ನವದೆಹಲಿ (ಡಿ. 14): ‘ಆರ್ಥಿಕ ಸುಧಾರಣೆಗೆ ಕೈಗೊಂಡ ಕ್ರಮಗಳು ಫಲ ನೀಡುತ್ತಿವೆ. 3.38 ಲಕ್ಷ ಕೋಟಿ ರು. ಬಜೆಟ್‌ ವೆಚ್ಚದ ಪೈಕಿ ಈಗಾಗಲೇ ಶೇ.66ರಷ್ಟುಹಣವನ್ನು ಬಳಕೆ ಮಾಡಲಾಗಿದೆ. ದಾಖಲೆಯ ವಿದೇಶೀ ನೇರ ಬಂಡವಾಳ ಹರಿದುಬಂದಿದೆ’ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

ದೇಶದಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಸಾಗಿದ ವರದಿಗಳು ಹಾಗೂ ಜಿಡಿಪಿ ಬೆಳವಣಿಗೆ ದರ ಶೇ.4.5ಕ್ಕೆ ಕುಸಿದ ಬೆನ್ನಲ್ಲೇ ಸರ್ಕಾರವು ತಾನು ಕೈಗೊಂಡ ಕ್ರಮಗಳ ಬಗ್ಗೆ ಮತ್ತೊಮ್ಮೆ ಅಂಕಿ-ಅಂಶಗಳನ್ನು ನೀಡಿದೆ.

ಇದು ವಿತ್ತ ಸಚಿವೆಯ ತಾಕತ್ತು! ನಿರ್ಮಲಾ ವಿಶ್ವದ 34 ನೇ ಪ್ರಭಾವಿ ಮಹಿಳೆ

ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಈ ಮಾಹಿತಿಗಳನ್ನು ನೀಡಿದರು.

ಭಾರತಕ್ಕೆ 2018-19ನೇ ಸಾಲಿನಲ್ಲಿ 31 ಶತಕೋಟಿ ಡಾಲರ್‌ ಬಂಡವಾಳ ಹರಿದುಬಂದಿತ್ತು. ಆದರೆ ಈ ವಿತ್ತೀಯ ವರ್ಷದ ಮೊದಲಾರ್ಧದಲ್ಲಿ 35 ಶತಕೋಟಿ ಡಾಲರ್‌ ವಿದೇಶೀ ನೇರ ಬಂಡವಾಳ ಹರಿದುಬಂದಿದೆ. ಇದು ಒಂದು ದಾಖಲೆ. ಭಾರತವನ್ನು ವಿದೇಶೀ ಹೂಡಿಕೆದಾರರು ಹೇಗೆ ನೋಡುತ್ತಿದ್ದಾರೆ ಎಂಬುದರ ಉತ್ತಮ ಸಂಕೇತವಿದು ಎಂದು ಸುಬ್ರಮಣಿಯನ್‌ ಹೇಳಿದರು.

ಹೌಸಿಂಗ್‌ ಫೈನಾನ್ಸ್‌ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 4.47 ಲಕ್ಷ ಕೋಟಿ ರು. ಬಿಡುಗಡೆ ಮಾಡಲಾಗಿದೆ. ಸಾಲ ಖಾತರಿ ಯೋಜನೆಯಡಿ 7,657 ಕೋಟಿ ರು.ನ 17 ಪ್ರಸ್ತಾವಗಳಿಗೆ ಅಂಗೀಕಾರ ನೀಡಲಾಗಿದೆ ಎಂದರು.

ಸಂಕಷ್ಟದಲ್ಲಿ ಇನ್ಫೋಸಿಸ್: ಕಾನೂನು ಹೋರಾಟದ ಅನಿವಾರ್ಯತೆ!

ರೈಲ್ವೆ ಹಾಗೂ ರಸ್ತೆ ಸಚಿವಾಲಯಗಳು 2.46 ಲಕ್ಷ ಕೋಟಿ ರು. ಯೋಜನೆ ಕೈಗೊಂಡಿವೆ. 70 ಸಾವಿರ ಕೋಟಿ ರು. ಮೌಲ್ಯದ ರೆಪೋ ಸಂಯೋಜಿತ 8 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಸರ್ಕಾರಿ ಬ್ಯಾಂಕ್‌ಗಳಿಗೆ 60,314 ಕೋಟಿ ರು. ಬಂಡವಾಳ ನೀಡಲಾಗಿದೆ. ಕಾರ್ಪೋರೆಟ್‌ಗಳಿಗೆ ಬ್ಯಾಂಕ್‌ಗಳು 2.2 ಲಕ್ಷ ಕೋಟಿ ರು. ಹಾಗೂ ಸಣ್ಣ ಉದ್ದಿಮೆಗಳಿಗೆ 72,985 ಕೋಟಿ ರು. ಸಾಲ ನೀಡಲಾಗಿದೆ ಎಂದು ಅವರು ವಿವರಿಸಿದರು.

ಜಿಎಸ್‌ಟಿ ದರ ಏರಿಕೆ ಇಲ್ಲ?

‘ಜಿಎಸ್‌ಟಿ ದರ ಏರಲಿದೆ ಎಂದು ವಿತ್ತ ಸಚಿವಾಲಯವನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಕಡೆ ಚರ್ಚೆ ನಡೆಯುತ್ತಿದೆ’ ಎಂದು ಇದೇ ಸುದ್ದಿಗೋಷ್ಠಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ವ್ಯಂಗ್ಯವಾಡಿದರು.

‘ಆದರೆ ಜಿಎಸ್‌ಟಿ ದರವನ್ನು ಏರಿಸುವುದಿಲ್ಲ’ ಎಂದು ನೇರವಾಗಿ ಹೇಳದ ಅವರು, ‘ನಮ್ಮ ಸಚಿವಾಲಯವು ಈ ಬಗ್ಗೆ ಇನ್ನೂ ಯೋಚನೆ ಮಾಡಬೇಕಿದೆ’ ಎಂದಷ್ಟೇ ಹೇಳಿದರು. ಜಿಎಸ್‌ಟಿ ಸಭೆ ಡಿಸೆಂಬರ್‌ 18ರಂದು ನಡೆಯಬೇಕಿದೆ.