಹೇಳುತ್ತಾ ಭಾರತಕ್ಕೆ ಒಂದಿಲ್ಲೊಂದು ತೊಂದರೆ ಕೊಡುತ್ತಲೇ ಇದ್ದಾರೆ ಟ್ರಂಪ್, ಇತ್ತೀಚಿಗಷ್ಟೇ ಭಾರತದ ಅಧಿಕ ಸುಂಕಕ್ಕೆ ಬದಲಾಗಿ ಅಮೆರಿಕ ಕೂಡ ಹೆಚ್ಚಿನ ಸುಂಕ ವಿಧಿಸಲಿದೆ ಎಂದು ಟ್ರಂಪ್ ಹೇಳಿದ್ದರು.

ಇದೀಗ ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಭಾರತದೊಂದಿಗಿನ ಆದ್ಯತೆಯ ಮೇರೆಯ ವಹಿವಾಟನ್ನು ಮರು ಪರಿಶೀಲನೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

ಕಡಿಮೆ ತೆರಿಗೆ ಮತ್ತು ಅಮೆರಿಕ ಮಾರುಕಟ್ಟೆ ಸ್ನೇಹಿ ಪರಿಸರ ಸೃಷ್ಟಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಭಾರತ, ಇದೀಗ ಮಾತು ತಪ್ಪುತ್ತಿದೆ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.

ಅಮೆರಿಕದಿಂದ ಪೂರಕ ವಾಣಿಜ್ಯ ವಹಿವಾಟ ಬಯಸುವ ರಾಷ್ಟ್ರಗಳು ಅಮೆರಿಕಕ್ಕೆ ನೀಡಿದ್ದ ಭರವಸೆಯಂತೆ ತೆರಿಗೆ ರಹಿತ, ತೆರಿಗೆ ರಿಯಾಯ್ತಿ ವ್ಯಾಪಾರಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ ಭಾರತ ಮತ್ತು ಟರ್ಕಿ ಈ ವಿಚಾರದಲ್ಲಿ ಅಮೆರಿಕಕ್ಕೆ ಮೋಸ ಮಾಡಿವೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

ಹೀಗಾಗಿ ಭಾರತವೂ ಸೇರಿದಂತೆ ಹಲವು ದೇಶಗಳೊಂದಿಗಿನ ಆದ್ಯತೆ ಮೇರೆಯ ವಹಿವಾಟು ಮರು ಪರಿಶೀಲನೆ ನಡೆಸಲು ಅಮೆರಿಕ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಭಾರತದೊಂದಿಗೆ 2017ರಲ್ಲಿ ಅಮೆರಿಕದ ವ್ಯಾಪಾರ ಕೊರತೆ 27.3 ಶತಕೋಟಿ ಡಾಲರ್‌ಗಳಷ್ಟಿತ್ತು. ಅಮೆರಿಕದೊಂದಿಗಿನ ವ್ಯಾಪಾರದಲ್ಲಿ ಭಾರತವೇ ಜಗತ್ತಿನ ಅತಿದೊಡ್ಡ ಫಲಾನುಭವಿ ರಾಷ್ಟ್ರವಾಗಿದೆ ಎಂದು ಟ್ರಂಪ್ ವಾದಿಸಿದ್ದಾರೆ.