ITRನಲ್ಲಿ ಸಮರ್ಪಕ ಮಾಹಿತಿ ದಾಖಲಿಸದ ತೆರಿಗೆದಾರರು ತಕ್ಷಣ ಪ್ರತಿಕ್ರಿಯಿಸಿ: ಐಟಿ ಇಲಾಖೆ ಮನವಿ
ಕೆಲವು ತೆರಿಗೆದಾರರು ಐಟಿಆರ್ ನಲ್ಲಿ ನಮೂದಿಸಿರುವ ಮಾಹಿತಿಗಳು ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಅವರ ಹಣಕಾಸಿನ ವಹಿವಾಟಿನ ಬಗ್ಗೆ ನೀಡಿರುವ ಮಾಹಿತಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದಿರುವ ಆದಾಯ ತೆರಿಗೆ ಇಲಾಖೆ, ತಕ್ಷಣ ಸರಿಪಡಿಸುವಂತೆ ಮನವಿ ಮಾಡಿದೆ.
ನವದೆಹಲಿ (ಡಿ.12):ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ (ಐಟಿಆರ್) ನಮೂದಿಸಿರುವ ಮಾಹಿತಿಗಳು ಹಾಗೂ ವರದಿ ನೀಡುವ ಸಂಸ್ಥೆಗಳು ನೀಡಿರುವ ವರದಿಗಳ ನಡುವೆ ಭಿನ್ನತೆ ಕಂಡುಬಂದಿರುವ ಕೆಲವು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸಲಹೆ ಕಳುಹಿಸಿದೆ. ತೆರಿಗೆದಾರನ ಆದಾಯದ ಬಗ್ಗೆ ಮಾಹಿತಿ ನೀಡುವ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಷೇರು ಮಾರುಕಟ್ಟೆ ಪ್ಲೇಯರ್ಸ್, ಮ್ಯೂಚುವಲ್ ಫಂಡ್ಸ್ ಹಾಗೂ ಆಸ್ತಿ ನೋಂದಣಿಗಾರರು ಸಲ್ಲಿಕೆ ಮಾಡಿರುವ ವರದಿಗಳಲ್ಲಿನ ಮಾಹಿತಿಗಳು ಐಟಿಆರ್ ನಲ್ಲಿ ನಮೂದಿಸಿರುವ ಅಂಶಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. ಅಂದರೆ ತೆರಿಗೆದಾರರ ಆದಾಯ ಹಾಗೂ ವೆಚ್ಚಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಂಥ ತೆರಿಗೆದಾರರಿಗೆ ಸಲಹೆ ಕೂಡ ಕಳುಹಿಸಿದೆ. ಇನ್ನು ಈ ಬಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಆದಾಯ ತೆರಿಗೆ ಇಲಾಖೆ, ಇದು ಎಲ್ಲ ತೆರಿಗೆದಾರರಿಗೆ ಕಳುಹಿಸಿರುವ ನೋಟಿಸ್ ಅಲ್ಲ. ಬದಲಿಗೆ ಕೆಲವರಿಗೆ ಮಾತ್ರ ಕಳುಹಿಸಿರುವ ಸಲಹೆಯಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಮಾಡಿರುವ ಇತ್ತೀಚಿನ ಟ್ವಿಟ್ ನಲ್ಲಿ ಹೀಗೆ ಹೇಳಿದೆ: 'ಇದು ಎಲ್ಲ ತೆರಿಗೆದಾರರಿಗೂ ಕಳುಹಿಸಿರುವ ನೋಟಿಸ್ ಅಲ್ಲ. ಬದಲಿಗೆ ಇದೊಂದು ಸಲಹೆಯಾಗಿದ್ದು, ಐಟಿಆರ್ ಹಾಗೂ ವರದಿ ನೀಡುವ ಸಂಸ್ಥೆಗಳಿಂದ ಸ್ವೀಕರಿಸಿದ ಮಾಹಿತಿಗಳು ಹೊಂದಾಣಿಕೆಯಾಗದ ಪ್ರಕರಣಗಳಲ್ಲಿ ಮಾತ್ರ ಕಳುಹಿಸಿರುವ ಸಲಹೆಯಾಗಿದೆ.'
