ಅತೀಹೆಚ್ಚು ಯುನಿಕಾರ್ನ್ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ;ಬೈಜುಸ್, ಫಾರ್ಮ್ಈಸಿ ಔಟ್
1 ಶತಕೋಟಿ ಡಾಲರ್ ಮೌಲ್ಯ ತಲುಪಿದ ಸ್ಟಾರ್ಟಪ್ ಗಳಿಗೆ ಯುನಿಕಾರ್ನ್ ಎನ್ನುತ್ತಾರೆ. ಭಾರತದಲ್ಲಿ ಒಟ್ಟು 67 ಯೂನಿಕಾರ್ನ್ ಗಳಿದ್ದು, ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ.
ನವದೆಹಲಿ (ಏ.9): ಜಾಗತಿಕ ಮಟ್ಟದಲ್ಲಿ ಭಾರತ ಅತೀಹೆಚ್ಚು ಯುನಿಕಾರ್ನ್ ಗಳನ್ನು ಒಂದಿರುವ ಮೂರನೇ ರಾಷ್ಟ್ರ ಎಂದು ಗುರುತಿಸಲ್ಪಟ್ಟಿದೆ. ಒಟ್ಟು 67 ಯುನಿಕಾರ್ನ್ ಗಳನ್ನು ಹೊಂದಿರುವ ಭಾರತಕ್ಕಿಂತ ಅಮೆರಿಕ ಹಾಗೂ ಚೀನಾ ಮುಂದಿದೆ. ಅಮೆರಿಕ 703 ಹಾಗೂ ಚೀನಾ 340 ಯುನಿಕಾರ್ನ್ ಗಳನ್ನು ಹೊಂದಿರುವ ಮೂಲಕ ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸ್ಥಾನಗಳಲ್ಲಿವೆ. ಈ ಎರಡೂ ರಾಷ್ಟ್ರಗಳು ಯುನಿಕಾರ್ನ್ ಗಳ ಸಂಖ್ಯೆಯಲ್ಲಿ ಭಾರತಕ್ಕಿಂತ ಸಾಕಷ್ಟು ಮುಂದಿವೆ. ಇನ್ನು 2023ನೇ ಸಾಲಿನ ಭಾರತದ ಯುನಿಕಾರ್ನ್ ಗಳ ಪಟ್ಟಿಯಿಂದ ಬೈಜುಸ್ ಹಾಗೂ ಫಾರ್ಮ್ ಈಸಿ ಹೊರಹಾಕಲ್ಪಟ್ಟಿವೆ ಎಂದು ಹುರುನ್ ರಿಸರ್ಚ್ ಇನ್ಸಿಟಿಟ್ಯೂಟ್ ವರದಿ ತಿಳಿಸಿದೆ. ಜಗತ್ತಿನಲ್ಲಿ ಒಟ್ಟು 1,453 ಯುನಿಕಾರ್ನ್ಗಳಿವೆ. ಕಳೆದ ವರ್ಷದಿಂದ ಪ್ರತಿ ಎರಡು ದಿನಗಳಿಗೊಮ್ಮೆ ಒಂದು ಯುನಿಕಾರ್ನ್ ಸೃಷ್ಟಿಯಾಗುತ್ತಿದೆ. ಟಿಕ್ ಟಾಕ್ ಮುಖ್ಯಸ್ಥ ಬೈಟೆಡ್ಯಾನ್ಸ್ ವಿಶ್ವದ ಅತ್ಯಂತ ಬೆಲೆಬಾಳುವ ಅಂದ್ರೆ 220 ಬಿಲಿಯನ್ ಡಾಲರ್ ಮೌಲ್ಯದ ಯುನಿಕಾರ್ನ್ ಮಾಲೀಕ ಎಂಬ ಪಟ್ಟವನ್ನು ಈ ಬಾರಿ ಕೂಡ ಉಳಿಸಿಕೊಂಡಿದ್ದಾರೆ. ಅಮೆರಿಕದಿಂದ ಟಿಕ್ ಟಾಕ್ ನಿರ್ಬಂಧಿಸುವ ಬೆದರಿಕೆ ಹೊರತಾಗಿಯೂ ಟಿಕ್ ಟಾಕ್ ಉಳಿದ ಯುನಿಕಾರ್ನ್ ಗಳಿಗಿಂತ ಹೆಚ್ಚಿನ ಮೌಲದಯ ಉಳಿಸಿಕೊಂಡಿದೆ.
ಇನ್ನು ವಿಶ್ವದ ಯುನಿಕಾರ್ನ್ ಗಳ ಒಟ್ಟು ಮೌಲ್ಯ 5 ಟ್ರಿಲಿಯನ್ ಡಾಲರ್ ತಲುಪಿದೆ. ಇದು ಜಪಾನ್ ಜಿಡಿಪಿಗೆ ಸರಿಸಮನಾಗಿದೆ. 2022 ಜನವರಿಯಿಂದ 2023 ಜನವರಿ ಹಾಗೂ 2023 ಜನವರಿ-2024 ಜನವರಿ ತನಕದ ಅಂಕಿಅಂಶಗಳನ್ನು ಹೋಲಿಸಿದರೆ ಒಪನ್ ಎಐ (OpenAI) ಮೌಲ್ಯದಲ್ಲಿ ವೇಗದ ಏರಿಕೆ ಕಂಡುಬಂದಿದೆ. ಇದರ ಮೌಲ್ಯಕ್ಕೆ $80 ಬಿಲಿಯನ್ ಸೇರ್ಪಡೆಯಾಗಿದೆ. ಇದರ ಬೆನ್ನಲ್ಲೇ ಸ್ಪೇಸ್ ಎಕ್ಸ್ ಮೌಲ್ಯದಲ್ಲಿ ಕೂಡ ಏರಿಕೆಯಾಗಿದೆ. ಇದರ ಮೌಲ್ಯಕ್ಕೆ 43 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ.
