ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ,ಇದು ಮೇಕ್ ಇನ್ ಇಂಡಿಯಾದ ಫಲಶ್ರುತಿ!
ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನ ಗಳಿಸಲು ಮೇಕ್ ಇನ್ ಇಂಡಿಯಾ ಕಾರ್ಯಕ್ರಮವೇ ಕಾರಣ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ವರದಿ ತಿಳಿಸಿದೆ.
ನವದೆಹಲಿ (ಆ.17): ಭಾರತ ಈಗ ವಿಶ್ವದ ಎರಡನೇ ಅತೀದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದು ವರದಿಯೊಂದು ತಿಳಿಸಿದೆ. 2014-2022ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ದೇಶದಲ್ಲಿ ಉತ್ಪಾದಿಸಿದ 2 ಬಿಲಿಯನ್ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡಿದೆ. ಜಾಗತಿಕ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ವರದಿ ಈ ಮಾಹಿತಿ ನೀಡಿದ್ದು, ಮೊಬೈಲ್ ಫೋನ್ ಶಿಪ್ ಮೆಂಟ್ ನಲ್ಲಿ ಭಾರತ ಶೇ.23ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸಿದೆ. ದೇಶದೊಳಗೆ ಮೊಬೈಲ್ ಫೋನ್ ಗಳಿಗೆ ಬೇಡಿಕೆ ಹೆಚ್ಚಿರೋದು, ಡಿಜಿಟಲ್ ಸಾಕ್ಷರತೆಯಲ್ಲಿ ಏರಿಕೆ ಹಾಗೂ ಸರ್ಕಾರದ ಬೆಂಬಲ ಈ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಭಾರತ ವಿಶ್ವದ ಎರಡನೇ ಅತೀದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರದ ಸ್ಥಾನಕ್ಕೇರಿದೆ. ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಯೋಜನೆಗಳು ದೇಶೀಯವಾಗಿ ಮೊಬೈಲ್ ಫೋನ್ ಉತ್ಪಾದನೆ ಹೆಚ್ಚಳಕ್ಕೆ ನೆರವು ನೀಡಿವೆ.
ಮೇಕ್ ಇನ್ ಇಂಡಿಯಾ, ಪೇಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೋಗ್ರಾಂ (ಪಿಎಂಪಿ), ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ ಐ) ಹಾಗೂ ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೂಲಕ ಸರ್ಕಾರ ಸ್ಥಳೀಯ ಉತ್ಪಾದಕರಿಗೆ ಉತ್ತೇಜನ ನೀಡಿದೆ. ಈ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ದೇಶೀಯವಾಗಿ ಮೊಬೈಲ್ ಫೋನ್ ಉತ್ಪಾದನೆ ಹೆಚ್ಚಳಕ್ಕೆ ನೆರವು ನೀಡಿವೆ.
ಬೆಂಗಳೂರಲ್ಲಿ ಜಿ20 - ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ: 30 ಸ್ಟಾರ್ಟಪ್‌ಗಳಿಗೆ ಗೌರವ
ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚುತ್ತಿರುವ ದೇಶೀಯ ಬೇಡಿಕೆಗಳನ್ನು ಪೂರೈಸಲು ಮೊಬೈಲ್ ಫೋನ್ ಸ್ಥಳೀಯ ಉತ್ಪಾದಕರು ಉದ್ಯಮವನ್ನು ಇನ್ನಷ್ಟು ವಿಸ್ತರಿಸಿದ್ದಾರೆ ಎಂದು ಕೌಂಟರ್ ಪಾಯಿಂಟ್ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ. 2022ರಲ್ಲಿ ಭಾರತದಿಂದ ಶಿಪ್ ಮೆಂಟ್ಸ್ ಮಾಡುತ್ತಿದ್ದ ಶೇ.98ರಷ್ಟು ಮೊಬೈಲ್ ಫೋನ್ ಗಳು ಸ್ಥಳೀಯವಾಗಿ ಸಿದ್ಧಗೊಂಡಿವೆ. ಇದು ದೊಡ್ಡ ಮಟ್ಟದ ಏರಿಕೆ ಎಂದೇ ಹೇಳಬಹುದು. ಪ್ರಸಕ್ತ ಕೇಂದ್ರ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ದೇಶೀಯ ಮೊಬೈಲ್ ಫೋನ್ ಗಳ ಉತ್ಪಾದನೆ ಕೇವಲ ಶೇ.19ರಷ್ಟಿತ್ತು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆಗೆ ಸಂಬಂಧಿಸಿದ ವ್ಯವಸ್ಥೆ ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಪರಿಣಾಮ ಕಂಪನಿಗಳು ಮೊಬೈಲ್ ಫೋನ್ ಗಳು ಹಾಗೂ ಅವುಗಳ ಬಿಡಿಭಾಗಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿವೆ. ಈ ಟ್ರೆಂಡ್ ಹೂಡಿಕೆ ಹೆಚ್ಚಳ, ಉದ್ಯೋಗಾವಕಾಶಗಳು ಹಾಗೂ ಕೈಗಾರಿಕೆಯ ಸಮಗ್ರ ಅಭಿವೃದ್ಧಿಗೆ ಕಾರಣವಾಗಿದೆ. ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಭಾರತ ಸರ್ಕಾರ ಈಗ ದೇಶವನ್ನು 'ಸೆಮಿಕಂಡಕ್ಟರ್ ಉತ್ಪಾದನೆ ಹಾಗೂ ರಫ್ತು ಹಬ್' ಆಗಿ ರೂಪಿಸಲು ಪಣ ತೊಟ್ಟಿದೆ ಎಂದು ಪಾಠಕ್ ತಿಳಿಸಿದ್ದಾರೆ.
