ಕೇಂದ್ರ ಸರ್ಕಾರವು ಹೊಸ ಬ್ಯಾಗೇಜ್ ರೂಲ್ಸ್ 2026 ಅನ್ನು ಜಾರಿಗೆ ತಂದಿದ್ದು, ವಿದೇಶದಿಂದ ಬರುವ ಭಾರತೀಯ ಪ್ರಯಾಣಿಕರಿಗೆ ಸುಂಕ ರಹಿತ ಮಿತಿಯನ್ನು ₹75,000ಕ್ಕೆ ಹೆಚ್ಚಿಸಿದೆ. ಮಹಿಳೆಯರು 40 ಗ್ರಾಂ ಮತ್ತು ಪುರುಷರು 20 ಗ್ರಾಂ ಚಿನ್ನಾಭರಣವನ್ನು ಸುಂಕವಿಲ್ಲದೆ ತರಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು: ಕೇಂದ್ರ ಸರ್ಕಾರವು ಇದೀಗ ಭಾರತಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ ಚಿನ್ನ ಸೇರಿದಂತೆ ಕೆಲವೊಂದು ಡ್ಯೂಟಿ ಫ್ರೀ ಮಾಡಿದೆ. ಬ್ಯಾಗೇಜ್ ರೂಲ್ಸ್‌ 2026 ಇದೇ ಫೆಬ್ರವರಿ 02ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಇದರ ಪ್ರಕಾರ ವಿಮಾನದ ಮೂಲಕ ಅಥವಾ ಸಮುದ್ರಯಾನದ ಮೂಲಕ ಬಂದಿಳಿಯುವ ಪ್ರಯಾಣಿಕರಿಗೆ ಕೆಲವೊಂದು ಉತ್ಫನ್ನಗಳಿಗೆ ಯಾವುದೇ ಡ್ಯೂಟಿ ಫೀ ನೀಡದೇ ತಮ್ಮ ಮನೆಗೆ ಕೊಂಡೊಯ್ಯಬಹುದಾಗಿದೆ.

ಭಾರತೀಯ ನಿವಾಸಿ, ಭಾರತೀಯ ಮೂಲದ ಪ್ರವಾಸಿಗ ಅಥವಾ ಟೂರಿಸ್ಟ್‌ ವೀಸಾ ಹೊರತುಪಡಿಸಿ, ಸೂಕ್ತ ವೀಸಾ ಹೊಂದಿದ ವಿದೇಶಿಗ ಸುಮಾರು 75,000 ರುಪಾಯಿ ಮೌಲ್ಯದ ಉತ್ಪನ್ನಗಳನ್ನು ಯಾವುದೇ ಸುಂಕ ಪಾವತಿಸದೇ ಭಾರತದೊಳಗೆ ತರಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇದರ ಮಿತಿ 50,000 ರುಪಾಯಿ ಇತ್ತು. ಆದರೆ ಇದೀಗ ಹೊಸ ಬ್ಯಾಗೇಜ್‌ ರೂಲ್ಸ್ ಅನ್ವಯ 25,000 ರುಪಾಯಿ ಹೆಚ್ಚಿಸಲಾಗಿದೆ.

ಈ ನಿಯಮಗಳು ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಮಿತಿಯನ್ನು ಸಹ ನಿಗದಿಪಡಿಸಿವೆ. ಭಾರತಕ್ಕೆ ವಾಯು ಅಥವಾ ಸಮುದ್ರದ ಮೂಲಕ ಆಗಮಿಸುವ ವಿದೇಶಿ ಪ್ರವಾಸಿಗರಿಗೆ 25,000 ರೂ.ವರೆಗಿನ ವಸ್ತುಗಳನ್ನು ಸುಂಕ ರಹಿತವಾಗಿ ಸಾಗಿಸಲು ಅವಕಾಶವಿರುತ್ತದೆ, ಆದರೆ ಆ ವಸ್ತುಗಳನ್ನು ವ್ಯಕ್ತಿಯ ಮೇಲೆ ಅಥವಾ ಜೊತೆಯಲ್ಲಿರುವ ಸಾಮಾನುಗಳಲ್ಲಿ ಸಾಗಿಸಿದರೆ ಮಾತ್ರ ಈ ಅವಕಾಶ ವಿರುತ್ತದೆ. ಈ ನಿಯಮಗಳು 2016 ರ ಬ್ಯಾಗೇಜ್ ನಿಯಮಗಳನ್ನು ಬದಲಾಯಿಸಿ, ಫೆಬ್ರವರಿ 1 ರ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಅಧಿಸೂಚನೆ ಹೊರಡಿಸಿದೆ.