ಭಾರತದ ರೈತ ಕುಟುಂಬದಲ್ಲಿ ಹುಟ್ಟಿದ ಈತ ಇಂದು ಅಮೆರಿಕದ ಎರಡು ಕಂಪನಿಗಳ ಮಾಲೀಕ; ಈತನ ಆಸ್ತಿ ಎಷ್ಟು ಗೊತ್ತಾ?
'ಭಾರತದ ಸ್ಟಾರ್ಟ್ ಅಪ್ ವ್ಯವಸ್ಥೆ ನಿಧಾನಗೊಂಡಿದೆ. ಇತ್ತೀಚೆಗೆ ಷೇರು ಮಾರುಕಟ್ಟೆ ದಾಖಲೆಯ ಏರಿಕೆ ಕಂಡಿದ್ದರೂ ಸ್ಟಾರ್ಟ್ ಅಪ್ ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹೂಡಿಕೆ ಬಾರದಿರೋದೆ ಇದಕ್ಕೆ ಪ್ರಮುಖ ಕಾರಣ. ಇನ್ನೊಂದು ಪ್ರಮುಖ ಕಾರಣ ಭಾರತ ಇತರ ಯಾವುದೇ ರಾಷ್ಟ್ರಗಳಿಗಿಂತ ಹೆಚ್ಚಿನ ವಿದೇಶಗಳಲ್ಲಿ ಯುನಿಕಾರ್ನ್ ಗಳನ್ನು ಸ್ಥಾಪಿಸುತ್ತಿದೆ. ಭಾರತದಲ್ಲಿ 67 ಯುನಿಕಾರ್ನ್ ಗಳಿದ್ದರೆ, ಭಾರತದ ಹೊರಗೆ 109 ಯುನಿಕಾರ್ನ್ಗಳನ್ನು ಹೊಂದಿರೋದು ಕೂಡ ಸ್ಟಾರ್ಟ್ ಅಪ್ ವ್ಯವಸ್ಥೆ ವೇಗ ತಗ್ಗಲು ಕಾರಣ' ಎಂದು ಹುರುನ್ ಇಂಡಿಯಾ ಸ್ಥಾಪಕ ಹಾಗೂ ಮುಖ್ಯ ಸಂಶೋಧಕ ಅನಸ್ ರೆಹಮಾನ್ ಜುನೈಡ್ ತಿಳಿಸಿದ್ದಾರೆ.
ಭಾರತದ ಹೊರಗೆ ಸ್ಥಾಪಿಸಲ್ಪಟ್ಟಿರುವ ಯುನಿಕಾರ್ನ್ ಗಳಲ್ಲಿ ಬಹುತೇಕ ಅಮೆರಿಕದಲ್ಲಿವೆ. ಅಮೆರಿಕದಲ್ಲಿ ಭಾರತದ 95 ಯುನಿಕಾರ್ನ್ ಗಳಿವೆ. ಇನ್ನು ಇಂಗ್ಲೆಂಡ್ ನಲ್ಲಿ ನಾಲ್ಕು, ಸಿಂಗಾಪುರದಲ್ಲಿ ಮೂರು ಹಾಗೂ ಜರ್ಮನಿಯಲ್ಲಿ ಎರಡು ಯುನಿಕಾರ್ನ್ ಗಳಿವೆ. ಇನ್ನು ಭಾರತದ ಮೊದಲ ಎಐ ಯುನಿಕಾರ್ನ್ ಕೃತ್ರಿಮ್ ಪ್ರಗತಿಯ ಹಾದಿಯಲ್ಲಿದೆ. ಎಐ ಯುನಿಕಾರ್ನ್ ಗಳ ಸಂಖ್ಯೆಯಲ್ಲಿ ಕೂಡ ಅಮೆರಿಕ ಹಾಗೂ ಚೀನಾ ಮುಂದಿವೆ. ಅಮೆರಿಕದಲ್ಲಿ 60 ಹಾಗೂ ಚೀನಾದಲ್ಲಿ 37 ಎಐ ಯುನಿಕಾರ್ನ್ ಗಳಿವೆ.
ಮುಂಬೈ ಮೂಲದ ಯುನಿಕಾರ್ನ್ ಮೇಲೆ ಐಟಿ ದಾಳಿ: 224 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ
ಇನ್ನು ಜಾಗತಿಕ ಮಟ್ಟದಲ್ಲಿ 430 ಯುನಿಕಾರ್ನ್ ಗಳ ಮೌಲ್ಯದಲ್ಲಿ ಹೆಚ್ಚಳ ಕಂಡು ಬಂದಿದೆ. ಅವುಗಳಲ್ಲಿ 171 ಹೊಸ ಸಂಸ್ಥೆಗಳಾಗಿವೆ. ಇನ್ನು 170 ಯುನಿಕಾರ್ನ್ ಗಳ ಮೌಲ್ಯದಲ್ಲಿ ಇಳಿಕೆಯಾಗಿದೆ. ಅದರಲ್ಲಿ 42 ಅನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಏಕೆಂದರೆ ಈ ಸಂಸ್ಥೆಗಳ ಮೌಲ್ಯ ಈಗ 1 ಬಿಲಿಯನ್ ಡಾಲರ್ ಗಿಂತ ಕೆಳಗಿದೆ.