ಪಿಂಚಣಿ ಪಡೆಯುತ್ತಿರೋರು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು; ಅದು ಹೇಗೆ? ಇಲ್ಲಿದೆ ಮಾಹಿತಿ
ವೇತನ ಪಡೆಯೋರು ಮಾತ್ರವಲ್ಲ, ಪಿಂಚಣಿ ಪಡೆಯುತ್ತಿರೋರು ಕೂಡ ಐಟಿಆರ್ ಸಲ್ಲಿಕೆ ಮಾಡಬೇಕು. ಆದಾಯ ತೆರಿಗೆ ಇಲಾಖೆ ಪಿಂಚಣಿಯಿಂದ ಬರುವ ಆದಾಯಕ್ಕೂ ತೆರಿಗೆ ವಿಧಿಸುತ್ತದೆ.
Business Desk: ತೆರಿಗೆ ಸಂಬಂಧಿ ಕೆಲಸಗಳನ್ನು ಈ ತಿಂಗಳಲ್ಲಿ ಚುರುಕುಗೊಳಿಸೋದು ಅಗತ್ಯ. ಏಕೆಂದರೆ ಇದು ಪ್ರಸಕ್ತ ಹಣಕಾಸು ಸಾಲಿನ ಕೊನೆಯ ತಿಂಗಳು. ವೇತನ ಪಡೆಯೋರು ಮಾತ್ರವಲ್ಲ ಪಿಂಚಣಿ ಪಡೆಯೋರು ಕೂಡ ತೆರಿಗೆ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ. ಏಕೆಂದರೆ ನೀವು ಉದ್ಯೋಗದಿಂದ ನಿವೃತ್ತಿ ಹೊಂದಿದ್ದರೂ ನೀವು ಪಡೆಯುತ್ತಿರುವ ಪಿಂಚಣಿಗೆ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆ ಪಿಂಚಣಿಯನ್ನು ವೇತನದಿಂದ ಬಂದ ಆದಾಯ ಎಂದು ಪರಿಗಣಿಸಿ ತೆರಿಗೆ ವಿಧಿಸುತ್ತದೆ. ತೆರಿಗೆ ವಿಧಿಸುವ ಉದ್ದೇಶದಿಂದ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಾಗೂ 80 ವರ್ಷದೊಳಗಿನ ವ್ಯಕ್ತಿಯನ್ನು ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. ಇನ್ನು 80 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಯನ್ನು ಸೂಪರ್ ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ.
ಯಾರು ತೆರಿಗೆ ಪಾವತಿಸಬೇಕು?
ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ 3ಲಕ್ಷ ರೂ. ತನಕ ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆದಿದ್ದರು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ ಆದಾಯ 2.5ಲಕ್ಷ ರೂ.ಗಿಂತ ಕಡಿಮೆ ಇರೋರು ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆಯುತ್ತಾರೆ.
Income Tax Return 2024:ಎಚ್ ಆರ್ ಎ ವಿನಾಯ್ತಿ ಕ್ಲೇಮ್ ಮಾಡೋ ಮುನ್ನ ಈ 5 ವಿಚಾರಗಳನ್ನು ಗಮನಿಸಿ
ವಿವಿಧ ವಿಧದ ಪಿಂಚಣಿ:
ಸರ್ಕಾರಿ ಪಿಂಚಣಿ: ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಡೆಯುವ ಪಿಂಚಣಿ. ಇದಕ್ಕೆ ಆದಾಯ ತೆರಿಗೆ ರಿಟರ್ನ್ಸ್ 'ವೇತನ' ವರ್ಗದ ಅಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಕುಟುಂಬ ಪಿಂಚಣಿ: ಮೃತಪಟ್ಟ ಸರ್ಕಾರಿ ನೌಕರನ ವಾರಸುದಾರರು ಪಡೆಯುವ ಪಿಂಚಣಿ. ಐಟಿಆರ್ ನಲ್ಲಿ 'ಇತರ ಮೂಲಗಳಿಂದ ಬಂದ ಆದಾಯ' ಸೆಕ್ಷನ್ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ಸ್ಲ್ಯಾಬ್ ದರದ ಆಧಾರದಲ್ಲಿ ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಖಾಸಗಿ ವಲಯದ ಪಿಂಚಣಿ: ಖಾಸಗಿ ಕಂಪನಿಗಳಿಂದ ಪಡೆದ ಪಿಂಚಣಿಯನ್ನು ಐಟಿಆರ್ ನಲ್ಲಿ 'ವೇತನದಿಂದ ಬಂದ ಆದಾಯ' ಶೀರ್ಷಿಕೆಯಡಿಯಲ್ಲಿ ನಮೂದಿಸಬೇಕಾಗುತ್ತದೆ. ಪಿಂಚಣಿ ಆದಾಯದಿಂದ ಉದ್ಯೋಗದಾತರು ಟಿಡಿಎಸ್ ಕಡಿತಗೊಳಿಸುತ್ತಾರೆ.