ಸುಂಕ ರಹಿತವಾಗಿ ವಿದೇಶಗಳಿಂದ ಎಷ್ಟು ಚಿನ್ನ ಖರೀದಿಸಿ ತರಬಹುದು?

ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದ ನಿವಾಸಿ ಅಥವಾ ಪ್ರವಾಸಿಗರು ಭಾರತಕ್ಕೆ ಹಿಂದಿರುಗಿದಾಗ, ಮಹಿಳಾ ಪ್ರಯಾಣಿಕರು ತಂದಿದ್ದರೆ ನಲವತ್ತು ಗ್ರಾಂ ತೂಕದವರೆಗಿನ ಆಭರಣಗಳನ್ನು ಅಥವಾ ಪುರುಷ ಪ್ರಯಾಣಿಕರು ನಿಜವಾದ ಸಾಮಾನುಗಳಲ್ಲಿ ತಂದಿದ್ದರೆ ಇಪ್ಪತ್ತು ಗ್ರಾಂ ತೂಕದವರೆಗಿನ ಆಭರಣಗಳನ್ನು ಸುಂಕ ರಹಿತವಾಗಿ ಭಾರತಕ್ಕೆ ತರಲು ಅವಕಾಶ ಒದಗಿಸಲಾಗಿದೆ ಎಂದು ಸಿಬಿಐಸಿ ತಿಳಿಸಿದೆ. ಇದರರ್ಥ ನೀವು ಭಾರತೀಯ ನಿವಾಸಿಯಾಗಿದ್ದರೆ ಅಥವಾ ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರಾಗಿದ್ದರೆ, ನೀವು ಕಸ್ಟಮ್ಸ್ ಸುಂಕವನ್ನು ಪಾವತಿಸದೆ ಕೆಲವು ಆಭರಣಗಳನ್ನು ನಿಮ್ಮೊಂದಿಗೆ ತರಬಹುದು. ಅಂದರೆ ಒಬ್ಬ ಮಹಿಳಾ ಪ್ರಯಾಣಿಕರು 40 ಗ್ರಾಂ ಮತ್ತು ಪುರುಷ ಪ್ರಯಾಣಿಕರು 20 ಗ್ರಾಂ ಆಭರಣಗಳನ್ನು ತರಬಹುದು.

ಆಭರಣವು ಮಾರಾಟದ ಉದ್ದೇಶದಿಂದ ಸುಂಕರಹಿತವಾಗಿ ತರಲು ಅವಕಾಶವಿಲ್ಲ

ನೀವು ವಿದೇಶದಿಂದ ತರುವ ಆಭರಣವು ವೈಯುಕ್ತಿಕ ಬಳಕೆಯ ಭಾಗವಾಗಿರಬೇಕು. ಮಾರಾಟದ ಉದ್ದೇಶಕ್ಕೆ ತರಲು ಅವಕಾಶವಿಲ್ಲ. ಇನ್ನು ಸಿಬ್ಬಂದಿ ಸದಸ್ಯರನ್ನು ಹೊರತುಪಡಿಸಿ, ಹದಿನೆಂಟು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಯಾಣಿಕರಿಗೆ, ಪ್ರಾಮಾಣಿಕ ಸಾಮಾನುಗಳಲ್ಲಿ ಸುಂಕವಿಲ್ಲದೆ ನೋಟ್‌ಪ್ಯಾಡ್ ಸೇರಿದಂತೆ ಒಂದು ಹೊಸ ಲ್ಯಾಪ್‌ಟಾಪ್ ಅನ್ನು ಸುಂಕ ರಹಿತವಾಗಿ ಭಾರತಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.