ಸಾಮಾನ್ಯವಾಗಿ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುತ್ತಿದ್ದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಫಾರಂಗಳನ್ನು ಆದಾಯ ತೆರಿಗೆ ಇಲಾಖೆ ಈ ಬಾರಿ ಡಿಸೆಂಬರ್‌ನಲ್ಲೇ ಬಿಡುಗಡೆ ಮಾಡಿದೆ.

ನವದೆಹಲಿ: ಸಾಮಾನ್ಯವಾಗಿ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುತ್ತಿದ್ದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಫಾರಂಗಳನ್ನು ಆದಾಯ ತೆರಿಗೆ ಇಲಾಖೆ ಈ ಬಾರಿ ಡಿಸೆಂಬರ್‌ನಲ್ಲೇ ಬಿಡುಗಡೆ ಮಾಡಿದೆ. ಅದರೊಂದಿಗೆ 2023-24ನೇ ಸಾಲಿನಲ್ಲಿ ಗಳಿಸಿದ ಆದಾಯಕ್ಕೆ ಸಣ್ಣ ತೆರಿಗೆ ಪಾವತಿದಾರರು ಹಾಗೂ ಸಣ್ಣ ಕಂಪನಿಗಳು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಲು ಆರಂಭಿಸಬಹುದಾಗಿದೆ.

ಐಟಿಆರ್‌ ಫಾರಂ 1 (ಸಹಜ್‌) ಹಾಗೂ 4 (ಸುಗಮ್‌) ಅನ್ನು ಆದಾಯ ತೆರಿಗೆ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಇವು ದೊಡ್ಡ ಸಂಖ್ಯೆಯಲ್ಲಿ ತೆರಿಗೆ ಪಾವತಿಸುವ ಸಣ್ಣ ಹಾಗೂ ಮಧ್ಯಮ ಗಾತ್ರದ ತೆರಿಗೆದಾರರನ್ನು ಗುರಿಯಾಗಿಸಿಕೊಂಡು ಬಿಡುಗಡೆ ಮಾಡಿರುವ ಫಾರಂಗಳಾಗಿವೆ. ಫಾರಂ 1 ಸಹಜ್‌ನಲ್ಲಿ 50 ಲಕ್ಷ ರು. ಒಳಗಿನ ಆದಾಯವಿರುವ ವೇತನದಾರರು, ಒಂದು ಮನೆಯನ್ನು ಬಾಡಿಗೆಗೆ ನೀಡಿರುವವರು ಹಾಗೂ ಕೃಷಿ ಆದಾಯವಿರುವವರು ಆದಾಯ ತೆರಿಗೆ ಸಲ್ಲಿಸಬಹುದು. ಫಾರಂ 4 ಸುಗಮ್‌ನಲ್ಲಿ 50 ಲಕ್ಷ ರು. ಒಳಗಿನ ಆದಾಯವಿರುವ ಉದ್ಯಮಿಗಳು ತೆರಿಗೆ ಸಲ್ಲಿಸಬಹುದು.

ವಿವೋ ಅಕ್ರಮ ವರ್ಗಾವಣೆ ಕೇಸ್‌: ಮತ್ತೆ ಮೂವರ ಬಂಧನ

ನವದೆಹಲಿ: ಚೀನೀ ಮೊಬೈಲ್‌ ಫೋನ್‌ ಕಂಪನಿ ವಿವೋ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೆ ಮೂವರನ್ನು ಬಂಧಿಸಿದೆ. ಆದರೆ ಬಂಧಿತರ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಲಾವಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಹರಿ ಓಂ ರೈ, ಚೀನಾ ಪ್ರಜೆ ಗ್ವಾಗ್ವೇನ್‌, ಚಾರ್ಟರ್ಡ್‌ ಅಕೌಂಟಂಟ್‌ ನಿತಿನ್ ಗರ್ಗ್‌ ಹಾಗೂ ರಾಜನ್ ಮಲಿಕ್‌ ಎಂಬುವರನ್ನು ಇ.ಡಿ. ಬಂಧಿಸಿತ್ತು. ಇವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಮತ್ತೆ ಮೂವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಿದೆ ಎಂದು ಮೂಲಗಳು ತಿಳಿಸಿದೆ.