ಐಟಿಆರ್ ಸಲ್ಲಿಕೆ ಹೇಗೆ?
ಪಿಂಚಣಿ ಆದಾಯಕ್ಕೆ ಐಟಿಆರ್ ಸಲ್ಲಿಕೆ ಮಾಡಲು ಹೀಗೆ ಮಾಡಿ:
-ನಿಮ್ಮ ಆದಾಯಕ್ಕೆ ಅನ್ವಯಿಸುವಂತೆ ಅರ್ಜಿ ನಮೂನೆ 16 ಅಥವಾ 16A ಬಳಸಿ. ಆನ್ ಲೈನ್ ನಲ್ಲಿ ನಿಮ್ಮ ರಿಟರ್ನ್ಸ್ ಫೈಲ್ ಮಾಡಲು incometax.gov.in ವೆಬ್ ಸೈಟ್ ಗೆ ಭೇಟಿ ನೀಡಿ.
-ಐಟಿಆರ್ ಪೋರ್ಟಲ್ ಗೆ ಲಾಗಿನ್ ಆಗಿ. ಆ ಬಳಿಕ ನಿಮ್ಮ ಪಿಂಚಣಿ ಹಾಗೂ ಇತರ ಆದಾಯದ ಮೂಲಗಳನ್ನು ಆಧರಿಸಿ ನಿಮ್ಮ ಆದಾಯ ತೆರಿಗೆಯನ್ನು ಲೆಕ್ಕ ಹಾಕಿ.
-ಅರ್ಜಿ ನಮೂನೆ 26AS ಬಳಸಿ ಟಿಡಿಎಸ್ ಕಡಿತ ಹಾಗೂ ನಿವ್ವಳ ತೆರಿಗೆ ಪಾವತಿಯನ್ನು ಹೊಂದಿಕೆ ಮಾಡಿ.
-ಐಟಿಆರ್ ಅರ್ಜಿಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಅಂತಿಮ ದಿನಾಂಕದೊಳಗೆ ನಿಮ್ಮ ತೆರಿಗೆ ರಿಟರ್ನ್ಸ್ ಫೈಲ್ ಮಾಡಿ.
Income Tax Tips: ಐಟಿಆರ್ ಸಲ್ಲಿಕೆಗೂ ಮುನ್ನ ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್
ತೆರಿಗೆ ಪ್ರಯೋಜನಗಳೇನು?
ಪಿಂಚಣಿದಾರರು ಸೆಕ್ಷನ್ 80C,80CCC,80CCD ಅಡಿಯಲ್ಲಿ ಪ್ರಾವಿಡೆಂಟ್ ಫಂಡ್, ಲೈಫ್ ಇನ್ಯುರೆನ್ಸ್ ಪ್ರೀಮಿಯಂ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಹಾಗೂ ಎಲ್ಐಸಿಯ ವರ್ಷಾಶನ ಯೋಜನೆಯಲ್ಲಿ ಮಾಡಿದ ಹೂಡಿಕೆಗೆ ಹಳೆಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದು. ಈ ಸೆಕ್ಷನ್ ಗಳ ಅಡಿಯಲ್ಲಿ ಒಟ್ಟು ಕಡಿತದ ಮಿತಿ 1,50,000ರೂ. ಆದರೆ, ಪಿಂಚಣಿದಾರ ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಬಂದರೆ ಆಗ ಈ ವಿನಾಯ್ತಿಗಳು ಸಿಗೋದಿಲ್ಲ.