ಗುವಹಾಟಿ(ಆ.18): 2017-18ನೇ ಸಾಲಿನಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದ ಆದಾಯ ತೆರಿಗೆ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇದುವರೆಗೂ ಒಟ್ಟು 10.03 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಹೇಳಿದೆ. 

ಆದಾಯ ತೆರಿಗೆ ಇಲಾಖೆಯ ಆಡಳಿತಾಧಿಕಾರಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಸಿಬಿಡಿಟಿ ಸದಸ್ಯ ಎಸ್‌. ಭಟ್ಟಸಾಲಿ, 2017-18ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ 6.92 ಕೋಟಿ ಐಟಿ ರಿಟರ್ನ್ಸ್‌ ದಾಖಲಾಗಿವೆ. 2016-17ರಲ್ಲಿ ಕೇವಲ 1.31 ಕೋಟಿ ಜನರಷ್ಟೇ ರಿಟರ್ನ್ಸ್‌ ದಾಖಲಿಸಿದ್ದರು ಎಂದು ತಿಳಿಸಿದರು. 

ಪ್ರಸಕ್ತ ವರ್ಷ ತನ್ನ ಆದಾಯ ತೆರಿಗೆ ಜಾಲಕ್ಕೆ ಹೆಚ್ಚುವರಿಯಾಗಿ 1.25 ಕೋಟಿ ಹೊಸ ಐಟಿಆರ್‌ ದಾಖಲುದಾರರನ್ನು ಸೇರಿಸುವ ಗುರಿಯನ್ನು ಐ-ಟಿ ಇಲಾಖೆ ಹೊಂದಿದೆ ಎಂದು ಭಟ್ಟಸಾಲಿ ತಿಳಿಸಿದ್ದಾರೆ.