ಇನ್ನು ಸ್ಮಾರ್ಟ್ ಫೋನ್ ಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಈ ಮೂಲಕ ಭಾರತ ನಗರ ಹಾಗೂ ಗ್ರಾಮೀಣ ಡಿಜಿಟಲ್ ವ್ಯತ್ಯಾಸದ ನಡುವೆ ಸೇತುವೆ ನಿರ್ಮಿಸಲು ಪ್ರಯತ್ನಿಸುತ್ತಿದೆ ಹಾಗೂ ಈ ಬೆಳವಣಿಗೆ ಭಾರತವನ್ನು ಮೊಬೈಲ್ ಫೋನ್ ರಫ್ತು ಕೇಂದ್ರವನ್ನಾಗಿ ರೂಪಿಸಿದೆ ಎಂಬ ಅಭಿಪ್ರಾಯವನ್ನು ಕೂಡ ಪಾಠಕ್ ವ್ಯಕ್ತಪಡಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಫೇಸ್ಡ್ ಮ್ಯಾನುಫ್ಯಾಕ್ಚರ್ ಪ್ರೋಗ್ರಾಂ ಮಾದರಿಯ ಕ್ರಮಗಳು ಹಾಗೂ ಪೂರ್ಣ ಪ್ರಮಾಣದಲ್ಲಿ ಜೋಡಣೆಗೊಂಡಿರುವ ಮೊಬೈಲ್ ಹಾಗೂ ಪ್ರಮುಖ ಸಾಧನಗಳ ಮೇಲಿನ ಆಮದು ಸುಂಕವನ್ನು ನಿಧಾನವಾಗಿ ಹೆಚ್ಚಳ ಮಾಡಿರೋದು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಿದೆ ಎಂದು ಕೌಂಟರ್ ಪಾಯಿಂಟ್ ಹಿರಿಯ ವಿಶ್ಲೇಷಕ ಪ್ರಾಚಿರ್ ಸಿಂಗ್ ತಿಳಿಸಿದ್ದಾರೆ.
ಹಸಿರು ಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಲ್ಲಿ ಭಾರತ ಯಶಸ್ವಿ; 14 ವರ್ಷಗಳಲ್ಲಿ ಶೇ.33ರಷ್ಟು ಇಳಿಕೆ
ಇನ್ನು ಆತ್ಮ ನಿರ್ಭರ್ ಭಾರತ್ ಆಂದೋಲನದಡಿಯ್ಲಿ ಪರಿಚಯಿಸಿದ ಉತ್ಪಾದನೆ ಜೋಡಿತ ಪ್ರೋತ್ಸಾಹಧನ (PLI) ಯೋಜನೆ ಮೊಬೈಲ್ ಫೋನ್ ಉತ್ಪಾದನೆ ಸೇರಿದಂತೆ 14 ವಲಯಗಳಿಗೆ ವಿಸ್ತರಿಸಲ್ಪಟ್ಟಿರೋದು ಕೂಡ ಬೆಳವಣಿಗೆಯನ್ನು ಇನ್ನಷ್ಟು ಉತ್ತೇಜಿಸಿದೆ. ಈ ಎಲ್ಲ ಕ್ರಮಗಳು ಭಾರತದ ರಫ್ತಿನಲ್ಲಿ ಹೆಚ್ಚಳವಾಗಲು ಕಾರಣವಾಗಿವೆ.