ಆದಾಯ ತೆರಿಗೆ ಇಲಾಖೆ ಈ ಸಲಹೆ ನೀಡಿರುವ ಉದ್ದೇಶ ತೆರಿಗೆದಾರರಿಗೆ ಆನ್ ಲೈನ್ ನಲ್ಲಿ ಫೀಡ್ ಬ್ಯಾಕ್ ನೀಡಲು ಅವಕಾಶ ಕಲ್ಪಿಸೋದು. ಐಟಿಡಿ ಪೋರ್ಟಲ್ ನಲ್ಲಿ ಈ ಬಗ್ಗೆ ತೆರಿಗೆದಾರರು ಸ್ಪಷ್ಟನೆ ನೀಡಬಹುದು. ಹಾಗೆಯೇ ಅಗತ್ಯ ಬಿದ್ದರೆ ಈಗಾಗಲೇ ಫೈಲ್ ಮಾಡಿರುವ ರಿಟರ್ನ್ಸ್ ಪರಿಷ್ಕರಿಸಬಹುದು. ಅಥವಾ ಈ ತನಕ ರಿಟರ್ನ್ಸ್ ಫೈಲ್ ಮಾಡದಿದ್ದರೆ ಅದನ್ನು ಫೈಲ್ ಮಾಡಬಹುದು.
ಇನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆಯಿಂದ ಯಾರಿಗಾದರೂ ತೆರಿಗೆ ಸಲಹೆ ಬಂದಿದ್ದರೆ ಅವರು ಪ್ರಾಮಾಣಿಕತೆಯಿಂದ ವ್ಯವಹರಿಸಬೇಕು. ಹಾಗೆಯೇ ಅವರು ಪರಿಷ್ಕೃತ ಅಥವಾ ವಿಳಂಬ ರಿಟರ್ನ್ಸ್ ಸಲ್ಲಿಕೆ ಮಾಡಬೇಕು. ಇದರ ಹೊರತಾಗಿ ತೆರಿಗೆದಾರರು ಪೋರ್ಟಲ್ ನಲ್ಲಿನ ಭಿನ್ನತೆಗಳನ್ನು ಸರಿಪಡಿಸಬೇಕು.
2023–24ಮೇ ಮೌಲ್ಯಮಾಪನ ವರ್ಷದ ವಿಳಂಬ ಐಟಿಆರ್ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಅಂತಿಮ ಗಡುವಾದ ಜುಲೈ 31ರೊಳಗೆ ಫೈಲ್ ಮಾಡದವರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬೇಕು. ಇನ್ನು ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು.
ವಿಳಂಬ ಐಟಿಆರ್ ಸಲ್ಲಿಕೆ ಹೇಗೆ?
ಈ ಪ್ರಕ್ರಿಯೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಮಾದರಿಯಲ್ಲೇ ಇರುತ್ತದೆ. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ವಿಳಂಬ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು. ತೆರಿಗೆದಾರರು ಆದಾಯ ತೆರಿಗೆ ಇಲಾಖೆ ಇ- ಫೈಲ್ಲಿಂಗ್ ಪೋರ್ಟಲ್ ನಲ್ಲಿ ತಮ್ಮ ಖಾತೆಗೆ ಲಾಗಿನ್ ಆಗಿ ಸಲ್ಲಿಕೆ ಮಾಡಬಹುದು.
ಪರಿಷ್ಕೃತ ರಿಟರ್ನ್
ಕಳೆದ ವರ್ಷಕ್ಕೆ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಸೆಕ್ಷನ್ 80ಸಿ ಅಡಿಯಲ್ಲಿ ನೀವು ತಪ್ಪಾಗಿ ತೆರಿಗೆ ಕಡಿತ ಕ್ಲೈಮ್ ಮಾಡಿದ್ರೆ ಆಗ ನೀವು ರಿಟರ್ನ್ ಪರಿಷ್ಕರಿಸಬಹುದು. ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಯಾವುದೇ ಮಿತಿಯಿಲ್ಲ, ಎಷ್ಟು ಬಾರಿ ಬೇಕಾದ್ರೂ ಸಲ್ಲಿಕೆ ಮಾಡಬಹುದು. ಆದರೆ, ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು ಅನ್ನೋದು ನೆನಪಿರಲಿ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಈಗಿನಿಂದಲೇ ಅವಕಾಶ: ಫಾರಂ ಬಿಡುಗಡೆ ಮಾಡಿದ ತೆರಿಗೆ ಇಲಾಖೆ
ಡಿ.31ರ ಡೆಡ್ ಲೈನ್ ಮಿಸ್ ಆದ್ರೆ ಏನಾಗುತ್ತೆ?
ಈ ಡೆಡ್ ಲೈನ್ ಮಿಸ್ ಆದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ತೆರಿಗೆದಾರರಿಗೆ ಇನ್ನೊಂದು ಅವಕಾಶವಿದೆ. ಇದನ್ನು ಅಪ್ಡೇಟೆಡ್ ರಿಟರ್ನ್ಸ್ (ITR-U) ಫೈಲಿಂಗ್ ಎಂದು ಕರೆಯಲಾಗುತ್ತದೆ. ಇದನ್ನು ಸಂಬಂಧಪಟ್ಟ ಮೌಲ್ಯಮಾಪನ ವರ್ಷ ಮುಗಿದ ಬಳಿಕವಷ್ಟೇ ಫೈಲ್ ಮಾಡಬಹುದು.